ಸಿನಿಮಾ ರಂಗದಲ್ಲಿ 4 ದಶಕಗಳನ್ನು ನೋಡಿರುವ ಹಿರಿಯ, ಅತ್ಯಂತ ಪ್ರಬುದ್ಧ ನಿರ್ದೇಶಕ ಪಿ ವಾಸು ಅವರು ದ್ವಾರಕೀಶ್ ಚಿತ್ರ ಸಂಸ್ಥೆಯೊಂದಿಗೆ ಈ ಹಿಂದೆ ಕಲೆತಾಗ ಆಪ್ತಮಿತ್ರ ಅನ್ನೋ ಕ್ಲಾಸಿಕ್ ಇಂಡಸ್ಟ್ರಿ ಹಿಟ್ ಸಿನಿಮಾ ಸಿನಿ ಪ್ರಿಯರಿಗೆ ದೊರಕಿತ್ತು. ಈಗ ಮತ್ತೊಮ್ಮೆ ದ್ವಾರಕೀಶ್ ಚಿತ್ರ ಸಂಸ್ಥೆಯೊಂದಿಗೆ, ಅದೂ ಹ್ಯಾಟ್ರಿಕ್ ಹೀರೊ ಶಿವಣ್ಣ ಅವರೊಂದಿಗೆ 2ನೇ ಬಾರಿ ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಹೊರಬಿದ್ದಾಗಲೇ ಕನ್ನಡ ಸಿನಿ ಪ್ರಿಯರು ಒಳ್ಳೆಯ ವಿಷಯ ಕೇಳಿದವರಂತೆ ಖುಷಿಯಾದರು. ಈ ಬಾರಿ ಮತ್ತೊಂದು ಹಾರರ್ ಥ್ರಿಲ್ಲರ್ ಮೂಲಕ ಅವರು ಬರಬಹುದು ಎಂದು ಎಲ್ಲರೂ ದೊಡ್ಡ ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದರು. ಪ್ರೇಕ್ಷಕರ ಎಲ್ಲ ನಿರೀಕ್ಷೆಗಳನ್ನು ತಲುಪುತ್ತಲೇ, ಪಿ ವಾಸು ಮತ್ತೆ ಬಂದಿದ್ದಾರೆ ಆದರೆ ಹಾರರ್ ಸಿನಿಮಾದಿಂದಲ್ಲ, ಸೈಕಲಾಜಿಕಲ್ ಮ್ಯೂಸಿಕಲ್ ಫ್ಯಾಮಿಲಿ ಸಿನಿಮಾದೊಂದಿಗೆ.
ಕತೆ
ಎಲ್ಲವೂ ಇರುವ ಸುಭಿಕ್ಷಿತ, ಸುಶಿಕ್ಷಿತ ಶ್ರೀಮಂತ ಕುಟುಂಬವೊಂದಕ್ಕೆ ಅದೊಂದು ದಿನ “ಕೃಷ್ಣ” ಬಂದು ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಬಂದ ದಿನವೇ ಮನೆ ಮಂದಿ ಎಲ್ಲರ ಮೆಚ್ಚುಗೆ ಗಳಿಸುವ ಆತ ಮುಖ್ಯವಾಗಿ ಮನೆಯ ಯಜಮಾನರಿಗೆ ಬಹಳ ಆಪ್ತನೆನಿಸಿ ಬಿಡುತ್ತಾನೆ. ಅಂತಹ ಮನೆಯ ಹಿಂದಿರುವ ಔಟ್ ಹೌಸ್ ನಲ್ಲಿ ಆಗಾಗ ವಿಕಾರವಾದ ಶಬ್ದ ಕೇಳಿ ಬರುತ್ತಿರುವುದು ಏಕೆಂಬ ಅವನ ಪ್ರಶ್ನೆಗೆ ಮನೆಯೊಡೆಯ ಉತ್ತರ ನೀಡುವುದಿಲ್ಲ. ಆ ಮನೆಯ ಹಿಂದಿರುವ ಔಟ್ ಹೌಸ್ ಈ ಮನೆಯ ಒಳಗಿರುವವರ ಮನಸ್ಸಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದು ಅರಿತ ಕೃಷ್ಣ, ಹಿಂದೆ ಮುಂದೆ ಯೋಚನೆ ಮಾಡದೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತಾನೆ. ಅಸಲು ಈ ಔಟ್ ಹೌಸ್ ನಲ್ಲಿ ವಿಕಾರ ಶಬ್ದ ಮಾಡುತ್ತಾ ಬದುಕುತ್ತಿರುವವರು ಯಾರು? ಇಡೀ ಕುಟುಂಬದ ಶ್ರೇಯೋಭಿಲಾಷಿಯಾಗಿ ನಿಂತಿರುವ ಈ ಕೃಷ್ಣ ಯಾರು? ಎಲ್ಲ ಸಮಸ್ಯೆಗಳ ಮೂಲ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೇ “ಆಯುಷ್ಮಾನ್ ಭವ” ಸಿನಿಮಾ ಸಾರಾಂಶ.
