RESPONSIVE LEADERBOARD AD AREA
Film News

ಈಕೆಯ ‘ಅಪೂರ್ವ’ ನೃತ್ಯಕ್ಕೆ ಪುನೀತ್ ರಾಜಕುಮಾರ್ ಸ್ಫೂರ್ತಿಯಂತೆ…!!!

‘ಕುಟ್ಟು…ಕುಟ್ಟು…’ ಈ ಗೀತೆ ಸದ್ಯ ಟ್ರೆಂಡಿಂಗ್ ಆಗುತ್ತಿರುವ ಕನ್ನಡ ಸಿನಿಮಾ ಗೀತೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಹಾಡಿನಲ್ಲಿರುವ ಶರಣ್ ಮತ್ತು ಅಪೂರ್ವ ಅವರ ನೃತ್ಯ ವಿಶೇಷವಾಗಿದ್ದು, ಭಾರಿ ಜನಪ್ರಿಯವಾಗುತ್ತಿದೆ.

ಶರಣ್ ಜೊತೆಗೆ ಚಿತ್ರದ ನಾಯಕಿ ಅಪೂರ್ವ ಮಾಡಿರುವ ಫ್ಲೋರ್ ಮೂವ್ಮೆಂಟ್ ಅದ್ಭುತವಾಗಿ ಮೂಡಿ ಬಂದಿದ್ದು, ಹೊಸ ರೀತಿಯ ನೃತ್ಯ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ನೃತ್ಯ ನೋಡುತ್ತಿದ್ದರೆ ಪವರ್ ಸ್ಟಾರ್ ನೆನಪಾಗುತ್ತಾರೆ.

ಈ ಬಗ್ಗೆ ಅಪೂರ್ವ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ, “ರವಿಚಂದ್ರನ್ ಅವರ ‘ಅಪೂರ್ವ’ ಸಿನಿಮಾದಲ್ಲಿ ಅವಕಾಶ ಸಿಕ್ಕಿದಾಗ, ಅವರು ನನಗೆ ನೃತ್ಯ ಕಲಿಯುವಂತೆ ಸಲಹೆ ನೀಡಿದರು. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಮೂರು ತಿಂಗಳ ಕಠಿಣ ತರಬೇತಿಯಲ್ಲಿ ವಿವಿಧ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡೆ. ಅದರ ಪರಿಣಾಮವಾಗಿ ವಿಕ್ಟರಿ-2 ಚಿತ್ರದ ‘ಕುಟ್ಟು ಕುಟ್ಟು..’ ಹಾಡಿಗೆ ನರ್ತಿಸಲು ಸಹಾಯವಾಯಿತು”

“ಚಿತ್ರದ ನೃತ್ಯ ನಿರ್ದೇಶಕ ಧನಂಜಯ್ ಅವರ ಐಡಿಯಾಗಳು ವಿಭಿನ್ನ ರೀತಿಯ ನೃತ್ಯ ಮಾಡಲು ಸಹಕಾರಿಯಾಯಿತು. ಸಾಮಾನ್ಯವಾಗಿ ಜನಪ್ರಿಯ ಗೀತೆಗಳಲ್ಲಿ ನಾಯಕನ ನೃತ್ಯಕ್ಕೆ ಹೆಚ್ಚು ಅವಕಾಶಗಳನ್ನು ನೀಡಲಾಗುತ್ತದೆ ಆದರೆ ಈ ಹಾಡಿನಲ್ಲಿ ನನಗೆ ಶರಣ್ ರಷ್ಟೇ ಪ್ರಾಮುಖ್ಯತೆ ನೀಡಿದ್ದು, ನೃತ್ಯ ಮಾಡಲು ಅವಕಾಶ ನೀಡಲಾಯಿತು. ಇದು ನನಗೆ ತುಂಬಾ ಖುಷಿ ನೀಡಿದೆ. ಡ್ಯಾನ್ಸ್ ಮಾಡುವಾಗ ಮೊಣಕಾಲುಗಳೆಲ್ಲ ತರಚಿಕೊಂಡು ಗಾಯವಾಗಿ ರಕ್ತ ಸುರಿಯುತ್ತಿತ್ತು. ಈಗ ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ನೋವೆಲ್ಲ ಮಾಯವಾಗಿದೆ. ಸಹಕಾರ ನೀಡಿದ ಚಿತ್ರ ತಂಡಕ್ಕೆ ಋಣಿಯಾಗಿದ್ದೇನೆ” ಎನ್ನುತ್ತಾರೆ
ಅಪೂರ್ವ.

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಅದ್ಭುತವಾದ ಫ್ಲೋರ್ ಮೂವ್ಮೆಂಟ್ ನೃತ್ಯ ಮಾಡಿ ತಮ್ಮ ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಸುತ್ತಾರೆ. ಅಪೂರ್ವಗೆ ಪುನೀತ್ ಅವರ ಅವರ ಸ್ಟೆಪ್ಸ್ ಗಳೇ ಸ್ಫೂರ್ತಿಯಂತೆ.

‘ರಾಂಬೊ 2’ ಚಿತ್ರ ದ ಭರ್ಜರಿ ಯಶಸ್ಸಿನ ನಂತರ ಶರಣ್, 2013ರಲ್ಲಿ ಬಿಡುಗಡೆಯಾಗಿದ್ದ ‘ವಿಕ್ಟರಿ’ ಚಿತ್ರದ ಸೀಕ್ವೆಲ್, ‘ವಿಕ್ಟರಿ-2’ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇದೆ.

ಅಪೂರ್ವ ಜೊತೆಗೆ ಅಸ್ಮಿತಾ ಸೂದ್, ನಾಯಕಿಯಾಗಿದ್ದು, ನಾಸಿರ್, ಸಾಧು ಕೋಕಿಲ ಇತರ ತಾರಾಗಣದಲ್ಲಿದ್ದಾರೆ. ತರುಣ್ ಶಿವಪ್ಪ ಮತ್ತು ತರುಣ್ ಸುಧೀರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಚಿತ್ರ ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top