RESPONSIVE LEADERBOARD AD AREA
Film News

ಭರತ ಬಾಹುಬಲಿ ಕಡೆಯಿಂದ ಎಂಟರ್ಟೈನ್ಮೆಂಟ್ ಗ್ಯಾರಂಟಿ

ಟ್ರೈಲರ್ ಹಾಗೂ ಹಾಡುಗಳಿಂದ ನಿರೀಕ್ಷೆ ಮೂಡಿಸಿದ್ದ “ಶ್ರೀ ಭರತ ಬಾಹುಬಲಿ” ಬಿಡುಗಡೆ ಆಗಿದೆ. ಸಿನಿಮಾ ಪ್ರೇಕ್ಷಕರಿಗೆ ಕೊಡುತ್ತಿದ್ದ ಭರವಸೆಗೆ ತಕ್ಕ ಹಾಗೆ ಮೂಡಿಬಂದಿದೆಯಾ? ಬನ್ನಿ ನೋಡೋಣ..

ಕಥೆ

ಶ್ರವಣ ಬೆಳಗೊಳದ ಸಮೀಪದಲ್ಲೇ ಇರುವ ಹಳ್ಳಿಯೊಂದರಲ್ಲಿ ತಮ್ಮ ಕ್ವಾಟ್ಲೆ ಜೀವನದಿಂದ ಕುಖ್ಯಾತಿ ಪಡೆದಿರುವ ಭರತ – ಬಾಹುಬಲಿ ಶುದ್ಧಾನುಶುದ್ಧ ಹೋತ್ಲಾ ಗಿರಾಕಿಗಳು. ಇಸ್ಪೀಟು ಆಡ್ಕೊಂಡೂ, ಎಣ್ಣೆ ಹೊಡ್ಕೊಂಡು, ಹೆಣ್ಣು ಮಕ್ಕಳಿಗೆ ಲೈನ್ ಹಾಕಿಕೊಂಡು ಸುಖವಾಗಿದ್ದ ಇವರು ಅದೊಂದು ದಿನ ಬಾರಲ್ಲಿ ಸಿಕ್ಕ ಚೋಟುದ್ದದ ಸ್ನೇಹಿತನೊಬ್ಬನಿಗೆ ಮದುವೆ ಮಾಡಿಸಿ ಜೈಲು ಸೇರುತ್ತಾರೆ. ಲಂಡನ್ನಿಂದ ತನ್ನ ಹಿಂದಿನ ಜನ್ಮದ ನಿಗೂಢವನ್ನು ಅರಿಯಲು ಬರುವ ನಾಯಕಿ “ಶ್ರೀ” ತನ್ನ ಕೆಲಸಕ್ಕೆ ಇವರೇ ಸರಿ ಎಂದು ಎಣಿಸಿ ಭರತ ಬಾಹುಬಲಿಗೆ ಬೇಲ್ ಕೊಡಿಸಿ ಜೈಲ್ ನಿಂದ ಹೊರ ತರುತ್ತಾಳೆ. ಮೂವರೂ ಸೇರಿ ಶ್ರೀ ಹಿಂದಿನ ಜನ್ಮದ ರಹಸ್ಯವನ್ನು ಹೇಗೆ ಭೇದಿಸುತ್ತಾರೆ, ಈ ಪ್ರಯತ್ನದಲ್ಲಿ ಏನೇನೆಲ್ಲಾ ಆಗುತ್ತೆ ಅನ್ನೋದೇ ಸಿನಿಮಾದ ಸ್ಟೋರಿ.

ಅಭಿನಯ

ಮೊಟ್ಟಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಂಜು ಮಾಂಡವ್ಯ ಬಹಳ ಅಚ್ಚುಕಟ್ಟಾದ ಅಭಿನಯದ ಮೂಲಕ ಭರವಸೆ ಮೂಡಿಸುತ್ತಾರೆ. ನಾಯಕಿ ಸಾರಾ ಹರೀಶ್ ತೆರೆಯ ಮೇಲೆ ಮಾದಕವಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಪಾತ್ರಕ್ಕೆ ತಕ್ಕ ಅಭಿನಯವನ್ನೇ ನೀಡಿದ್ದಾರೆ. ಚಿಕ್ಕಣ್ಣ ಮಗದೊಮ್ಮೆ ನಗಿಸುವಲ್ಲಿ ಗೆದ್ದಿದ್ದಾರೆ. ಬಾಹುಬಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಚರಣ್ ರಾಜ್ ಪುತ್ರ ತೇಜ್ ಗಮನ ಸೆಳೆಯುತ್ತಾರೆ.

