RESPONSIVE LEADERBOARD AD AREA
Film News

ಪೈಸಾ ವಸೂಲ್ ಮಾಡಿಕೊಡೋ ಹೃದಯವಂತ ಅಧ್ಯಕ್ಷ

ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್, ತುಪ್ಪದ ಹುಡುಗಿ ರಾಗಿಣಿ “ಅಧ್ಯಕ್ಷ ಇನ್ ಅಮೆರಿಕ” ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಅನ್ನೋ ವಿಷಯ ಹೊರಬಿದ್ದಾಗಲೇ ಇದು ಅಧ್ಯಕ್ಷ ಚಿತ್ರದ ಸೀಕ್ವೆಲ್ಲಾ ಅಂತ ಎಲ್ಲರೂ ಯೋಚಿಸಿದ್ದು ನಿಜ. ಇಲ್ಲಾ, ಇದು ಮಲಯಾಳಂನ “ಟು ಕಂಟ್ರೀಸ್” ಚಿತ್ರದ ರೀಮೇಕ್ ಅಂತ ಟ್ರೈಲರ್ ನೋಡಿದಾಗ ಎಲ್ಲರಿಗೂ ತಿಳಿಯಿತು.

ಕತೆ

ಅವನೊಬ್ಬ ಅವಕಾಶವಾದಿ, ಹೆಸರು ಉಲ್ಲಾಸ. ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಸಿಕ್ಕ ಅವಕಾಶದಲ್ಲಿ ಹಾಗೋ ಹೀಗೋ ಹೇಗೋ ಒಟ್ಟಿನಲ್ಲಿ ದುಡ್ಡು ಮಾಡಿಬಿಡಬೇಕೆಂದು ಯೋಚಿಸುವ ಜಗತ್ ಕಿಲಾಡಿ ಅವನು. ಹಣಕ್ಕಾಗಿಯೇ ಒಬ್ಬ ಅಂಗವಿಕಲ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿರುವ ಅವನಿಗೆ ಅನಿರೀಕ್ಷಿತವಾಗಿ, ಅನಿವಾಸಿ ಭಾರತೀಯ ಯುವತಿಯೊಬ್ಬಳನ್ನು ಮದುವೆಯಾಗುವ ಸದಾವಕಾಶ ಎದುರಿಗೆ ಬರುತ್ತದೆ. ಆದರೆ ಆ ಎನ್ಆರ್ ಐ ಹುಡುಗಿ ಎಂತಹವಳು ಅಂತ ಅವನಿಗೆ ಗೊತ್ತಾಗೋದೆ ಮದುವೆಯಾದ ಮಾರನೇ ದಿನ. ಅವಳ ವಿಪರೀತ ವ್ಯಸನ ಭರಿತ ವ್ಯಕ್ತಿತ್ವದ ಸವಾಲನ್ನು ಹಣಕ್ಕಾಗಿಯೇ ಅಡ್ಜೆಸ್ಟ್ ಮಾಡಿಕೊಳ್ಳಲು ತೀರ್ಮಾನಿಸುವ ಅವನು ಅವಳೊಂದಿಗೆ ಅಮೆರಿಕ ದೇಶಕ್ಕೆ ಹೋಗಿ ಪಡುವ ಪರಿಪಾಟಲು, ಬದಲಾಗುವ ಅವನ ಮನಸ್ಥಿತಿ ಹಾಗೂ ಹೆಂಡತಿಗಾಗಿ ಹುಟ್ಟಿಕೊಳ್ಳುವ ನಿಜವಾದ ಪ್ರೀತಿ ಇವೆಲ್ಲದರ ಒಟ್ಟು ಸಾರಾಂಶವೇ ಚಿತ್ರದ ಕಥೆ.

