RESPONSIVE LEADERBOARD AD AREA
Film News

ವರ್ಷದ ಕೊನೆಯ ಶುಕ್ರವಾರಕ್ಕೆ ಶ್ರೀಮನ್ನಾರಾಯಣನ ಆಗಮನ ಫಿಕ್ಸ್

ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ “ಪೈಲ್ವಾನ್” ಚಿತ್ರದ ನಂತರ ಬರುತ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಅಂದರೆ ಅದು ರಕ್ಷಿತ್ ಶೆಟ್ಟಿ ಅವರ ಮಹತ್ವಾಕಾಂಕ್ಷೆಯ “ಅವನೇ ಶ್ರೀಮನ್ ನಾರಾಯಣ”. ಅಬ್ಬಾ ಆ ಟೈಟಲ್ ನಲ್ಲೇ ಶಬ್ದಗಳಲ್ಲಿ ಹೇಳಲು ಅಸಾಧ್ಯವಾದಂತಹ ಪವರ್ ಇದೆ. ಹೇಳಿ ಕೇಳಿ ಭಗವಾನ್ ವಿಷ್ಣುವಿನ ಹೆಸರು. ಕ್ಲಾಸ್ಗೆ ಕ್ಲಾಸ್, ಮಾಸ್ಗೆ ಮಾಸ್ ಅಪೀಲ್ ಇರೋ ಜಬರ್ದಸ್ತ್ ಟೈಟಲ್ ಇಟ್ಕೊಂಡು ರೂಪುಗೊಂಡಿರುವ “ಅವನೇ ಶ್ರೀಮನ್ನಾರಾಯಣ” ರಕ್ಷಿತ್ ಶೆಟ್ಟಿ ಅವರಿಗೆ ಒಂದು ಸಿನಿಮಾ ಅನ್ನುವುದಕ್ಕಿಂತ ತಪಸ್ಸು ಅಂದರೆ ತಪ್ಪಿಲ್ಲ.

ತಮ್ಮ ಗೆಳೆಯ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಸಕಲ ರೀತಿಯ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ, ತಮ್ಮದೇ ಗರಡಿಯಲ್ಲಿ ಪಳಗಿರುವ ಪ್ರತಿಭಾವಂತ ಹುಡುಗರ ದಂಡನ್ನೇ ಕಟ್ಟಿಕೊಂಡು, ಅದಕ್ಕೆ ಸಚಿನ್ ಬಿ ರವಿ ಅವರನ್ನು ನಿರ್ದೇಶಕನನ್ನಾಗಿ ಮಾಡಿ, ನಿರ್ಮಾಣದ ಹೊಣೆಯನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ಅವರೊಂದಿಗೆ ಸಮಾನವಾಗಿ ಹೊತ್ತು “ಶ್ರೀಮನ್ ನಾರಾಯಣ”ನನ್ನು ಬೆಳ್ಳಿ ತೆರೆಗೆ ತರುತ್ತಿದ್ದಾರೆ ರಕ್ಷಿತ್ ಶೆಟ್ಟಿ.

ಭಾರೀ ಬಜೆಟ್ನ ಚಿತ್ರ ಹಾಗೂ ದಾಖಲೆಯ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರೀಕರಣ ನಡೆದ ಚಿತ್ರ ಅನ್ನೋದರ ಜೊತೆಗೆ “ಶ್ರೀಮನ್ ನಾರಾಯಣ” ಈ ಪರಿ ಹೈಪ್ ಆಗೋದಕ್ಕೆ ಬಹಳಷ್ಟು ಕಾರಣಗಳಿವೆ. ಮೊದಲನೆಯದಾಗಿ ಇದು ಕಿರಿಕ್ ಪಾರ್ಟಿ ನಂತರ ಬರುತ್ತಿರುವ ರಕ್ಷಿತ್ ಶೆಟ್ಟಿಯವರ ಸಿನಿಮಾ. ಖುದ್ದು ರಕ್ಷಿತ್ ಶೆಟ್ಟಿ ಅವರೇ ರಚಿಸಿರುವ ಕಥೆ ಇರೋ ಅಂತಹ ಸಿನಿಮಾ. ಕರಂ ಚಾವ್ಲಾ, ಅಜನೀಶ್ ಲೋಕನಾಥ್, ಟಗರು ಖ್ಯಾತಿಯ ಚರಣ್ ರಾಜ್ ಅಂತಹ ಅಪ್ರತಿಮ ಪ್ರತಿಭಾವಂತ ಘಟಾನುಘಟಿಗಳು ದುಡಿದಿರುವ ಸಿನಿಮಾ. ಮೇಲಾಗಿ ರಕ್ಷಿತ್ ಶೆಟ್ಟಿ ಅವರ ಕಡೆಯಿಂದ ಬರುತ್ತಿರುವ ಪಕ್ಕಾ ಆಕ್ಷನ್ ಓರಿಯೆಂಟೆಡ್ ಸಬ್ಜೆಕ್ಟ್ ಇರೋ ಸಿನಿಮಾ. ಈ ಎಲ್ಲ ಕಾರಣಗಳಿಂದ “ಅವನೇ ಶ್ರೀಮನ್ನಾರಾಯಣ”ನ ಬೇಗನೇ ನೋಡಲೇಬೇಕು ಅಂತ ಕನ್ನಡ ಸಿನಿ ಪ್ರಿಯರಿಗೆ ಈಗಾಗಲೇ ಅನಿಸುವಂತೆ ಮಾಡಿರುವ ಸಿನಿಮಾ.

ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಹೀಗೆ ಕೆಲ ದಿನಗಳ ಹಿಂದೆ ಶೇರ್ ಮಾಡಿರುವ ಸಾಮಾಜಿಕ ಜಾಲತಾಣದ ಮಾಹಿತಿಯ ಅನುಗುಣವಾಗಿ ನೋಡಿದಾಗ, ಚಿತ್ರದಲ್ಲಿ ಇಡೀ ಭಾರತದ ಎಲ್ಲಾ ಭಾಷೆಯ, ಎಲ್ಲಾ ವಯೋಮಾನದ, ಎಲ್ಲಾ ರೀತಿಯ ಅಭಿರುಚಿಯುಳ್ಳ ಪ್ರೇಕ್ಷಕರನ್ನು ತಲುಪುವಂತಹ ಕಥೆ ಇದೆ. ಮುಖ್ಯವಾಗಿ ಇಲ್ಲಿಯವರೆಗೆ ಯಾರು ಯಾರು ಚಿತ್ರದ ತುಣುಕುಗಳನ್ನು ನೋಡಿದ್ದಾರೋ ಅವರೆಲ್ಲ “ವಾವ್” ಎಂದು ಉದ್ಗಾರ ಎತ್ತಿದ್ದಾರಂತೆ, ಆ ಪರಿ ಇದೆಯಂತೆ ಚಿತ್ರದ ಮೇಕಿಂಗ್ ಹಾಗೂ ಶ್ರೀಮಂತಿಕೆ. ಹೇಳಿ ಕೇಳಿ ರಕ್ಷಿತ್ ಶೆಟ್ಟಿ ತಾಂತ್ರಿಕವಾಗಿ ಅತ್ಯುತ್ಕೃಷ್ಟ ಜ್ಞಾನವನ್ನು ಹೊಂದಿರುವಂತಹ ಒಬ್ಬ ತಂತ್ರಜ್ಞ. ಕನ್ನಡ ಸಿನಿಮಾ ನೋಡುವ ಸಾಮಾನ್ಯ ಪ್ರೇಕ್ಷಕನಿಗೂ ರಕ್ಷಿತ್ ಶೆಟ್ಟಿ ಸಿನಿಮಾ ಅಂದರೆ ಅದು ಕೇವಲ ಮರ ಸುತ್ತುವಂತಹ ಸಿನಿಮಾ ಅಲ್ಲ ಅಲ್ಲೇನೋ ಸ್ಪೆಷಲ್ ಇರುತ್ತೆ ಅಂತ ಗೊತ್ತಿರುತ್ತೆ. ಹೀಗಾಗಿ “ಅವನೇ ಶ್ರೀಮನ್ ನಾರಾಯಣ” ಹುಟ್ಟು ಹಾಕಿರುವ ನಿರೀಕ್ಷೆ ಅಷ್ಟಿಷ್ಟಲ್ಲ.

ಡಿಸೆಂಬರ್ 27ಕ್ಕೆ “ಅವನೇ ಶ್ರೀಮನ್ ನಾರಾಯಣ” ಪ್ರಪಂಚದಾದ್ಯಂತ ತೆರೆ ಕಾಣಲಿದೆ. ಅದು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಕೊಳ್ಳೆ ಹೊಡೆಯಲು ಬಹಳ ಸೂಕ್ತವಾದಂತಹ, ಕ್ರಿಸ್ಮಸ್ ರಜೆಯ ಅನುಕೂಲ ಇರುವಂತಹ ವಾರ. ಬಾಲಿವುಡ್ ಕಾಲಿವುಡ್ ಟಾಲಿವುಡ್ ಬಾಲಿವುಡ್ ಎಲ್ಲಾ ವುಡ್ ಗಳಲ್ಲೂ ಆ ಡೇಟ್ ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲು ಸಿದ್ಧವಾಗಿ ನಿಂತಿರುತ್ತದೆ. ಆದರೇನಂತೆ ಸ್ಯಾಂಡಲ್ ವುಡ್ಡಿನ ಶ್ರೀಮನ್ನಾರಾಯಣ ಎಲ್ಲರಿಗೂ ಸೆಡ್ಡು ಹೊಡೆದು ಗೆಲ್ಲುವ ಛಲದೊಂದಿಗೆ ಅದೇ ದಿನ ಬರುತ್ತಿದ್ದಾನೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಇಡೀ ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತು, ಅವರ ಸಿನಿಮಾದಲ್ಲಿ ಅಷ್ಟು ಕಂಟೆಂಟ್ ಇದೆ. ಜನ ನಮ್ಮ ಕೈ ಬಿಡೋಲ್ಲ ಒಳ್ಳೇ ಸಿನಿಮಾ ಅಂತ ಕಂಡಾಗ ಗೆಲುವು ನಿಶ್ಚಿತ. ಹೀಗಾಗಿ ವರ್ಷದ ಕೊನೆಯ ಶುಕ್ರವಾರ “ಅವನೇ ಶ್ರೀಮನ್ ನಾರಾಯಣ” ಅಂತ ಹೆಮ್ಮೆಯಿಂದ ಜೈಕಾರ ಕೂಗುವ ಸರದಿ ಕನ್ನಡ ಪ್ರೇಕ್ಷಕರದು 🙏

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top