RESPONSIVE LEADERBOARD AD AREA
Film News

ಐಎಎಸ್ ಅಧಿಕಾರಿಯ ಹೋರಾಟದ ಹಾದಿ ಈ ‘ಚಂಬಲ್’…!!

ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವ ‘ಚಂಬಲ್’ ಚಿತ್ರದಲ್ಲಿ ನಟಿಸುತ್ತಿರುವ ನೀನಾಸಂ ಸತೀಶ್, ಈ ಚಿತ್ರದ ಮೂಲಕ ಪ್ರೇಕ್ಷಕರು ಇದುವರೆಗೆ ತಾವು ನೋಡಿರದ ಸತೀಶ್ ಅವರನ್ನು ಕಾಣಲಿದ್ದಾರೆ ಎಂಬ ಆಶಯ ಹೊಂದಿದ್ದಾರೆ.

‘ಚಂಬಲ್’ ಚಿತ್ರ, ಒಬ್ಬ ಐಎಎಸ್ ಆಫೀಸರ್ ಅವರು ತನ್ನ ಕರ್ತವ್ಯವನ್ನು ಸೂಕ್ಷ್ಮವಾಗಿ ನಿರ್ವಹಿಸಿದ ಕುರಿತಾದ ಒಂದು ಚಿತ್ರ. ಇದರಲ್ಲಿ ಆಡಳಿತಶಾಹಿಯನ್ನು ಅಧಿಕಾರಿಯು ಹೇಗೆ ಎದುರಿಸಿ, ಚಕ್ರವ್ಯೂಹವನ್ನು ಬೇಧಿಸುತ್ತಾರೆ ಎನ್ನುವುದು ಈ ಚಿತ್ರದ ತಿರುಳು. ಕನ್ನಡದಲ್ಲಿ ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ ‘ಪೃಥ್ವಿ’ ಚಿತ್ರವನ್ನು ನಿರ್ದೇಶಿಸಿ, ಸೂಕ್ಷ್ಮ ವಿಷಯವನ್ನು ಪರಿಣಾಮಕಾರಿಯಾಗಿ ತೋರಿಸುವ ಮೂಲಕ ಯಶಸ್ಸು ಕಂಡಿದ್ದ ಜೇಕಬ್ ವರ್ಗೀಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

“ಯುವಕರು ತಾವು ಕೂಡ ಐಎಎಸ್ ಆಫೀಸರ್ ಆಗಬೇಕೆಂಬ ಕನಸು ಹೊತ್ತಿರುತ್ತಾರೆ. ಅಂತಹ ಯುವಜನರಿಗೆ ಈ ಚಿತ್ರವು ಸ್ಪೂರ್ತಿದಾಯಕವಾಗಲಿದೆ” ಎನ್ನುತ್ತಾರೆ ನೀನಾಸಂ ಸತೀಶ್

‘ಲೂಸಿಯಾ’ ದಿಂದ ನಾಯಕನಾಗಿ ಚಿತ್ರ ಜೀವನ ಪ್ರಾರಂಭಿಸಿದ ಸತೀಶ್, ತಮ್ಮ ಸಹಜ ಅಭಿನಯ ಮತ್ತು ಕಚಗುಳಿಯಿಡುವ ಸಹಜ ಸಂಭಾಷಣೆ ಯಿಂದಲೇ ಪಕ್ಕದ ಮನೆಯ ಹುಡುಗನೆನಿಸುವ ನಟ. ಆದರೆ ಈ ಚಿತ್ರದಲ್ಲಿ ಬೇರೆಯದೇ ರೀತಿಯ ಪಾತ್ರದಲ್ಲಿ ಅಭಿನಯಿಸಿದ್ದು, ಈಗಾಗಲೇ ‘ಚಂಬಲ್’ ಚಿತ್ರದ ಟ್ರೈಲರ್ ಗೆ ಅತ್ಯುತ್ತಮವಾದ ಪ್ರತಿಕ್ರಿಯೆ ಬಂದಿರುವ ಕುರಿತು ನೀನಾಸಂ ಸತೀಶ್ ಸಂತಸ ವ್ಯಕ್ತಪಡಿಸುತ್ತಾರೆ

ಖ್ಯಾತ ಐಎಎಸ್ ಆಫೀಸರ್ ದಿವಂಗತ ಡಿ ಕೆ ರವಿ ಅವರ ಕುರಿತಾದ ಚಿತ್ರ ಇದಾಗಿರಬಹುದೇ?! ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ರವಿ ಅವರು ಬಹಳ ಒಳ್ಳೆಯ ಐಎಎಸ್ ಅಧಿಕಾರಿ. ಅವರ ಒಳ್ಳೆಯ ಆಡಳಿತದ ಸ್ಪೂರ್ತಿಯನ್ನು ಪಡೆದಿದ್ದೇವೆಯೇ ಹೊರತು ಇದು ಪೂರ್ಣವಾಗಿ ಅವರ ಕಥೆಯಲ್ಲ. ಹಲವು ಒಳ್ಳೆಯ ಅಧಿಕಾರಿಗಳ ಜೀವನ ಸಂಘರ್ಷದ ಸ್ಫೂರ್ತಿ ಪಡೆದು ಈ ಚಿತ್ರವನ್ನು ಕಥೆಯನ್ನು ಸಿದ್ಧಪಡಿಸಲಾಗಿದೆ” ಎನ್ನುತ್ತಾರೆ ನೀನಾಸಂ ಸತೀಶ್.

“ಐಎಎಸ್ ಅಧಿಕಾರಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಉಂಟಾಗುವಂತಹ, ಕುತೂಹಲಕಾರಿ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ. ಚಿತ್ರವನ್ನು ನೋಡಿದ ಮೇಲೆ ಪ್ರೇಕ್ಷಕರಿಗೆ ಖಂಡಿತವಾಗಿ ವಿಭಿನ್ನವಾದ ಅನುಭವ ನೀಡಲಿದೆ. ನನ್ನ ಹಳೆಯ ಚಿತ್ರಗಳನ್ನು ನೆನಪಿಸಿಕೊಳ್ಳದೆ ಈ ಚಿತ್ರವನ್ನು ನೋಡಿದರೆ, ಅವರಿಗೆ ಚಿತ್ರ ವಿಶಿಷ್ಟ ಅನುಭವ ನೀಡುವುದಂತೂ ಸತ್ಯ” ಎನ್ನುತ್ತಾರೆ ನೀನಾಸಂ ಸತೀಶ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top