RESPONSIVE LEADERBOARD AD AREA
Film News

ಅಮೆರಿಕಾ ರೋಡಲ್ಲಿ “ಬಬ್ರೂ”ವಾಹನದ ರೋಚಕ ಪ್ರಯಾಣ

ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಸುಮನ್‌ ನಗರ್‌ಕರ್‌ ಅವರು ನಿರ್ಮಾಪಕಿಯಾಗಿ ಬಡ್ತಿ ಪಡೆದುಕೊಂಡು “ಸುಮನ್‌ ನಗರ್‌ಕರ್‌ ಪ್ರೊಡಕ್ಷನ್ಸ್‌’ ಲಾಂಛನದಡಿಯಲ್ಲಿ ನಿರ್ಮಿಸಿರುವ “ಬಬ್ರೂ’ ಚಿತ್ರ ಟ್ರೈಲರ್ ಗಳ ಮೂಲಕ ಸಾಕಷ್ಟು ಭರವಸೆ ಮೂಡಿಸಿತ್ತು. ಸಂಪೂರ್ಣ ಚಿತ್ರೀಕರಣ ಅಮೆರಿಕಾದಲ್ಲೇ ನಡೆದಿದ್ದು, ಕನ್ನಡದ ಮತ್ತು ವಿದೇಶದ ಹಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಅನ್ನೋ ವಿಚಾರ ಎಲ್ಲರ ಗಮನ ಸೆಳೆದಿತ್ತು.

ಕತೆ

ಅಮೆರಿಕಾದಲ್ಲಿ ನಡೆಯುವ ಇಬ್ಬರು ಕನ್ನಡಿಗರ ಅನಿರೀಕ್ಷಿತ ಜರ್ನಿ ಬಬ್ರು ಹೆಸರಿನ ಕಾರಿನಲ್ಲಿ ಶುರುವಾಗುತ್ತದೆ. ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಹೋಗುತ್ತಿರುವ ಯುವಕ ಮತ್ತು ಕೌಟುಂಬಿಕ ಕೆಲಸದ ಮೇಲೆ ಪ್ರಯಾಣ ಹೊರಟಿರುವ ಮಧ್ಯವಯಸ್ಕ ಹೆಂಗಸು. ಇಬ್ಬರಿಗೂ ಅದು ಬಹಳ ಮುಖ್ಯವಾದ ಪ್ರಯಾಣ. ಇಬ್ಬರಿಗೂ ಆ ಪ್ರಯಾಣದಿಂದ ಸಾಧಿಸೋದು ಒಂದಿದೆ. ಅಮೆರಿಕ ರೋಡಿನಲ್ಲಿ ಹೀಗೆ ಮುಖ್ಯವಾದ ಪ್ರಯಾಣಕ್ಕೆ ‘ಬಬ್ರು’ ಹೆಸರಿನ ಕಾರಿನಲ್ಲಿ ಹೊರಟ ಇಬ್ಬರೂ ತಮ್ಮ ತಮ್ಮ ಗುರಿಯನ್ನು ತಲುಪುತ್ತಾರಾ? ಇಲ್ಲವಾ? ಜೊತೆಗೆ ಆ ಕಾರಿನ ಹಿಂದೆ ಒಂದು ದೊಡ್ಡ ದಂಡೇ ಬಿದ್ದಿದೆ. ಅದು ಏಕೆ, ಹೇಗೆ? ಅನ್ನೋದೇ ಚಿತ್ರದ ಸಾರ ಸರ್ವಸ್ವ.

ಅಭಿನಯ

ಸುಮನ್ ನಗರ್ಕರ್ ಅವರು ತಮ್ಮ ವಯಸ್ಸಿಗೆ ತಕ್ಕನಾದ ‘ಸನಾ’ ಪಾತ್ರದಲ್ಲಿ ಜೀವಿಸಿದ್ದಾರೆ. ಮೊದಲ ಚಿತ್ರದಲ್ಲಿ ನಟಿಸುತ್ತಿರುವ ಮಹಿ ಹಿರೇಮಠ್ ಅಚ್ಚುಕಟ್ಟಾದ ಅಭಿನಯದ ಮೂಲಕ ಭರವಸೆ ಮೂಡಿಸುತ್ತಾರೆ. ಉಳಿದಂತೆ ರೇ ತೋಸ್ತಾಡೊ, ಸನ್ನಿ ಮೋಜ, ಗಾನಭಟ್‌, ಪ್ರಕೃತಿ ಕಶ್ಯಪ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ತಾಂತ್ರಿಕತೆ

