RESPONSIVE LEADERBOARD AD AREA
Movie

ಇಲ್ಲಸಲ್ಲದ “ದೆವ್ವ”ದ ಥ್ರಿಲ್ಲಿಂಗ್ ಎಪಿಸೋಡ್

ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ತಿಳಿದವರು ತಿಳಿಸಿದರೆ ಬಲವಾಗಿ ನಂಬಿಕೊಂಡ ನಂಬಿಕೆಯೂ ಸುಳ್ಳಾಗುತ್ತದೆ. ಸಮಾಜದಲ್ಲಿರುವ ದುರ್ಬಲ ಮನಸ್ಸಿನ ಜನರ ದೆವ್ವದ ನಂಬಿಕೆಯನ್ನು ಶತಾಯ ಗತಾಯ ಹೊಡೆದೋಡಿಸಬೇಕು ಎಂದು ನಿರ್ಧರಿಸಿರುವ ಖ್ಯಾತ ಟಿವಿ ಚಾನೆಲ್ ಒಂದರ ಪ್ರಖ್ಯಾತ ಕಾರ್ಯಕ್ರಮ “ಕಾರಣ”ದ ನಿರೂಪಕ ಕಾರಣ ಶೀಲಂ ಏಕಾಂಗಿಯಾಗಿಯೇ ಹೋಗಿ ದೆವ್ವವಿದೆ ಎಂಬ ಅಪಖ್ಯಾತಿಗೆ ಒಳಗಾಗಿರುವ ಸ್ಥಳಗಳಲ್ಲಿ ತನ್ನ ಕಾರಣ ಕಾರ್ಯಕ್ರಮವನ್ನು ನಡೆಸಿ ಅಲ್ಲಿ ದೆವ್ವ ಇಲ್ಲ ಎಂದು ಸಾಬೀತು ಮಾಡಿದಂತಹ 99 ಎಪಿಸೋಡ್ಗಳು ಈಗಾಗಲೇ ಪ್ರಸಾರಗೊಂಡಿವೆ. ಟಿಆರ್ ಪಿ ಹುಚ್ಚಿನ ರೇಸಿಗೆ ಬಿದ್ದ ಅವನ ಚಾನೆಲ್ ನ ಹೆಡ್ 100ನೇ ಎಪಿಸೋಡಿಗೆ ವಿಶೇಷವಾದದ್ದೇನೂ ಮಾಡು ಎಂದು ದಂಬಾಲು ಬಿದ್ದಿದ್ದಾನೆ. ಹೀಗಿರಬೇಕಾದರೆ ಅದೊಂದು ದಿನ ಯುವಕನೊಬ್ಬ ಶೀಲಂಗೆ ಎಡತಾಕಿ ತನ್ನ ಮನೆಯಲ್ಲಿ ದೆವ್ವ ಇಲ್ಲ ಎಂದು ತಾಕತ್ತಿದ್ದರೆ ಸಾಬೀತು ಮಾಡು ಎಂದು ಸವಾಲು ಎಸೆಯುತ್ತಾನೆ. ಆ ಸವಾಲನ್ನು ತನ್ನ ಕಾರ್ಯಕ್ರಮದ 100ನೇ ಎಪಿಸೋಡ್ ಆಗಿ ಸ್ವೀಕರಿಸುವ ಶೀಲಂ ಆ ಮನೆಗೆ ಹೋಗುತ್ತಾನೆ. ಇಷ್ಟೆಲ್ಲಾ ದಿವಸ ಎಂತೆಂಥದ್ದೋ ದೆವ್ವ ಭೀತಿಯ ಸ್ಥಳಗಳಿಗೆಲ್ಲಾ ಹೋಗಿ ಅದೆಲ್ಲ ಮೂಢನಂಬಿಕೆ ಎಂದು ಸಾಬೀತು ಮಾಡಿ ಗೆದ್ದಿದ್ದ ಶೀಲಂ ಆ ಮನೆಯಲ್ಲಿ ನಂಬಲು ಅಸಾಧ್ಯವಾದ ಅನುಭವಗಳು ಆಗಲು ಶುರುವಾಗುತ್ತವೆ. ಆ ಮನೆಯಿಂದ ನಾಯಕ ಶೀಲಂಗೆ ಆಗುವ ಅಪಾಯಗಳು ಎಂತಹುದು? ಅಸಲಿ ಆ ಮನೆಗೆ ಅವನು ಹೋಗಲು ಹಿಂದಿರುವ ಕಾರಣ ಏನು?

