RESPONSIVE LEADERBOARD AD AREA
Movie Articles

Adigara ” Yaava Mohana Murali ” explained

ನೀನು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಪದ್ಯದ ಅರ್ಥ ತಿಳಿಸಿ analyse ಮಾಡಿ ಒಂದು Podcast ಮಾಡಿದರೆ ದುಡ್ಡು ಕೊಟ್ಟಾದರೂ ಕೇಳಿಯೇನು ಅಂತ ಗೆಳೆಯರೊಬ್ಬರು ಹೇಳಿದರು! ಮೈಸೂರುಅನಂತಸ್ವಾಮಿಗಳ ಸಂಗೀತ, ರತ್ನಮಾಲಾ ಪ್ರಕಾಶ್, ಎಂ ಡಿ ಪಲ್ಲವಿ ಇವರ ಸುಶ್ರಾವ್ಯ ಹಾಡುಗಾರಿಕೆಯಿಂದ ಎಲ್ಲರ ಮನಗೆದ್ದ ಹಾಡು ಇದು. ಮನೋ ಮೂರ್ತಿ ಸಂಗೀತ ಸಂಯೋಜಿಸಿ ಸಂಗೀತಾ ಕಟ್ಟಿ ಮತ್ತು ರಾಜು ಅನಂತಸ್ವಾಮಿ ಹಾಡಿದ ಹಾಡೂ ಜನಪ್ರಿಯವೇ. ಇದನ್ನು ಇಂಗ್ಲಿಷಿಗೆ ಅನುವಾದ ಮಾಡಿ ಕೊಡು,ಇದರ ವಿಶ್ಲೇಷಣೆ ಮಾಡಿ ಒಂದು ಬ್ಲಾಗ್ ಪೋಸ್ಟ್ ಆದರೂ ಬರಿ ಅಂದಿದ್ದಾರೆ. ಈ ನಿಟ್ಟಿನಲ್ಲಿ ಈ ಪದ್ಯದ ಕರುಳು ಬಗೆದು ಅದರ ಕೊಲೆ ಮಾಡುವ ಪುಟ್ಟ ಪ್ರಯತ್ನ ಇದು!

ಸ್ವಲ್ಪ ಹಿನ್ನೆಲೆ ನೋಡೋಣ. ನಾವು ಈಗ ನೋಡುತ್ತಿರುವಂತಹ ಕವಿತೆಗಳು ಸುಮಾರು 1910ರ ನಂತರ ಬಂದವು ಅನ್ನಬೇಕು. ಆಗಿನ ಕವಿತೆಗಳು ಹೆಚ್ಚಾಗಿ ಒಲವು, ಚೆಲುವು , ಹೂವು,ಬೆಳದಿಂಗಳು, ನವಿಲು/ಕೋಗಿಲೆ, ಗುಲಾಬಿ, ತಂಗಾಳಿ, ಪ್ರೀತಿ- ಪ್ರೇಮ, ನವಿರಾದ ಭಾವನೆಗಳು ಇಂತಹ ವಿಷಯಗಳ ಬಗ್ಗೆಯೇ ಇರುತ್ತಿದ್ದವು. ಕಾವ್ಯ ಅಂದರೆ ಕಿವಿಗೆ ಇಂಪಾದದ್ದು, ಕವಿ ಅಂದರೆ ಸೌಂದರ್ಯದ ಆರಾಧಕ ಅನ್ನುವ ಭಾವನೆ ಇತ್ತು. ಪ್ರಕೃತಿ, ದೇವರು, ಹೆಣ್ಣು, ಸೌಂದರ್ಯ, ಆದರ್ಶಗಳು ಇವೇ ಕವನದ ವಸ್ತುಗಳು. ಬಿ ಎಂ ಶ್ರೀ, ತೀನಂ ಶ್ರೀ , ಕುವೆಂಪು, ಪುತಿನ,ನರಸಿಂಹ ಸ್ವಾಮಿ, ಬೇಂದ್ರೆ ಎಲ್ಲರೂ ಇಂತಹ ಪದ್ಯಗಳನ್ನು ಬರೆದವರೇ. ಇದನ್ನು ನವೋದಯ ಸಾಹಿತ್ಯ ಅನ್ನುತ್ತಾರೆ. (ಇಂಗ್ಲೀಷಿನಲ್ಲಿ romanticism) ಹೀಗೆ ಬರೀ ಪ್ರಕೃತಿ ಸೌಂದರ್ಯ, ತಂಗಾಳಿ, ಪ್ರೀತಿ- ಪ್ರೇಮ, ಸೂರ್ಯೋದಯ ಇಂತಹ ವಿಷಯಗಳ ಬಗ್ಗೆ ಎಷ್ಟು ದಿನ ಕೊರೆಯುವುದು ಅಂತ ಕೆಲವರಿಗೆ ಅನ್ನಿಸಿತು. ನೂರೆಂಟು ಗೋಳುಗಳು, ಕೊಲೆ,ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ನಿರಾಸೆ, ಕಾಮ, ಕೊಳಕು,ಚರಂಡಿ ಇವೂ ಬದುಕಿನಲ್ಲಿ ಇದ್ದೇ ಇವೆ. ನಾವು ಕಣ್ಣು ಮುಚ್ಚಿ ಕೂತರೂ ಈ ಕೆಟ್ಟದ್ದು, ಸುಂದರವಲ್ಲದ್ದು ಮಾಯವಾಗುವುದಿಲ್ಲ.