ಅಭಿನಯ
ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವಂತಹ ಚೆಂದದ ಪಾತ್ರ ಇಲ್ಲಿ ಶಿವಣ್ಣ ಅವರಿಗೆ ಸಿಕ್ಕಿದೆ. ಅಬ್ಬಾ ಅದೆಷ್ಟು ಅಚ್ಚುಕಟ್ಟಾಗಿ ಪಾತ್ರಕ್ಕೆ ಪರಕಾಯ ಪ್ರವೇಶಮಾಡಿ ಅಭಿನಯಿಸುತ್ತಾರೆ ಇವರು ಎಂದು ಅನಿಸುವಷ್ಟರ ಮಟ್ಟಿಗೆ ಶಿವಣ್ಣ ತೆರೆಯಮೇಲೆ ವಿಜೃಂಭಿಸುತ್ತಾರೆ. ರಚಿತಾರಾಮ್ ಅವರು ಇಲ್ಲಿವರೆಗೆ ಕಾಣಿಸಿಕೊಂಡ ಪಾತ್ರಗಳಲ್ಲೇ ಚಾಲೆಂಜಿಂಗ್ ಎನಿಸುವಂತಹ ಪಾತ್ರ ಸಿಕ್ಕಿದೆ, ಅದನ್ನವರು ಸಶಕ್ತವಾಗಿ ನಿರ್ವಹಿಸಿದ್ದಾರೆ. ಲೆಜೆಂಡರಿ ನಟ ಅನಂತನಾಗ್ ಇಂತಹ ಸಿನಿಮಾಗಳಲ್ಲಿ ತನ್ನ ಇರುವಿಕೆ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತಾರೆ. ರಮೇಶ್ ಭಟ್, ಯಶವಂತ್ ಶೆಟ್ಟಿ, ರಂಗಾಯಣ ರಘು ಅವರುಗಳು ತಮ್ಮ ಅಚ್ಚುಕಟ್ಟಾದ ಪಾತ್ರ ಪೋಷಣೆಯಿಂದ ನೋಡುಗರಿಗೆ ಖುಷಿ ನೀಡಿದ್ದಾರೆ.
