RESPONSIVE LEADERBOARD AD AREA
Film News

ದುಃಖದ ನಡುವೆಯೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿರುವ ಅಭಿಷೇಕ್

ತಮ್ಮ ತಂದೆ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡು ದುಃಖತಪ್ತರಾಗಿರುವ ಪುತ್ರ ಅಭಿಷೇಕ್, ತಮ್ಮ ‘ಅಮರ್’ ಚಿತ್ರದ ಶೂಟಿಂಗ್ ನಲ್ಲಿ ಪುನಃ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣದಲ್ಲಿ ಅಭಿಷೇಕ್ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅಂಬರೀಶ್ ನಿಧನರಾಗಿದ್ದರಿಂದ ತಾತ್ಕಾಲಿಕ ಸ್ಥಗಿತ ವಾಗಿತ್ತು.

ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣವು ಇದೇ ಡಿಸೆಂಬರ್ 11 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ಅಭಿಷೇಕ್ ಪಾಲ್ಗೊಳ್ಳುವುದು  ಖಚಿತವಾಗಿದೆ. ನಗರದ ಮಾಲ್ ಒಂದರಲ್ಲಿ ನಡೆಯುವ ಫೈಟಿಂಗ್ ದೃಶ್ಯಗಳ ಚಿತ್ರೀಕರಣ ದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಮಹದಾಸೆಯನ್ನು ಹೊತ್ತಿದ್ದ ರೆಬಲ್ ಸ್ಟಾರ್, ಚಿತ್ರ ಪೂರ್ಣಗೊಳ್ಳುವ ಮುನ್ನವೇ ದುರದೃಷ್ಟವಶಾತ್ ಮಗನನ್ನು ಅಗಲಿದ್ದಾರೆ. ಈ ದುಃಖದ ನಡುವೆಯೂ ತಂದೆಯ ಆಸೆಯನ್ನು ಪೂರೈಸುವ ಜವಾಬ್ದಾರಿ ಹೊತ್ತಿರುವ ಅಭಿಷೇಕ್ ಮತ್ತೊಮ್ಮೆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

‘ಒಲವಿನ ಉಡುಗೊರೆ ಕೊಡಲೇನು ರಕುತದಿ ಬರೆದೆನು ಇದ ನಾನು…’ಇದು ಅಂಬರೀಶ್ ನಟಿಸಿದ ‘ಒಲವಿನ ಉಡುಗೊರೆ’ ಚಿತ್ರದ ಈ ಗೀತೆ.  ‘ಅಮರ್’ ಚಿತ್ರದಲ್ಲಿ  ಈ ಗೀತೆಯನ್ನು ಬಳಸಿಕೊಳ್ಳಲು ಚಿತ್ರದ ನಿರ್ದೇಶಕ ನಾಗಶೇಖರ್ ನಿರ್ಧರಿಸಿದ್ದಾರೆ. ಡಿ.ರಾಜೇಂದ್ರ ಬಾಬು ನಿರ್ದೇಶನದ ‘ಒಲವಿನ ಉಡುಗೊರೆ’ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದರು. ಅಂಬರೀಶ್ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ ಈ ಗೀತೆ ಅವರ ಅಭಿಮಾನಿಗಳನ್ನು ಇನ್ನಷ್ಟು ಭಾವುಕರನ್ನಾಗಿಸಿತ್ತು. ಈಗ ಅವರ ಪುತ್ರನ ಚಿತ್ರದಲ್ಲಿ ಈ ಗೀತೆಯನ್ನು ಮತ್ತೊಮ್ಮೆ ನೋಡಲು ರೆಬಲ್ ಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಭಿಷೇಕ್ ಮತ್ತು ತಾನ್ಯ ಹೋಪ್‌ ಚಿತ್ರದಲ್ಲಿ ಬೈಕ್ ಸವಾರರಾಗಿ ದೇಶ ಸುತ್ತುವ ಹವ್ಯಾಸ ಹೊಂದಿರುತ್ತಾರೆ. ಕೊಯಿಮತ್ತೂರು, ಬೆಳಗಾಂ, ಮಣಿಪಾಲ್, ಮಂಗಳೂರು, ಮಡಿಕೇರಿ, ಗೋಣಿಕೊಪ್ಪ ಸೋಮವಾರಪೇಟೆ ಅಲ್ಲದೆ ಕೇರಳದ ಕೆಲವು ಭಾಗಗಳಲ್ಲಿ ಸಂಚರಿಸುತ್ತಿರುವ ಭಾಗಗಳನ್ನು ಚಿತ್ರಿಸಲಾಗಿದ್ದು, ಇವರ ಬೈಕ್ ಯಾನವನ್ನು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಕೂಡ ಚಿತ್ರೀಕರಿಸಲಾಗಿದೆ.

ಈ ಚಿತ್ರವನ್ನು ಸಂದೇಶ್ ನಾಗರಾಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ತಾನ್ಯಾ ಹೋಪ್, ಅಭಿಷೇಕ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿಕ್ಕಣ್ಣ, ಹಿರಿಯ ನಟಿ ಸುಧಾರಾಣಿ, ದೀಪಕ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸತ್ಯ ಹೆಗಡೆ ಕ್ಯಾಮರಾ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top