ಇದರ ಬಗ್ಗೆಯೂ ಕವಿಗಳು ಬರೆಯಬೇಕು ಅನ್ನುವ ವಾದ ಹುಟ್ಟಿತು. ಕಾವ್ಯ ಸೂರಜ್ ಬರ್ಜಾತ್ಯ , ಕರಣ್ ಜೋಹರ್ ಚಿತ್ರದ ಹಾಗೆ ಇರಬೇಕಿಲ್ಲ, ಅದು ಅನುರಾಗ್ ಕಶ್ಯಪ್ , ಸೂರಿ ಸಿನಿಮಾದ ಹಾಗೂ ಇರಬಹುದು ಅನ್ನುವುದು ಇದರ ತಿರುಳು . ಇದಕ್ಕೆ ನವ್ಯ ಅಂತ ಹೆಸರು . ಕವಿತೆ ನರಮನುಷ್ಯರಿಗೆ ತಲೆ ಕೆಳಗಾಗಿ ನಿಂತರೂ ಅರ್ಥವಾಗದ ಹಾಗೆ ಕ್ಲಿಷ್ಟವಾಗಿ ಬರೆಯಬೇಕು ಅಂತಲೂ ನವ್ಯದ ಕೆಲವರು ಭಾವಿಸಿದರು, ಇರಲಿ . ಅಂತೂ ಈ ತರದ್ದನ್ನು ನವ್ಯ ಸಾಹಿತ್ಯ ಅನ್ನುತ್ತಾರೆ. ಸೆಖೆಗೆ ಅಂಗಿ ಕಿತ್ತು ಒಗೆಯುವ ಹಾಗೆ ಪ್ರಾಸ, ಛಂದಸ್ಸು ಇಂತದ್ದನ್ನೆಲ್ಲ ಕಿತ್ತೊಗೆದದ್ದೂ ಈ ನವ್ಯ ಶೈಲಿಯ ಭಾಗವೇ. ಒಂದು ರೀತಿಯಲ್ಲಿ ರಮೇಶ್ ಅರವಿಂದ್ ನಟನೆಯ ಶೈಲಿ ನವೋದಯ, ಸಾಯಿ ಕುಮಾರ್ ಶೈಲಿ ನವ್ಯ ಅನ್ನಬಹುದು!! ಈ ನವ್ಯ(Modernist) ಶೈಲಿಯಲ್ಲಿ ಮೆರೆದಾಡಿದ ಸೂಪರ್ ಸ್ಟಾರ್ ಕವಿ ಗೋಪಾಲಕೃಷ್ಣ ಅಡಿಗರು. ಅಡಿಗರು ಇಂಗ್ಲೀಷಿನಲ್ಲಿ ಬರೆದಿದ್ದರೆ ನೊಬೆಲ್ ಸಿಗುತ್ತಿತ್ತು ಅನ್ನಬಹುದಾದಷ್ಟು ಪ್ರತಿಭಾಶಾಲಿ. ಕಾವ್ಯದೇವತೆಯನ್ನು ಮನಬಂದಂತೆ ಕುಣಿಸಬಲ್ಲ ಶಬ್ದ ಮಾಂತ್ರಿಕರು. ಅಡಿಗರು ನವೋದಯದಲ್ಲೇ ಶುರು ಮಾಡಿ ನವ್ಯಕ್ಕೆ ಹೊರಳಿದವರು. ಅಡಿಗರು ರಮೇಶ್ ಶೈಲಿಯಲ್ಲಿ “ಹೂವಾಗಿ ತನ್ನೆದೆಯ ಮಧುರಮಕರಂದವನು ದಿಕ್ಕು ದಿಕ್ಕಿಗೆ ಚೆಲ್ಲುವಾಸೆ, ಮುಗಿಲಾಗಿ ಹನಿಯಾಗಿ ಜಗದ ಕಂಬನಿಯಾಗಿ ಮಣಿಯಾಗಿ ಕುಣಿಯುವಾಸೆ” ಯಂತಹ ಸಾಲುಗಳನ್ನೂ ಬರೆದಿದ್ದಾರೆ, ಸಾಯಿಕುಮಾರ್ ಶೈಲಿಯಲ್ಲಿ “ಪರಾಕು ಪಂಪನ್ನೊತ್ತಿಯೊತ್ತಿ ನಡು ಬಗ್ಗಿರುವ ಬೊಗಳುಸನ್ನಿಯ ಹೊಗಳು ಭಟನಲ್ಲ”ದಂತಹ ಸಾಲುಗಳನ್ನೂ ಬರೆದಿದ್ದಾರೆ. ವ್ಯಂಗ್ಯ, ತೀವ್ರತೆ, ನಾಟಕೀಯತೆ, ಅಬ್ಬರ ಅಡಿಗರ trademark. ಸಾಯಿಕುಮಾರ್ ಶೈಲಿಯಲ್ಲಿ ಸಿದ್ಧಿ,ಪ್ರಸಿದ್ಧಿ ಪಡೆದಿದ್ದಾರೆ.