ತಾಂತ್ರಿಕತೆ
ಪಿ ವಾಸು ಡೈರೆಕ್ಷನ್ ಅಂದ್ರೆ ಹಾರರ್ ಸಿನಿಮಾ ಫಿಕ್ಸ್ ಅಂದುಕೊಂಡವರಿಗೆ ಇಲ್ಲಿ ನಿರಾಸೆ ಕಾದಿದೆ. ಹಾಗಂತ ಸಿನಿಮಾ ನಿಮಗೆ ನಿರಾಸೆ ಮಾಡೋದಿಲ್ಲ. ಪಿ ವಾಸು ಅವರು ತಮಗೆ ಸಿದ್ಧಿಸಿರುವ ಕಥೆ ಹೇಳುವ ಕಲೆಯನ್ನು ಈ ಬಾರಿ ಸೈಕಲಾಜಿಕಲ್ ಮ್ಯೂಸಿಕಲ್ ಸಿನಿಮಾ ಮಾಡುವಲ್ಲಿ ತೊಡಗಿಸಿದ್ದಾರೆ. ಶ್ರೀಮಂತ ಕುಟುಂಬವೊಂದನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ರೀತಿ, ಒಂದು ಸಸ್ಪೆನ್ಸ್ ಕಾಯ್ದುಕೊಂಡೇ ದೃಶ್ಯಗಳನ್ನು ಹೆಣೆಯುವ ರೀತಿ, ಏನೂ ಇಲ್ಲದವನಂತೆ ಕಾಣಿಸಿಕೊಳ್ಳುವ ಆದರೆ ಎಲ್ಲವೂ ಇರುವ, ಏನು ಬೇಕಾದರೂ ಮಾಡಬಲ್ಲ ಸಮರ್ಥ ನಾಯಕನ ಚಿತ್ರಣ.. ಹೀಗೆ ವಾಸು ಬ್ರ್ಯಾಂಡ್ ನ ಹೈಲೈಟ್ ಅಂಶಗಳು ಇಲ್ಲಿಯೂ ಇವೆ ಹಾಗೂ ಅವು ಪ್ರೇಕ್ಷಕರಿಗೆ ಖುಷಿ ಕೊಡುವಂತೆ ತೆರೆಯ ಮೇಲೆ ಹರಡಿಕೊಂಡಿವೆ. ತಮ್ಮ 100ನೇ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಗುರುಕಿರಣ್ ಅವರು ಸಂಗೀತ ನೀಡಿರುವ ಹಾಡುಗಳು ಸಿನಿಮಾ ನೋಡುವಾಗ ಕಥೆಯ ಭಾಗವಾಗಿ ಮಾತ್ರ ಭಾಸವಾಗುತ್ತವೆ. ಪಿಕೆಎಚ್ ದಾಸ್ ಅವರ ಛಾಯಾಗ್ರಹಣದಲ್ಲಿ ಚಿತ್ರದ ಶ್ರೀಮಂತಿಕೆ ಎದ್ದು ಕಂಡಿದೆ. ಸಿನಿಮಾದಲ್ಲಿ ಬಳಸಿರುವ ಗ್ರಾಫಿಕ್ಸ್ ಚಿತ್ರದ ಅದ್ಧೂರಿತನಕ್ಕೆ ತಕ್ಕದಾಗಿ ಮೂಡಿ ಬಂದಿಲ್ಲ. ವಿ ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯದ ಒಂದೊಂದು ಸಾಲೂ ಚಿತ್ರದ ಕಥೆ ಹಾಗೂ ಪಾತ್ರಗಳಿಗಿರುವ ತೂಕಕ್ಕೆ ತಕ್ಕ ಹಾಗೆ ಮೈತಳೆದಿವೆ.
ಕೊನೆಯದಾಗಿ
ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾದ ದ್ವಾರಕೀಶ್ ಚಿತ್ರ ಅವರ ಸಂಸ್ಥೆಗಿರುವ ಘನತೆಗೆ ತಕ್ಕುದಾದ ಸಿನಿಮಾ “ಆಯುಷ್ಮಾನ್ ಭವ” ಸಕುಟುಂಬ ಸಮೇತರಾಗಿ ಹೋಗಿ ನೋಡಿ ಖುಷಿಪಡುವಂತಹ ಸಿನಿಮಾ. ಶಿವಣ್ಣ ಅವರ ಅಭಿಮಾನಿಗಳಿಗಂತೂ ಹೆಚ್ಚಾಗಿ ಇಷ್ಟವಾಗುವ ಸಿನಿಮಾ.
-
Rating