ರಚಿಸಿ ನಿರ್ದೇಶನ ಮಾಡಿರುವ ಸುಜಯ್ ರಾಮಯ್ಯ ಅವರು ಚಿತ್ರಕಥೆಯಲ್ಲಿ ಕಮರ್ಷಿಯಲ್ ಸಿನಿಮಾಗಳ ಆತುರವಿಲ್ಲ, ಸಾವಧಾನವಾಗಿ ತೆರೆದುಕೊಳ್ಳುವ ಪ್ರಯಾಣದ ಕತೆ ಹಂತ ಹಂತವಾಗಿ ಕುತೂಹಲ ಕಾಯ್ದುಕೊಂಡು ಹೋಗುತ್ತದೆ. ಹಾಲಿವುಡ್ಡಿನ ಕನ್ನಡ ಸಿನಿಮಾ ನೋಡಿದ ಅನುಭವ ಅಲ್ಲಲ್ಲಿ ದಕ್ಕುತ್ತದೆ. ಸುಮುಖ ಅವರ ಛಾಯಾಗ್ರಹಣ ಅಮೆರಿಕಾದ ನಗ್ನ ಸೌಂದರ್ಯವನ್ನು ಅದ್ಭುತವಾಗಿ ಸೆರೆ ಹಿಡಿದಿದೆ. ಡ್ರೋನ್ ಶಾಟ್ ಗಳಂತೂ ಕಣ್ಣಿಗೆ ಹಬ್ಬ. ವರುಣ್‌ ಶಾಸ್ತ್ರೀ ಬರೆದಿರುವ ಸಂಭಾಷಣೆಗಳಲಿ ನಾಟಕೀಯತೆ, ಪಂಚು-ಪಿಂಚುಗಳಿರದ ನೈಜವಾದ ಮಾತುಗಾರಿಕೆ ಇದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಬಹಳಷ್ಟು ಪ್ರಯೋಗಗಳನ್ನು ಮಾಡಿದ್ದು, ಅದ್ಭುತವಾದ ಸೌಂಡ್ ಡಿಸೈನ್ ನೊಂದಿಗೆ ಆ ಸಂಗೀತದ ತರಂಗಗಳು ಚಿತ್ರಮಂದಿರದಲ್ಲಿ ಕಿವಿಗಳಿಗೆ ಸೊಗಸಾದ ಅನುಭವ ನೀಡುತ್ತದೆ.

ಕೊನೆಯದಾಗಿ

ಗುರುದೇವ್ ನಾಗರಾಜ್ ಮತ್ತು ಸುಮನ್ ನಗರ್ಕರ್ ದಂಪತಿ ತಮ್ಮ ಅಮೆರಿಕದಲ್ಲಿ ನೆಲೆನಿಂತ ಕನ್ನಡಿಗ ಹಾಗೂ ವಿದೇಶಿ ಗೆಳೆಯರ ಬಳಗವನ್ನು ಕಟ್ಟಿಕೊಂಡು ರೂಪಿಸಿರುವ “ಬಬ್ರು” ಸಿನಿಮಾ ಪ್ರತಿಯೊಂದು ವಿಭಾಗದಲ್ಲೂ ಮೇಲ್ದರ್ಜೆಯನ್ನು ಕಾಯ್ದುಕೊಂಡಿದೆ. ಅಭಿನಯ, ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಶಬ್ದಗಳ ಬಳಕೆ ಹಾಗೂ ಕಥೆಯನ್ನು ಕಟ್ಟಿರುವ ರೀತಿ ಎಲ್ಲದರಲ್ಲೂ ಮೇಲ್ಪಂಕ್ತಿಯ ಪ್ರಯೋಗ ಮಾಡಲಾಗಿದೆ. ಚಿತ್ರದ ಕಥೆಯ ನಿಜವಾದ ಮುಖ ಅನಾವರಣಗೊಳ್ಳುವಂತಹ ಕೊನೆಯ 10 ನಿಮಿಷಗಳ ಆ ಟ್ವಿಸ್ಟ್ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡುತ್ತದೆ. ರೆಗ್ಯುಲರ್ ಸಿನಿಮಾಗಳಿಗಿಂತ ಬೇರೆಯದೇ ಅನುಭವ ನೀಡುವ ಬಬ್ರುಗೆ ಸಿಕ್ಕುವ ಪ್ರೋತ್ಸಾಹ ಕನ್ನಡ ಸಿನಿಮಾಗಳಲ್ಲಿ ಮತ್ತಷ್ಟು ಇಂತಹ ಒಳ್ಳೆಯ ಅಭಿರುಚಿಯ ಸೃಜನಶೀಲ ಪ್ರಯೋಗಕ್ಕೆ ನಾಂದಿಯಾದೀತು. ಈ ಬ್ಯೂಟಿಫುಲ್ ಜರ್ನಿ ಬೇಸ್ ಸಿನಿಮಾ ಒಮ್ಮೆ ನೀವೂ ನೋಡಿಬಿಡಿ.

NamCinema Rating – 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top