ಅಡಿಗರ ಕಾದಂಬರಿಯೊಂದರ ಸಾಲುಗಳನ್ನು ಈ ನೋಡಿ : ಅರಬ್ಬೀ ಸಮುದ್ರಕ್ಕೆ ಬಿಡುವಿಲ್ಲ . ಮಳೆಗಾಲ , ಚಳಿಗಾಲ , ಬೇಸಗೆಕಾಲ – ಹಗಲು, ಇರುಳು , ಪ್ರತಿನಿಮಿಷವೂ, ಅದು ಹುಚ್ಚೆದ್ದುಕೂಗಿ ರೇಗಿ ಸಾವಿರ ಸಿಂಹಗಳ ಗರ್ಜನೆಯಂತೆ, ಸಹಸ್ರಾರು ಆನೆಗಳು ಘೀಳಿಟ್ಟ ಹಾಗೆ ಮೊರೆಯುತ್ತದೆ, ಬೊಬ್ಬಿಡುತ್ತದೆ, ಹೂಂಕರಿಸುತ್ತದೆ. ಈ ಬೊಬ್ಬಾಟಕ್ಕೆ ಕೊನೆಮೊದಲಿಲ್ಲ . ಯಾವ ದುಃಖಬಡಿದಿದೆ ಈ ಕಡಲಿಗೆ ? ಯಾವ ಆಕ್ರೋಶ ? ಯಾವ ನೋವು ? ಯಾರ ಚಿತ್ರಹಿಂಸೆ ? ಅಗೋ ಈಗ ವಿಕಟಾಟ್ಟಹಾಸ — ಅಲ್ಲಲ್ಲ, ಚೀತ್ಕಾರ — ಪೂತ್ಕಾರ !

ನಾವು ನೀವಾದರೆ ಬರೀ ಅರಬ್ಬೀ ಸಮುದ್ರ ಜೋರಾಗಿ ಮೊರೆಯುತ್ತದೆ ಅಂತಂದು ಕೈ ತೊಳೆದುಕೊಳ್ತಾ ಇದ್ದೆವು, ಅಡಿಗರು ಇಷ್ಟು build up ಕೊಟ್ಟು ನಾಟಕೀಯವಾಗಿ, ಅಬ್ಬರದಲ್ಲಿ ಹೇಳಿದ್ದಾರೆ. ಅಡಿಗರ ಶೈಲಿ ಇದು. ಅವರ ನವ್ಯ ಕವಿತೆಗಳು ಹೀಗಿರುತ್ತವೆ, ಕಡಲಿನ ಮೊರೆತದ ಹಾಗೆ ಮತ್ತು ಕಡಲಿನ ಮೊರೆತಕ್ಕೆ ಅವರು ಕೊಟ್ಟ ವಿವರಣೆಯ ಹಾಗೆ.

ಪುಸ್ತಕಕ್ಕಿಂತ ಮುನ್ನುಡಿಯೇ ಉದ್ದವಾಯಿತು! ಮೋಹನ ಮುರಲಿ ಪದ್ಯವನ್ನು ಅಡಿಗರು ಬರೆದದ್ದು ಸಾಫ್ಟ್ ಆದ, ರೋಮ್ಯಾಂಟಿಕ್ ಆದ ನವೋದಯ ಶೈಲಿಯಲ್ಲಿ, ಮುಂದೆ ಅಬ್ಬರದ, ನಾಟಕೀಯಶೈಲಿ, ಎಲ್ಲವೂ ಸುಂದರವಲ್ಲ ಅನ್ನುವ ಶೈಲಿಗೆ ಹೋಗುವ ತಯಾರಿ ಇಲ್ಲಿ ಇದೆ. ಈಗ ಪದ್ಯ ಓದೋಣ :

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನದು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;
ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ
ಇಷ್ಟೆ ಸಾಕೆಂದಿದ್ದೆಯಲ್ಲೊ! ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.
ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಯಾವ ಮೋಹನಮುರಲಿ ಕೆರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿದ ಕೈಯನು?

ಕಾರು, ಬಂಗಲೆ, ಪ್ರೇಮ-ಕಾಮ, ಮಾಲು,ಪಬ್ಬು ಸುತ್ತುವುದು ಇವುಗಳೇ ಜೀವನವೆಂದು ತಿಳಿದ ಮನುಷ್ಯ ಆಧ್ಯಾತ್ಮದತ್ತ ತಿರುಗುವುದರ (Spiritual awakening) ಚಿತ್ರಣ ಇಲ್ಲಿದೆ ಅನ್ನಬಹುದು. ಆದರೆ ಅಷ್ಟೇ ಅಲ್ಲಅನ್ನುವುದೇ ಸ್ವಾರಸ್ಯ. ಕವಿತೆ ಹುಡುಗಿಯಂತೆ – ಅರ್ಥ ಆದ ಹಾಗೂ ಇರಬೇಕು, ಇನ್ನೂ ಅರ್ಥ ಮಾಡಿಕೊಳ್ಳಬೇಕಾದ್ದು ತುಂಬಾ ಇದೆ ಅನ್ನಿಸುವ ಹಾಗೂ ಇರಬೇಕು. ತಿಳಿಯಿತು ಅನ್ನಿಸಬೇಕು, ಇನ್ನೂ ಹುಡುಕಿದರೆ ಇನ್ನಷ್ಟು ಅರ್ಥ ಹೊರ ಬರುವಂತೆ ಇರಬೇಕು, ಈ ಪದ್ಯ ಹಾಗೇ ಇದೆ.

