RESPONSIVE LEADERBOARD AD AREA
Movie Reviews

ಅಂಬಿ ನಿಂಗ್ ವಯಸ್ಸಾಯ್ತೋ – ರೆಬೆಲ್ ಸ್ಟಾರ್ ಗೋಸ್ಕರ ನೋಡಲೇಬೇಕಾದ ಸಿನಿಮಾ

ಅನಾರೋಗ್ಯದಿಂದ ಹೊರಗೆ ಬಂದಿರುವ, ರಾಜ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ, ಕನ್ನಡ ಚಿತ್ರರಂಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರು ಬಹಳ ದಿನಗಳ ನಂತರ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿರುವ “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರ ಹಲವು ಕಾರಣಗಳಿಗಾಗಿ ಸಿನಿ ಪ್ರಿಯರಲ್ಲಿ ಬಹಳ ಕುತೂಹಲ ಕೆರಳಿಸಿತ್ತು.

ಕತೆ

ಅಪ್ಪ ಮಗನ, ಹೆತ್ತವರ ಮಕ್ಕಳ, ತಾತ ಮೊಮ್ಮಕ್ಕಳ ಬಾಂಧವ್ಯದ ಕತೆಯೇ ‘ಅಂಬಿ ನಿಂಗ್ ವಯಸ್ಸಾಯ್ತೊ’. 64ರ ಹರೆಯದ ಒಬ್ಬ ವ್ಯಕ್ತಿ ಇಡೀ ಜೀವನ ತಾನು ಬೇರೆಯವರಿಗಾಗಿಯೇ ಬದುಕಿ ಬಿಟ್ಟೆನಾ? ಎಂದು ಚಿಂತಿಸುತ್ತಿರುವ ಸಮಯದಲ್ಲೇ, ಮನೆಯಲ್ಲಿ ನಡೆಯುವ ಒಂದು ಸಂಗತಿ “ಇನ್ನು ಮುಂದಾದರೂ ತನಗಾಗಿಯೇ ಬದುಕಬೇಕು” ಎಂಬ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿಬಿಡುತ್ತದೆ. ಆ ಹಿರಿಯ ಜೀವ ತನಗಾಗಿ ಬಯಸಿದ್ದಾದರೂ ಏನು? ಮಗನಿಗೆ ತನ್ನ ತಪ್ಪಿನ ಅರಿವಾಗುವುದಾದರೂ ಹೇಗೆ? ತಿಳಿದುಕೊಳ್ಳಲು ನೀವು ಸಿನಿಮಾ ನೋಡಬೇಕು.

ಅಭಿನಯ

ವಯಸ್ಸಾದ ವಿಧೇಯ ತಂದೆಯಾಗಿ, ಕಿರಿಯರ ತಿದ್ದಲು ಮುಂದಾಗುವ ಹಿರಿಯನಾಗಿ, ಮೊಮ್ಮಕ್ಕಳ ಪಾಲಿನ ಮುದ್ದು ತಾತನಾಗಿ ಹಾಗೂ ಸೀನಿಯರ್ ಸಿಟಿಜನ್ ಲವರ್ ಬಾಯ್ ಆಗಿ ರೆಬೆಲ್ ಸ್ಟಾರ್ ಅಂಬರೀಶ್ ಮನಸ್ಸಿಗೆ ಬಹಳ ಹತ್ತಿರವಾಗುತ್ತಾರೆ. ಹಾಡು ಹಾಗೂ ಸಂಭಾಷಣೆಗಳಲ್ಲಿ ಅವರದ್ದೇ ವೈಯಕ್ತಿಕ ಬದುಕಿನ ರೆಫರೆನ್ಸ್ ಇರುವುದು ಕೂಡ ನೋಡುಗರಿಗೆ ಖುಷಿ ನೀಡುತ್ತದೆ. ಕಿರಿಯ ಅಂಬಿಯಾಗಿ ಕಿಚ್ಚ ಸುದೀಪ ಅವರು ಅಭಿಮಾನಿಗಳಿಗೆ ಖುಷಿಯಾಗುವಂತೆ ನಟಿಸಿದ್ದಾರೆ. ತಾನು ಪ್ರೀತಿಸುವ ಹುಡುಗಿ ಊರು ಬಿಟ್ಟು ಹೋಗ್ತಿದ್ದಾಳೆ ಅಂತ ಗೊತ್ತಾದಾಗ ಕನಲಿ ಹೋಗುವ ಪ್ರೇಮಿಯಾಗಿ ಸುದೀಪ್ ಅವರ ನಟನೆ ಅದ್ಭುತ. ಸುಹಾಸಿನಿ ಅವರು ತಮ್ಮ ಎಂದಿನ ಸ್ಪೆಷಾಲಿಟಿಯಂತೆ ತೆರೆಯ ಮೇಲೆ ಒಂದು ಪಾಸಿಟಿವ್ ಎನರ್ಜಿ ತಂದಿದ್ದರೆ, ಶ್ರುತಿ ಹರಿಹರನ್ ಅವರು ಸಿಂಪಲ್ ಹಳ್ಳಿ ಹುಡುಗಿಯಾಗಿ ಗಮನಸೆಳೆಯುತ್ತಾರೆ. ದಿಲೀಪ್ ರಾಜ್ ಅವರಿಗೆ ಇಂತಹ ಒಳ್ಳೆಯ ಪಾತ್ರಗಳು ಮತ್ತಷ್ಟು ಸಿಗಲಿ. ಅವರೆಂತಹ ಸಮರ್ಥ ಕಲಾವಿದ ಎಂದು ಚಿತ್ರರಂಗಕ್ಕೆ ಅರ್ಥವಾಗಲಿ.