ಅಭಿನಯ

ಶರಣ್ ತಮ್ಮ ಎಂದಿನ ಲವಲವಿಕೆಯ ಅಭಿನಯದಿಂದ ಅಧ್ಯಕ್ಷನ ಪಾತ್ರಕ್ಕೆ ಮಗದೊಮ್ಮೆ ಜೀವ ತುಂಬಿದ್ದಾರೆ. ತಮ್ಮ 25ನೇ ಸಿನಿಮಾದಲ್ಲಿ ನಟಿಸುತ್ತಿರುವ ರಾಗಿಣಿ ಅವರಿಗೆ ಅಭಿನಯಿಸಲು ಬಹಳ ಅವಕಾಶವಿರುವಂತಹ ಒಳ್ಳೆಯ ಪಾತ್ರ ಸಿಕ್ಕಿದೆ. ಅದನ್ನವರು ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. ಕೆಆರ್ ಪೇಟೆ ಶಿವರಾಜ್ ತಾನೊಬ್ಬ ಸಮರ್ಥ ಹಾಸ್ಯ ನಟ ನನ್ನನ್ನು ಹೆಚ್ಚಾಗಿ ಬಳಸಿಕೊಳ್ಳಿ ಅಂತ ಕನ್ನಡ ಚಿತ್ರೋದ್ಯಮಕ್ಕೆ ಹೇಳಿಕೊಳ್ಳುತ್ತಿರುವಂತೆ ತೆರೆಯ ಮೇಲೆ ನಗಿಸುತ್ತಾರೆ. ಕ್ಲೈಮ್ಯಾಕ್ಸ್ ಮುಂಚೆ ಬರುವ ಕೋರ್ಟ್ ದೃಶ್ಯದಲ್ಲಿ ಸಾಧುಕೋಕಿಲ ಅವರು ಮಾಡುವ ಹಾಸ್ಯ ನೋಡಿ ಬಿದ್ದು ಬಿದ್ದು ನಗದೇ ಇರಲು ಸಾಧ್ಯವಿಲ್ಲ. ನಾನೇನು ಕಮ್ಮಿ ಅನ್ನೋ ಹಾಗೆ ರಂಗಾಯಣ ರಘು ಕೂಡ ಒಂದೆರಡು ದೃಶ್ಯಗಳಲ್ಲಿ ನಗಿಸುತ್ತಾರೆ. ಪೋಷಕ ಪಾತ್ರಗಳಲ್ಲಿ ಅವಿನಾಶ್, ಚಿತ್ರಾ ಶೆಣೈ ಹಾಗೂ ಪ್ರಕಾಶ್ ಬೆಳವಾಡಿ ಅವರು ಗಮನ ಸೆಳೆಯುತ್ತಾರೆ.

ತಾಂತ್ರಿಕತೆ

ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರು ಯಾವುದೇ ಲೋಪವಿಲ್ಲದೆ ಬಹಳ ನೀಟಾಗಿ “ಟು ಕಂಟ್ರಿಸ್” ಮಲಯಾಳಂ ಚಿತ್ರವನ್ನು ಕನ್ನಡಕ್ಕೆ ರೀಮೇಕಿಸಿದ್ದಾರೆ. ನಟ ನಟಿಯರಿಂದ ಉತ್ತಮ ಅಭಿನಯ ತೆಗೆದಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಯಾವ ಹಾಡು ಕೂಡ ಗಮನ ಸೆಳೆಯದಿರುವುದು ಆಶ್ಚರ್ಯ ಎನಿಸುತ್ತದೆ.

ಕೊನೆಯ ಮಾತು

ಅಧ್ಯಕ್ಷ ಇನ್ ಅಮೆರಿಕ ಹೇಗೋ ಆಡಿಯನ್ಸ್ ಗಳನ್ನು ನಗಿಸಿ ಬಿಟ್ಟರೆ ಸಾಕು ಅಂತ ಸುಖಾಸುಮ್ಮನೆ ಹಾಸ್ಯ ದೃಶ್ಯಗಳನ್ನು ಪೋಣಿಸಿ ಕಟ್ಟಿಕೊಟ್ಟಿರುವ ಕಾಮಿಡಿ ಫಿಲ್ಮ್ ಅಲ್ಲ. ಸಿನಿಮಾದಲ್ಲಿ ಬಹಳ ಒಳ್ಳೆಯ ಕಥೆ ಇದೆ, ಪ್ರೇಕ್ಷಕರನ್ನು ರಂಜಿಸುತ್ತಲೇ ನೋಡಿಸಿಕೊಂಡು ಹೋಗುವ ಚಿತ್ರಕಥೆ ಇದೆ. ಯಾವುದೇ ಅಸಭ್ಯತೆ ಇಲ್ಲದ ಸಾಂದರ್ಭಿಕ ಹಾಸ್ಯ ದೃಶ್ಯಗಳು ಮನಸ್ಫೂರ್ತಿಯಾಗಿ ನಗಿಸುತ್ತವೆ. ಶರಣ್ ಅವರು ಕನ್ನಡ ಆಡಿಯನ್ಸ್ ಅವರ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಕೂತು ನೋಡಿ ಎಂಜಾಯ್ ಮಾಡಬಹುದಾದ ಒಂದೊಳ್ಳೆ ಸಿನಿಮಾ ಕೊಡುವುದರ ಮೂಲಕ ನನ್ನ ಸಿನಿಮಾಗೆ ಕೊಟ್ಟ ಟಿಕೆಟ್ ದುಡ್ಡು ಮೋಸವಾಗುವುದಿಲ್ಲ ಎಂಬ ಸಂದೇಶವನ್ನು ಕ್ಲಿಯರ್ ಕಟ್ ಆಗಿ ಮಗದೊಮ್ಮೆ ಹೇಳಿದ್ದಾರೆ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top