ಮೊದಲ ಸಾಲುಗಳು : “ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನದು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?” ಮುರಳಿ ಅಥವಾ ಮುರಲಿ ಅಂದರೆ ಕೃಷ್ಣನ ಕೊಳಲಿನ ಪ್ರಸ್ತಾಪ ಬಂದಿದೆ, ಕೃಷ್ಣ ಯಾರು ? ಗೀತೆ ಬೋಧಿಸಿದವನು. ಇಲ್ಲಿ ಹೀಗೇ ಅಂತ ಹೇಳಿಲ್ಲ. ಪ್ರಶ್ನೆ ಹಾಕಿದ್ದಾರೆ. ಕವಿ ಸ್ವಲ್ಪ ದೂರದಲ್ಲಿ ನಿಂತು ತನ್ನ ಅನುಭವವನ್ನು ತಾನೇ ಪ್ರಶ್ನೆಮಾಡುತ್ತಾ ಇದ್ದಾರೆ. Dramatic monologue ಅನ್ನಬಹುದು. “ಈ ವೀಕೆಂಡಿನಲ್ಲಿ ಯಾವ ಮಾಲು ಕೈಬೀಸಿ ಕರೀತಾ ಇದೆ ನಿಮ್ಮನ್ನ ?” ಅಂತ ಕೇಳಿದ ಹಾಗೆ ನನ್ನನ್ನು ಕರೆದದ್ದು ಯಾರು ಅಂತ ಅರ್ಥ ಮಾಡಿಕೊಳ್ಳುವ ಪ್ರಯತ್ನ, ಕರೀತಾ ಇರುವುದು ಇಲ್ಲೇ ಎಲ್ಲಿಗೋ ಆಗಿದ್ದರೆ ಥಟ್ ಅಂತ ಹೋಗಬಹುದಿತ್ತು, ಆದರೆ ದೂರ ತೀರಕ್ಕೆ ಕರೀತಾ ಇರುವುದರಿಂದ ಸ್ವಲ್ಪ ಯೋಚನೆ ಮಾಡಬೇಕು. ಮಣ್ಣಿನ ಕಣ್ಣನು ಅಂದರೆಏನು ? Earthly eyes? ನಾವು ಯಾರೋ ಮಾಡಿದ ಮಣ್ಣಿನ ಬೊಂಬೆಗಳು ಅಂತಲೇ ? ಕರೆಯುತ್ತಾ ಇರುವವನು ಗೊಂಬೆ ಆಡ್ಸೋನು ಇರಬಹುದೇ ?

“ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ” ಅಂತೆ. ಇದು ಮಜಾ ಮಾಡಿಕೊಂಡು ತಿರುಗುತ್ತಿರುವವನ ಚಿತ್ರವೇ. ಹೂವಿನ ಹಾಸಿಗೆ ಮೇಲೆ ಪ್ರೇಯಸಿಯನ್ನು ಅಪ್ಪಿಮುದ್ದಾಡುತ್ತ ಇದ್ದಾನೆ ಈ ಆಸಾಮಿ, ಅಂತವನನ್ನು ದೂರ ತೀರಕ್ಕೆ ಬಾ ಅಂದರೆ ಬರುತ್ತಾನೆಯೇ? ಉತ್ತರ ಮುಂದಿನ ಸಾಲಿನಲ್ಲೇ ಇದೆ.”ಬಯಕೆತೋಟದ ಬೇಲಿಯೊಳಗೆ ಕರಣಗಣದೀರಿಂಗಣ” ಅಂದಿದ್ದಾರೆ. ಈ ನಲ್ಲೆ, ಈ ರೋಮ್ಯಾನ್ಸ್ ಎಲ್ಲ ಬೇಲಿ ಹಾಕಿದ ತೋಟ ಅನ್ನಿಸಿದೆ ಇವನಿಗೆ. ಕರಣಗಣ ಅಂದರೆ ಇಂದ್ರಿಯಗಳ ಗಣ,ಸಮೂಹ,ಗುಂಪು. ರಿಂಗಣ ಎಂದರೆ ತಿರು ತಿರುಗಿಮಾಡುವ ಕುಣಿತ. ಯಕ್ಷಗಾನದಲ್ಲಿ ನೆಲ ಬಿಟ್ಟು ಹಾರಿ ಫ್ಯಾನು ತಿರುಗಿದ ಹಾಗೆ ಗರ ಗರ ತಿರುಗಿ ಕುಣಿಯುತ್ತಾರೆ. ತನ್ನ ಇಂದ್ರಿಯಗಳು ಈ ತರ ಕುಣೀತಾ ಇದೆ ಸ್ವಾಮೀ ಅಂತಾರೆ ಕವಿ(Dance of the senses). ಇದು ಒಂತರಾ ಜೈಲಿನಲ್ಲಿ ಸಿಕ್ಕಿ ಹಾಕಿಕೊಂಡ ಹಾಗೆ. ದಿನ ಬೆಳಗಾದರೆ ಅದೇ ಕಾರು, ಅದೇ ಆಫೀಸು, ಅದೇ ಬಾಸು, ಅದೇ ಟ್ರಾಫಿಕ್ಕು, ಅದೇ ಹುಡುಗಿ, ಅದೇ ಸೆಕ್ಸು ಎಲ್ಲ ಸೇರಿ ಒಂದು ಜೈಲಿನ ಹಾಗೆ ಅನ್ನಿಸಿದೆ ಇವನಿಗೆ. ಇಂದ್ರಿಯಗಳು ಅದೇ ತಾಳಕ್ಕೆ ತಿರು ತಿರುಗಿ ಕುಣಿಯುತ್ತಾ ಇವೆ ಅಷ್ಟೇ. ಇದೇ ಬೇಸರ ಆತನಿಗೆ. ಇದು ಬಿಟ್ಟು ಇದು ಬಿಟ್ಟು ಮಹತ್ವದ ಕೆಲಸ ಏನಾದರೂ ಮಾಡೋಣ ಅಂತಒಳಗೊಳಗೇ ಅನ್ನಿಸ್ತಾ ಇದೆ. ಮುಂದಿನ ಸಾಲುಗಳಲ್ಲಿ ಬಾಯಿ ಬಿಟ್ಟು ಇದನ್ನೇ ಹೇಳಿದ್ದಾರೆ : ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ, ಇಷ್ಟೆ ಸಾಕೆಂದಿದ್ದೆಯಲ್ಲೊ! ಇಂದುಏನಿದು ಬೇಸರ? ಮಿದುವೆದೆ = ಮೃದುವಾದ ಎದೆ , ಬಿಸಿದುಸೋಂಕಿನ ಅಂದರೆ ಬೆಚ್ಚಗಿನ ಸ್ಪರ್ಶದ. ಹುಡುಗಿಯ ಮೃದುವಾದ ಎದೆ, ಬೆಚ್ಚನೆಯ ಸ್ಪರ್ಶ ಇದೆಲ್ಲಾ ಪಂಜರ(Cage) ಅಂತೆ. ಆಗ ಬೇಲಿ ಹಾಕಿದ ತೋಟ ಅಂದಿದ್ದ, ಈಗ ನೋಡಿದರೆ ಪಂಜರ ! ಹೀಗೇ ಬಿಟ್ಟರೆ ಇನ್ನೂ ಏನೇನು ಹೇಳುತ್ತಾನೋ !