ತಾಂತ್ರಿಕತೆ

ನಿರ್ದೇಶಕ ಗುರುದತ್ ಗಾಣಿಗ ಅವರು ತಮಿಳಿನ “ಪವರ್ ಪಾಂಡಿ” ಚಿತ್ರವನ್ನು ಬಹಳ ಎಫೆಕ್ಟಿವ್ ಆಗಿ ರೀಮೇಕ್ ಮಾಡುವುದರಲ್ಲಿ ಸಫಲರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಬೋನಸ್ ನಂತೆ ಕೆಲಸ ಮಾಡಿದ್ದು ಹಲವು ದೃಶ್ಯಗಳನ್ನು ಹಿನ್ನೆಲೆ ಸಂಗೀತ ಎಲಿವೇಟ್ ಮಾಡಿದೆ.

ಕೊನೆಯ ಮಾತು

ಒಬ್ಬ ಸೀನಿಯರ್ ಸಿಟಿಜನ್ ಕಥೆಯುಳ್ಳ, ಎಲ್ಲಿಯೂ ಅನಾವಶ್ಯಕ ಕಾಲಹರಣ ಮಾಡದ ಚಿತ್ರಕಥೆ ಉಳ್ಳ, ಈ ಚಿತ್ರದಲ್ಲಿ ನಿಜ ಜೀವನಕ್ಕೆ ಹತ್ತಿರವೆನಿಸುವ ಮನಸ್ಸಿಗೆ ತಾಕುವ ಹಲವು ದೃಶ್ಯಗಳಿವೆ. ವಯಸ್ಸಾದ ತಂದೆಯ ಪಾತ್ರವನ್ನು ಒಳ್ಳೆಯವನಾಗಿ ತೋರಿಸಲು ವಿನಾಕಾರಣ ಮಗ ಸೊಸೆಯನ್ನು ಕೆಟ್ಟವರಾಗಿ ತೋರಿಸಿಲ್ಲ. ಮನೆಯಲ್ಲಿ ನಡೆಯುವ ತಂದೆ ಮಗನ ನಡುವಿನ ದೃಶ್ಯಗಳು ಆಡಿಯನ್ಸ್ ಗೆ ಸಲೀಸಾಗಿ ಕನೆಕ್ಟ್ ಆಗುವಂತಹವು. ಚಿತ್ರದಲ್ಲಿರುವ ಫೈಟ್ ಸಿಕ್ವೇನ್ಸ್ ಗಳು ಇಲ್ಲದಿದ್ದರೂ ಸಿನಿಮಾಗೇನೂ ನಷ್ಟವಾಗುತ್ತಿರಲಿಲ್ಲ.

ಒಟ್ಟಾರೆಯಾಗಿ “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರ ಪ್ರೇಕ್ಷಕರು ಚಿತ್ರಮಂದಿರದಿಂದ ಒಳ್ಳೆಯ ಸಿನಿಮಾ ನೋಡಿದ ತೃಪ್ತಿಯ ಭಾವದೊಂದಿಗೆ ನಗು ಮುಖದೊಂದಿಗೆ ಹೊರ ನಡೆಯುವಂತೆ ಮಾಡುತ್ತದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಈ ಪಾತ್ರದಲ್ಲಿ ನೋಡುವುದೇ ಒಂದು ಖುಷಿಯ ವಿಚಾರ. ಹೀಗಾಗಿ ಪ್ರತಿಯೊಬ್ಬ ಕನ್ನಡ ಸಿನಿಪ್ರಿಯ ಅವರಿಗಾಗಿ ಈ ಚಿತ್ರವನ್ನು ನೋಡಲೇಬೇಕು.

ರೇಟಿಂಗ್ 3.75/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top