ತಾಂತ್ರಿಕತೆ

ಮೂಲತಃ ಸಂಭಾಷಣೆಕಾರರಾದ ಮಂಜು ಮಾಂಡವ್ಯ ಸಿನಿಮಾಗೆ ಒಳ್ಳೇ ಪಂಚ್ ಇರೋ ಸಂಭಾಷಣೆಗಳನ್ನೇ ಬರೆದಿದ್ದಾರೆ. ಅವರೇ ಬರೆದಿರುವ ಚಿತ್ರಕಥೆಯಲ್ಲಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತಲೇ ಹೋಗುವಂತಹ ಸರ್ಪ್ರೈಸ್ ಎಲಿಮೆಂಟ್ ಗಳಿವೆ. ಫರ್ವೇಜ಼್ ಅಹಮದ್ ಛಾಯಾಗ್ರಹಣದಲ್ಲಿ ಹಾಸನ, ಮೈಸೂರು, ಮಂಡ್ಯ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಮತ್ತಷ್ಟು ಅಂದವಾಗಿ ತೆರೆಯ ಮೇಲೆ ಮೂಡಿದೆ. ಸಿನಿಮಾದ ಪ್ರಮುಖ ಆಕರ್ಷಣೆ ಮಣಿಕಾಂತ್ ಕದ್ರಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ. ಸಿನಿಮಾ ಅಲ್ಲಲ್ಲಿ ವೇಗ ಕಳೆದುಕೊಳ್ಳುತ್ತೆ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಪ್ರಯೋಗ ನಡೆದಿದ್ದರೆ ಚೆನ್ನಾಗಿರುತ್ತಿತ್ತು.

ಕೊನೆಯದಾಗಿ

ಶ್ರೀ ಭರತ ಬಾಹುಬಲಿ ಚಿತ್ರ ಟೈಟಲ್ ನಿಂದ ಹಾಗೂ ಮಾಸ್ಟರ್ಪೀಸ್ ಖ್ಯಾತಿಯ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸುತ್ತಿರುವ ಸಿನಿಮಾ ಎಂಬ ಕಾರಣದಿಂದ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಈ ಟೈಟಲ್ ಕೇಳಿದ ಕೂಡಲೇ ಯಾವ ಕನ್ನಡಿಗನಿಗಾದರೂ ಜ್ಞಾಪಕ ಬರುವುದೇ ಶ್ರವಣ ಬೆಳಗೊಳದ ಬಾಹುಬಲಿ ಎಂದೂ ಕರೆಯಲ್ಪಡುವ ಗೊಮ್ಮಟೇಶ್ವರಸ್ವಾಮಿಯ ವಿಗ್ರಹ. ಸಿಂಹಾಸನದ ವಾರಸುದಾರಿಕೆಯ ಕುರಿತು ತನ್ನ ಅಣ್ಣನಾದ ಭರತನಿಂದ ಕೆಣಕಲ್ಪಟ್ಟು, ಬಾಹುಬಲಿಯು ಭರತನನ್ನು ಮೂರು ಬಗೆಯ ದೃಷ್ಟಿಯುದ್ಧ, ಜಲಯುದ್ದ, ಮಲ್ಲಯುದ್ಧಕ್ಕೆ ಕರೆಯುತ್ತಾನೆ. ಬಾಹುಬಲಿಯು ಕೊನೆಯಲ್ಲಿ ಯುದ್ಧಗಳಲ್ಲಿ ಗೆದ್ದರೂ, ಲೌಕಿಕ ಜಗತ್ತಿನ ಸಂಪತ್ತಿನ ಅಗಾಧತೆಯನ್ನೂ ವ್ಯರ್ಥತೆಯನ್ನೂ ಮನಗಂಡು ಸ್ವಂತ ಅಣ್ಣನ ವಿರುದ್ಧವೇ ಕತ್ತಿ ಮಸೆದು ನಿಲ್ಲಬೇಕಾದದ್ದನ್ನು ಕಂಡು ವ್ಯಥಿತನಾದನು. ಆಗ ಅವನು ತನ್ನ ರಾಜ್ಯವನ್ನು ಹಾಗೂ ಲೌಕಿಕ ಸುಖಭೋಗಗಳನ್ನು ಪರಿತ್ಯಾಗ ಮಾಡಿ ಧ್ಯಾನ ತಪಸ್ಸು ಮಾಡಿ ಗೊಮ್ಮಟೇಶ್ವರನಾದನು. ಈ ಕಥೆ ಸಿನಿಮಾದಲ್ಲಿ ಒಂದು ಪುಟ್ಟ ಭಾಗವಾಗಿ ಬಂದು ಹೋದರು ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತದೆ. ಹಾಸ್ಯ ಸಿನಿಮಾದಂತೆಯೇ ಕಂಡರೂ ಹೋಗುತ್ತಾ ಹೋಗುತ್ತಾ ಸಸ್ಪೆನ್ಸ್ ಸಿನಿಮಾವಾಗಿ ಬದಲಾಗುವ, ಕೊನೆಗೆ ಭಾವನಾತ್ಮಕವಾಗಿ ಮುಗಿಯುವ “ಶ್ರೀ ಭರತ ಬಾಹುಬಲಿ” ಆರಾಮಾಗಿ ಒಮ್ಮೆ ನೋಡಬಹುದಾದ ಸಿನಿಮಾ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top