ಮುಂದೆ :”ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ? ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?” ಈತನ ಕಣ್ಣು ಉಪೇಂದ್ರ ಸಿನಿಮಾದಲ್ಲಿ ಉಪೇಂದ್ರನ ಪಾತ್ರದ ಕಣ್ಣು ತಿರುಗಿದ ಹಾಗೆ ಹೊರಳುತ್ತಾ ಇದೆ(Rolling eyes). ಕುಡಿದು ಟೈಟ್ ಆದವರಿಗೆ ಯಾವುದೂ ಸರಿಯಾಗಿ ಕಾಣದೆ ಆಗುತ್ತದಲ್ಲ, ಹಾಗಾಗಿದೆ ಇವನಿಗೆ, ಕಣ್ಣು ಸರಿ ಕಾಣದೆ ತೇಲುನೋಟ(Floating glance) ಆಗಿದೆ. ಯಾತನೆ, ನೋವು ಆಗುತ್ತಾ ಇದೆ, ಆದರೆ ಸುಮಧುರವಾದ, ಖುಷಿ ಕೊಡುವಂತ ನೋವು,ತೊಳಲಾಟ ಇದು. ದಿವ್ಯ ಅಂದರೆ ಸ್ವರ್ಗಕ್ಕೆ ಸಂಬಂಧಿಸಿದ ಅಂತ ಒಂದು ಅರ್ಥ, divine ಅಂದಂತೆ. ಒಬ್ಬರು ತಪ್ಪು ಮಾಡಿದ್ದಾರೋ ಇಲ್ಲವೋ ಅಂತ ನಿರ್ಣಯ ಮಾಡುವ ಪರೀಕ್ಷೆಗೂ ದಿವ್ಯ ಅನ್ನುತ್ತಾರೆ . ತುಲಾ, ಅಗ್ನಿ, ಜಲ, ತಂಡುಲ ಇತ್ಯಾದಿ ಏಳು ಬಗೆಯ ದಿವ್ಯಗಳು ಇವೆ.ಅಗ್ನಿದಿವ್ಯ ಅಂದರೆ ಅಗ್ನಿಪರೀಕ್ಷೆ ಅನ್ನುವ ಶಬ್ದ ಕೇಳಿಯೇ ಇರುತ್ತೀರಿ. ಈತನಿಗೂ ಇದು ಪರೀಕ್ಷೆಯೇ. ಈತ ಸಂಸಾರದಲ್ಲಿ ಸಿಕ್ಕಿಕೊಂಡಿದ್ದಾನೆ , ಸ್ವರ್ಗದ ಕರೆ ಬಂದಿದೆ(Divine calling), ಹೋಗೋಣವೇ ಬೇಡವೇ ಗೊತ್ತಾಗುತ್ತಿಲ್ಲ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಅನ್ನುವ ಪರಿಸ್ಥಿತಿ!

