RESPONSIVE LEADERBOARD AD AREA
Film News

ಬರಲಿರುವ ಕ್ರಿಸ್ಮಸ್ ಹಬ್ಬದಲ್ಲಿ ‘D-53’ ಟೈಟಲ್ ಲಾಂಚ್…!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಲಿರುವ ತರುಣ್ ಸುಧೀರ್ ನಿರ್ದೇಶನದ ‘ಡಿ 53’ ಎಂಬ ವಿಶೇಷ ಹೆಸರಿನ ಚಿತ್ರಕ್ಕಾಗಿ ದೂರದ ಉತ್ತರ ಪ್ರದೇಶದಲ್ಲಿ ವಿಭಿನ್ನ ಲೊಕೇಶನ್ ಗಳ ಆಯ್ಕೆ ಪೂರ್ಣಗೊಂಡಿದೆ.

ಕಳೆದ ಎರಡು ವಾರಗಳಿಂದ ಚಿತ್ರತಂಡ ಉತ್ತರ ಪ್ರದೇಶದ ಉದ್ದಗಲಕ್ಕೂ ಓಡಾಡಿ ವಿಶಿಷ್ಟವಾದ ಲೊಕೇಶನ್ ಗಳನ್ನು ಹುಡುಕಿದ್ದು, ಇದೀಗ ಚಿತ್ರೀಕರಣದ ಸ್ಥಳಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಈ ಕುರಿತು ನಿರ್ದೇಶಕರು ಅಧಿಕೃತ ಮಾಹಿತಿಯನ್ನು ನೀಡಲಿದ್ದಾರೆ.

ಚಿತ್ರಕ್ಕೆ ‘ಡಿ 53’ ಎಂಬ ವಿಶೇಷ ಹೆಸರನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಅಧಿಕೃತವಾಗಿ ಈ ಬಗ್ಗೆ ಪ್ರಕಟಣೆ ಹೊರಬಿದ್ದಿಲ್ಲ. ಬರಲಿರುವ ಕ್ರಿಸ್ಮಸ್ ವೇಳೆಗೆ ಚಿತ್ರದ ಟೈಟಲ್ ಲಾಂಚ್  ಮಾಡಲಾಗುವುದೆಂದು ನಿರ್ಮಾಪಕರು ತಿಳಿಸಿದ್ದಾರೆ. ಇದು ‘ಡಿ ಬಾಸ್’ ನ 53ನೇ ಚಿತ್ರವಾಗಲಿದ್ದು, ಅದನ್ನು ಸಾಂಕೇತಿಕವಾಗಿ ‘ಡಿ 53’ ಎಂದು ಇಡಲಾಗುತ್ತದೆ ಎಂದು ಅವರ ಅಭಿಮಾನಿಗಳು ಊಹೆಗಳನ್ನು ಹುಟ್ಟು ಹಾಕುತ್ತಿದ್ದಾರೆ..!

ಈ ಮೊದಲು ತರುಣ್ ಸುಧೀರ್ ನಿರ್ದೇಶನದ ಮಲ್ಟಿ ಸ್ಟಾರರ್ ಚಿತ್ರ ‘ಚೌಕ’ ದಲ್ಲಿ ದರ್ಶನ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರ ಪಾತ್ರದ ಹೆಸರು ‘ರಾಬರ್ಟ್’ ಎಂದಿತ್ತು. ಅದೇ ಹೆಸರನ್ನು ಈ ಚಿತ್ರಕ್ಕೆ ಇಡುವ ಬಗ್ಗೆಯೂ ತರುಣ್ ಸುಧೀರ್ ಯೋಚಿಸಿದ್ದರಂತೆ. ಹಾಗಾಗಿ ಚಿತ್ರದ ಟೈಟಲ್ ಇನ್ನು ಇನ್ನೂ ಅಂತಿಮವಾಗಿಲ್ಲ.

ದರ್ಶನ್ 2019ರಲ್ಲಿ ಪೂರ್ಣ ಬ್ಯುಸಿಯಾಗಿದ್ದು, ಕೈತುಂಬ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡಿದ್ದಾರೆ. ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿದ್ಧವಾಗಿದ್ದು, ಅದರ ಹಿಂದೆಯೇ ‘ಯಜಮಾನ’ ಕೂಡ ಬರಲಿದೆ. ನಂತರ ‘ಒಡೆಯ’ನ ಆರ್ಭಟ. ಬಳಿಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ‘ಗಂಡುಗಲಿ ಮದಕರಿ ನಾಯಕ’. ಆ ಬಳಿಕವಷ್ಟೇ ‘ಡಿ 53’ ಸೆಟ್ಟೇರಲಿದೆ.

ತರುಣ್ ಸುಧೀರ್ ಈಗಾಗಲೇ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸವನ್ನು ಆರಂಭಿಸಿದ್ದು ಚಿತ್ರ ಬಹುತೇಕ 2019ರ ಮಧ್ಯಭಾಗದಲ್ಲಿ ಆರಂಭವಾಗಲಿದೆ. ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ. ಒಟ್ಟಿನಲ್ಲಿ 2019 ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವುದು ಖಚಿತ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top