ಅರವಿಂದ ಶಾಸ್ತ್ರಿ ರಚಿಸಿ ನಿರ್ದೇಶಿಸಿರುವ “ಅಳಿದು ಉಳಿದವರು” ಚಿತ್ರದ ಮೇಜರ್ ಪ್ಲಸ್ ಪಾಯಿಂಟ್ ಅಂದರೆ ಚಿತ್ರದ ಸ್ಟೋರಿ ಲೈನ್. ಬೇಗನೆ ಪ್ರೇಕ್ಷಕ ಕನೆಕ್ಟ್ ಆಗಿ ಬಿಡುವಂತಹ ಪಾಪ್ಯುಲರ್ ಸಬ್ಜೆಕ್ಟ್, ಖ್ಯಾತ ಕಾರ್ಯಕ್ರಮ “ಹೀಗೂ ಉಂಟೆ” ಎಪಿಸೋಡ್ ನೆನಪಿಸುವಂತಹ ಕಾರ್ಯಕ್ರಮ, ಟಿವಿ ಚಾನೆಲ್ ಗಳ ಕಾರ್ಯ ಚಟುವಟಿಕೆ ಹಿಂದಿರುವ ಟಿಆರ್ಪಿ ಹುಚ್ಚು, ನಂಬಿಕೆ ಅಪನಂಬಿಕೆಗಳ ವಾಗ್ಯುದ್ಧ, ನಾಟಕೀಯತೆ, ಪಾಷಂಡಿತನ ಎಲ್ಲವೂ ಸಿನಿಮಾದಲ್ಲಿ ದಾಖಲಾಗಿದೆ. ಇಂತಹ ಸಲೀಸಾಗಿ ಸೆಳೆದು ಬಿಡುವ ಸಬ್ಜೆಕ್ಟ್ ಇಟ್ಟುಕೊಂಡು, ಅಷ್ಟೇ ಸಲೀಸಾಗಿ ಗಮನ ಸೆಳೆಯುತ್ತಲೇ ಹೋಗುವ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕರು. ಸಿನಿಮಾದ ಮೊದಲ ನಾಯಕ ಚಿತ್ರದ ಹಿನ್ನೆಲೆ ಸಂಗೀತ, ಮಿಥುನ್ ಮುಕುಂದನ್ ಅದ್ಭುತ ಎನಿಸುವಂತಹ ಹಿನ್ನೆಲೆ ಸಂಗೀತವನ್ನು ಸಿನಿಮಾಗೆ ನೀಡಿದ್ದಾರೆ. ಇನ್ನು ಯಾವುದೇ ಒಂದು ಪಾತ್ರವನ್ನು ನಾಯಕ ಮಾಡುವುದಕ್ಕಿಂತಲೂ ಕತೆಯನ್ನೇ ನಾಯಕನನ್ನಾಗಿ ಮಾಡುವ ನಿರ್ದೇಶಕರ ಪ್ರಯತ್ನವೂ ಯಶಸ್ವಿಯಾಗಿದೆ.

ಖ್ಯಾತ ಕಾರ್ಯಕ್ರಮವೊಂದರ ವಿಚಾರವಂತ ನಾಸ್ತಿಕ ನಿರೂಪಕನಾಗಿ ಅಶು ಬೆದ್ರ ಭರವಸೆಯ ಅಭಿನಯ ನೀಡಿದ್ದಾರೆ. ಬೀಸು ಸುರೇಶ್, ಸಂಗೀತ ಭಟ್, ಲೂಸಿಯಾ ಪವನ್ ಕುಮಾರ್, ಹಾಗೂ ಧರ್ಮಣ್ಣ ಕಡೂರು ತಮ್ಮ ಅಭಿನಯದ ಕರ್ತವ್ಯವನ್ನು ನಿಭಾಯಿಸಿದ್ದಾರೆ. ದ್ವಿತಿಯಾರ್ಧದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಂಟಿಕೊಂಡು ಅತುಲ್ ಕುಲಕರ್ಣಿ ತಾವೆಂತಹ ಸ್ಟಾರ್ ನಟ ಎಂಬುದನ್ನು ತೋರಿಸುತ್ತಾರೆ.

ದ್ವಿತೀಯಾರ್ಧದಲ್ಲಿ ಬರುವ ಕೆಲವು ವಿಎಫ್ಎಕ್ಸ್ ಸನ್ನಿವೇಶಗಳು ಪೇಲವವಾಗಿ ಕಂಡಿರುವುದನ್ನು ಹೊರತುಪಡಿಸಿ ಸಿನಿಮಾದಲ್ಲಿ ಯಾವುದೇ ರೀತಿಯ ನ್ಯೂನತೆಗಳು ಕಾಣಸಿಗುವುದಿಲ್ಲ. ಬಿಗಿಯಾಗಿ ನೋಡಿಸಿಕೊಂಡು ಹೋಗುವ ಚಿತ್ರಕಥೆ, ಥ್ರಿಲ್ ನೀಡುವ ಹಾರರ್ ಸನ್ನಿವೇಶಗಳು ಹಾಗೂ ಸಸ್ಪೆನ್ಸ್ ಎಲಿಮೆಂಟ್ಗಳು ನಿರ್ದೇಶಕರು ಅಂದುಕೊಂಡಂತೆ ಪ್ರೇಕ್ಷಕರ ಮೇಲೆ ಕೆಲಸ ಮಾಡುವುದರಿಂದ ಸಿನಿಮಾ ಪರಿಣಾಮಕಾರಿ ಥ್ರಿಲ್ಲರ್ ಆಗಿ ಹೊರಹೊಮ್ಮುತ್ತದೆ. ಈ ವೀಕೆಂಡ್ ನಿಮ್ಮ ಫ್ಯಾಮಿಲಿ ಜೊತೆ ಹೋಗಿ ನೋಡಬಹುದಾದ ಪೈಸಾ ವಸೂಲ್ ಹಾರರ್ ಥ್ರಿಲ್ಲರ್ ಸಿನಿಮಾ ಇದು.

NamCinema Rating – 3.75/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top