ಆಮೇಲೆ : “ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ; ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ”. ಮರವನ್ನು ಮುಟ್ಟಿ ನೋಡಿದರೆ ತಣ್ಣಗೆ ಇರುತ್ತದೆ, ಬೆಂಕಿ ತಾಗಿಸಿ ನೋಡಿ – ಭಗ ಭಗ ಉರಿಯುತ್ತದೆ. ಈ ಬೆಂಕಿ ಎಲ್ಲಿತ್ತು ? ಮರದೊಳಗೆ ಅಡಗಿತ್ತು, ಈಗ ಏನೋ ತಾಕಿದಾಗ ಹೊರಬಂತು. ಹಾಗೆಯೇ ಈ ಮನುಷ್ಯನಿಗೂ ಒಳಗೊಳಗೇ ಬೇಸರ ಇತ್ತು, ಏನಾದರೂ ಕಡಿದು ಕಟ್ಟೆ ಹಾಕಬೇಕು, ಸಾಧಿಸಬೇಕು ಅನ್ನುವ ತುಡಿತ ಇತ್ತು, ಅದು ಮನದ ಒಳಗೆ ಇದ್ದದ್ದು ಈಗ ಹೊರಗೆ ಬಂದಿದೆ. ಇದರ ಮುಂದುವರಿಕೆಯಾಗಿ “ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?” ಅನ್ನುತ್ತಾರೆ. ಸುಪ್ತ ಅಂದರೆ ಅಡಗಿದ, ಸುಪ್ತ ಸಾಗರ ಅಂದರೆ ಒಳ ಮನಸ್ಸು (Subconscious mind). ಏಳು ಸಮುದ್ರ ದಾಟಿದ ರಾಜಕುಮಾರನ ತರ ಏಳು ಕಡಲು ದಾಟಿದರೆ ಅಲ್ಲಿ ಒಳ ಮನಸ್ಸು ಅನ್ನುವ ಇನ್ನೊಂದು ಸಮುದ್ರ ಸಿಗುತ್ತದೆ, ಅದನ್ನು ದಾಟುವುದು ಹೇಗೆ ? ಮೊಳೆಯದಲೆ ಅಂದರೆ ಮೂಡದ, ಭೋರ್ಗರೆಯದೆ ಇರುವ ಅಲೆ, ಮರ್ಮರ ಅಂದರೆ ಪಿಸುಗುಟ್ಟುವುದು,whispering. ಒಳ ಮನಸ್ಸಿನ ಪಿಸುಗುಟ್ಟುವಿಕೆ ಈಗ ಕೇಳುತ್ತಾ ಇದೆ ಈತನಿಗೆ . ಆಧ್ಯಾತ್ಮ ಕರೀತಾ ಇದೆ material comforts ಹೋಗಬೇಡ ಅನ್ನುತ್ತಾ ಇದೆ, ಒಳ ಮನಸ್ಸು ಏನು ಹೇಳ್ತಾ ಇದೆ ಅಂತ ಗೊತ್ತಾಗುತ್ತಿಲ್ಲ.

“ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ” ಅನ್ನುತ್ತಾನೆ . ವಿವಶ ಆಗುವುದು ಅಂದರೆ ಗೊತ್ತಾಗದಂತೆ ಮನ ಅಂಕೆ ತಪ್ಪಿ ಯಾವುದೋ ಆಮಿಷಕ್ಕೆ ಬಲಿಯಾಗುವುದು, ಪರವಶ ಆಗುವುದು ಅಂದರೆ ಗೊತ್ತಿದ್ದೂ ಮನವನ್ನು ಪರರ ಅಂಕೆಗೊಪ್ಪಿಸುವುದು. ಅದೊಂದು ಅಮಲಿನ ಭಾವ. ಅರ್ಧ ನಿದ್ರೆಯೂ ಅಲ್ಲದ ಅರ್ಧ ಎಚ್ಚ್ರರವೂ ಅಲ್ಲದ ಸ್ಥಿತಿ, ಗಾಂಜಾ ಸೇವಿಸಿದ ಹಾಗೆ ಆಗಿದೆ ಈತನ ಸ್ಥಿತಿ . ಆಧ್ಯಾತ್ಮದ, ಕೃಷ್ಣನ ಕರೆ ಇವನಿಗೆ ಅಮಲೇ ಹಿಡಿಸಿದೆ. ನಿಧಾನಕ್ಕೆ ಒಳ ಮನಸ್ಸಿನಲ್ಲಿ ಮೂಡದ ಅಲೆಯಾಗಿ, ಮೂಕವಾಗಿ ಇದ್ದದ್ದು ಈಗ ಕುಣಿ ಕುಣಿದು ಹೊರಗೆ ಬರುತ್ತಾ ಇದೆ.

ಈಗ twist ಬರುತ್ತದೆ. ಆಯಿತು, ಈ ಪುಣ್ಯಾತ್ಮ gone case, ಸನ್ಯಾಸಿ ಆಗಿ ಹಿಮಾಲಯಕ್ಕೆ ಹೊರಟ ಅನ್ನುವಷ್ಟರಲ್ಲಿ ಒಮ್ಮೆಲೇ, “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆಜೀವನ?” ಅನ್ನುವ ಸಾಲು ಬರುತ್ತದೆ. ಮಿಲನ ಮಹೋತ್ಸವದ ತುತ್ತ ತುದಿಯ ಹಾಗೆ, orgasmic ಆಗಿ ಈ ಸಾಲು ಬರುತ್ತದೆ. ಹೊರಟವನಿಗೆ ಮತ್ತೆ ಸಂದೇಹ ಬಂದಿದೆ , ಪ್ರಶ್ನೆ ಎದ್ದಿದೆ!!ಈಗ ಇದು ಬರೀ ಹಿಮಾಲಯಕ್ಕೆ ಹೊರಟವನ ಪದ್ಯ ಅಲ್ಲ. ಇರುವುದನ್ನು ಬಿಟ್ಟು ಹೊರಟ ಯಾರಿಗೇ ಆದರು ಅನ್ವಯ ಆಗುವ ಪದ್ಯ ಇದು.

ಒಬ್ಬ ಸಾಫ್ಟ್ ವೇರ್ ಎಂಜಿನಿಯರ್ ಇದ್ದಾನೆ,ಅವನಿಗೆ ಸ್ವಂತದ್ದೊಂದು ತೋಟವೋ, ವ್ಯಾಪಾರ ಮಾಡಬೇಕು ಅಂತ ಒಳಗೇ ಆಸೆ. ಅಥವಾ Startup ಕಂಪನಿ ಶುರು ಮಾಡುವ ಆಸೆ. ಈ ಕಂಪನಿ ಶುರು ಮಾಡುವ ಆಸೆ = ಮೋಹನಮುರಳಿಯ ಕರೆ = ಆಧ್ಯಾತ್ಮದ ಕರೆ ಅಂತ ಇಟ್ಟುಕೊಂಡು ಈ ಪದ್ಯವನ್ನ ಇನ್ನೊಂದು ಸಲ ಓದಿ. ಮರದೊಳಡಗಿದ ಬೆಂಕಿ = ಆತನ ಆಸೆ. ಇರುವ ಸಂಬಳ ಭದ್ರತೆ(job security) ಬಿಟ್ಟು ಸ್ಟಾರ್ಟ್ ಅಪ್ ಶುರು ಮಾಡಿ ದಿವಾಳಿಯಾದರೆ ? ಶುರು ಮಾಡಲೇ ಬೇಡವೇ ಅನ್ನುವ ಗೊಂದಲ, ತಳಮಳ ಈ ಪದ್ಯದಲ್ಲಿ ಅದ್ಭುತವಾಗಿ ಬಂದಿದೆ ಅನ್ನಬಹುದು. The poem suits that scenario perfectly. ಇನ್ನೊಬ್ಬನಿಗೆ ಸಿನಿಮಾ/ಕಲೆ ಅಂದರೆ ಹುಚ್ಚು. ಇರುವ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಹೋಗೋಣ ಅಂತಿದ್ದಾನೆ. ಸಿನಿಮಾದ, ಕಲೆಯ passion = ಮೋಹನಮುರಳಿಯ ಕರೆ = ಆಧ್ಯಾತ್ಮದ ಕರೆ ಅಂತ ಓದಿಕೊಂಡರೆ ಈ ಕವಿತೆ ಆ ಸಂಧರ್ಭಕ್ಕೂ ಪರ್ಫೆಕ್ಟ್. ಈ ಪ್ಯಾಶನ್ ಮರದೊಳಡಗಿದ ಬೆಂಕಿಯಂತೆ ಇವನ ಒಳಗೇ ಇತ್ತು ಅನ್ನುವ ಹೋಲಿಕೆಎಷ್ಟು ಚೆನ್ನಾಗಿ ಹೊಂದಿಕೆ ಆಗುತ್ತದೆ !! ಈಗ ಇರುವ ಸಂಬಳ , ಸವಲತ್ತುಗಳು = ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ. ಈ ರೀತಿ ಓದಿಕೊಳ್ಳಬಹುದು.

ದೇಶ ಬಿಟ್ಟು ಅಮೇರಿಕಾಕ್ಕೆ ಹೊರಟು ನಿಂತವನು ಅಮೇರಿಕಾ Calling = ಮೋಹನ ಮುರಳಿಯ ಕರೆ ಅಂತ ಮಾಡಿಕೊಂಡರೆ, ಅವನ ಸಂಕಟಗಳ ಬಗ್ಗೆಯೇ ಬರೆದ ಹಾಡು ಇದು ಅನಿಸುತ್ತದೆ. It is as if the song is about someone leaving one’s own shores and heading towards a promised land of plenty! ಒಬ್ಬ ತನ್ನ girlfriend ಅನ್ನು dump ಮಾಡಿ ಹೊರಟಾಗ ಅವಳು ಹಾಡಿದ ಹಾಡು ಅಂತಲೂ ಹೇಳಬಹುದು. ಈ ತರ ಬೇರೆ ಬೇರೆ ಸಂಧರ್ಭ, ಥೀಮ್ ಇಟ್ಟುಕೊಂಡು ಓದಿದರೆ ಈ ಪದ್ಯ ಎಲ್ಲಅರ್ಥಗಳಿಗೂ ಹೊಂದಿಕೆ ಆಗುತ್ತದೆ ಅನ್ನಿಸಿಬಿಡುತ್ತದೆ!! ಯಾರಾದರೂ ಸತ್ತಾಗ, ಅವರನ್ನು ಮೋಹನ ಮುರಲಿ ದೂರ ತೀರಕ್ಕೆ ತಗೊಂಡು ಹೋಯಿತು ಅಂತ ಬೇಸರದಲ್ಲೂಹಾಡಿಕೊಳ್ಳಬಹುದು. ಈ universality ಇದರ ವಿಶೇಷ. ಎಲ್ಲ ಒಳ್ಳೆಯ ಕವಿತೆಗಳೂ ಹೀಗೆ universal ಆಗಿರುತ್ತವೆ.

The grass is always greener on the other side ಅನ್ನುವ ಹಾಗೆ, ಏನು ಇದ್ದರೂ ಇನ್ನೂ ಏನನ್ನೋ ನೋಡಿ, ಅದು ಸಿಕ್ಕಿದರೆ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುವುದು ನಮ್ಮ ಗುಣ.ನಡೆಯುವಾಗ ಬೈಕು ಬೇಕು, ಬೈಕು ಸಿಕ್ಕಿದರೆ ಕಾರು , ಕಾರು ಬಂದ ಮೇಲೆ ಬಂಗಲೆ. ಇದು ಮುಗಿಯುವುದೇ ಇಲ್ಲ. ಉಡುಪಿಯಲ್ಲಿ ಕೂತವನಿಗೆ ಅಮೆರಿಕಕ್ಕೆ ಹೋಗೋಣ ಅನ್ನುವ ಆಸೆ, ಟೆಕ್ಸಾಸ್ ನಲ್ಲಿ ತಿರುಗುವವನಿಗೆ ಉಡುಪಿಗೆ ಹೋಗುವ ಬಯಕೆ !! “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” ಅನ್ನುವ ಸಾಲು ಇದನ್ನೂ ಸೊಗಸಾಗಿ ಹಿಡಿದಿಡುತ್ತದೆ. ಕೊನೆಯ ಎರಡು ಸಾಲುಗಳು, “ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?

ಯಾವ ಬೃಂದಾವನವು ಚಾಚಿತು ತನ್ನ ಮಿಂಚಿದ ಕೈಯನು?” ಇದು ಮೊದಲ ಎರಡು ಸಾಲುಗಳ copy pasteನಂತಿದೆ. ಕರೆಯುವ ಕೈ ಅನ್ನು “ಮಿಂಚಿದ ಕೈ” ಅಂತ ಸೇರಿಸಿದ್ದಾರೆ. ಮಿಂಚುಇರುವುದು ಒಂದೇ ಕ್ಷಣವಾದರೂ ಅದರ ಶಕ್ತಿ ಭಯಂಕರ, ಆಕರ್ಷಣೆಯೂ . ಕಡೆಗೆ ಭಾಷೆಯ ವಿಚಾರ, ಕವಿತೆಯಲ್ಲಿ ಹೇಳಿದ್ದು ಸಂಭಾಷಣೆಯಲ್ಲಿ ಹೇಳಲಾಗದ ಹಾಗೆ ಇರಬೇಕು. ಇದನ್ನು ನೋಡಿ :
“ಹೇಗಿದ್ದೀಯಾ ? ತೊಂದ್ರೆ ಏನೂ ಆಗಿಲ್ಲ ತಾನೇ? ಸುಖವಾಗಿ ಇದ್ದೀಯಾ ? ನಾನು ಬರ್ದಿರೋ ಕಾಗದ ಓದಿದ್ಯಾ ಡಾರ್ಲಿಂಗ್ ?” ಇದನ್ನೇ ಹೀಗೆ ಬರೆದರೆ ಕವಿತೆ ಆಗುತ್ತದೆ:

ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿ ಪಾತ್ರಳೇ
ಓದಮ್ಮಾ ನನ್ನ ಓಲೇ

ಕವಿತೆಗೆ ಬೇರೆಯೇ ತರದ ಭಾಷೆ ಬೇಕು. ಲಯ ಬೇಕು. ಅಡಿಗರ ಭಾಷೆ,ಲಯ ನೋಡಿ. ಅಡಿಗರು ಹಿಮಗಿರಿಯ ಕಂದರ ಅನ್ನುವ ಕವಿತೆಯಲ್ಲಿ ಇದೇ ಥೀಮ್ ಅನ್ನು ವ್ಯಂಗ್ಯ, ಅಬ್ಬರ ನಾಟಕೀಯತೆಯೊಂದಿಗೆ ಸಾಯಿಕುಮಾರ್ ಶೈಲಿಯಲ್ಲಿ revisit ಮಾಡಿದ್ದಾರೆ. ಭೈರಪ್ಪ ಬರೆದಿರುವ ನಿರಾಕರಣ ಕಾದಂಬರಿಯಲ್ಲಿಯೂ ಇದೇ ಥೀಮ್ ಇದೆ. ಆಸಕ್ತರು ಓದಿ ನೋಡಿ. ಹೀಗೆ ಸರಳವಾದರೂ ತುಂಬಾ ಅರ್ಥ ಇಟ್ಟುಕೊಂಡು ನವ್ಯದ ಕಡೆ ಹೊರಟ ಅಡಿಗರ ಶ್ರೇಷ್ಟ ನವೋದಯ ಕವಿತೆ ಇದು ಅಂತ ನಿಸ್ಸಂಶಯವಾಗಿ ಹೇಳಿ ಮುಗಿಸೋಣ.

 

Sharath Bhat

Please find below link for the original post

ನೀನು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಪದ್ಯದ ಅರ್ಥ ತಿಳಿಸಿ analyse ಮಾಡಿ ಒಂದು Podcast ಮಾಡಿದರೆ ದುಡ್ಡು ಕೊಟ್ಟಾದರೂ ಕೇಳಿಯೇ…

Posted by Sharath Bhat Seraje on Saturday, April 30, 2016

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top