RESPONSIVE LEADERBOARD AD AREA
Film News

ಅಂದವಾಗಿ ಅಚ್ಚುಕಟ್ಟಾಗಿ ಪೋಣಿಸಿದ ಪುರಾಣ

ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಹಿಡಿಸುವ “ರೊಮ್ಯಾಂಟಿಕ್ ಕಾಮಿಡಿ” ನಮ್ಮ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಆಗಿರುವ ಜಾನರ್ ಗಳಲ್ಲಿ ಒಂದು. ಒಳ್ಳೆಯ ವಿಷಯಗಳನ್ನಿಟ್ಟು ರಂಜನೀಯವಾಗಿ ತೆರೆಗೆ ತಂದರೆ ಈ ಜಾನರ್ ನ ಸಿನಿಮಾಗಳು ಎಂದೆದಿಗೂ ಗೆಲ್ಲುತ್ತವೆ ಅನ್ನೋದು ಸಿನಿಮಾ ಮಾಡೋರು ನಂಬಿರುವ ಸತ್ಯ.

ಇದೇ ನಿಟ್ಟಿನಲ್ಲಿ ಮಾಡಿರುವ “ಆದಿಲಕ್ಷ್ಮಿ ಪುರಾಣ” ಸಿನಿಮಾ ತನ್ನ ಹಲವು ಅಂಶಗಳಿಂದ ಗಮನ ಸೆಳೆದು ರಂಜಿಸುತ್ತದೆ. ಹೆಸರಲ್ಲೇ ಪುರಾಣ ಇದ್ದರೂ ಹಳೆಯ ಲವ್ ಸ್ಟೋರಿ ಕ್ಲೀಷೆಗಳಿಗೆ ಬಲಿಯಾಗದ ಈ ಸಿನಿಮಾದಲ್ಲಿ ಕಥೆ ಕೇಳಿರುವಂತದ್ದೇ ಆದರೂ ಪಾತ್ರ ಪೋಷಣೆಯಲ್ಲಿ, ದೃಶ್ಯಗಳ ಹೆಣೆಯುವಿಕೆಯಲ್ಲಿ ಹೊಸತನ ಮತ್ತು ಪ್ರೌಢತೆ ಮೆರೆಯಲಾಗಿದೆ.

ಕತೆ

ಆದಿತ್ಯ ಒಬ್ಬ ಅಂಡರ್ ಕವರ್ ಪೊಲೀಸ್ ಆಫೀಸರ್. ಮೊದಲ ನೋಟದಲ್ಲೇ ಪ್ರೇಮವಾದರೆ ಮಾತ್ರ ಮದುವೆಯ ಬಗ್ಗೆ ಯೋಚಿಸಬಹುದೆಂದು ನಂಬಿರುವ ಯುವಕ. ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಲಕ್ಷ್ಮಿಗೆ ಸುಳ್ಳು ಹೇಳುವುದೇ ಕಾಯಕ. ಒಂದಷ್ಟು ಕೀಳರಿಮೆಗಳಿಂದ ಸುಳ್ಳನ್ನು ಪ್ರಾಯೋಗಿಕವಾಗಿಸಿಕೊಂಡಿರುವ ಮುದ್ದು ಹುಡುಗಿ ಅವಳು. ಇಂತಹ ಇವರಿಬ್ಬರು ಭೇಟಿಯಾದಾಗ ಅವನಿಗೆ ಮೊದಲ ನೋಟದಲ್ಲೇ ಪ್ರೇಮವಾಗುತ್ತದೆ, ಆದರೆ ಲಕ್ಷ್ಮಿಯ ಸುಳ್ಳುಬುರುಕತನದಿಂದ ಅವಳಿಗೆ ಈಗಾಗಲೇ ಮದುವೆಯಾಗಿದೆ ಎಂದು ಅವನು ತಪ್ಪು ತಿಳಿಯುತ್ತಾನೆ. ಇದೊಂದು ತಪ್ಪು ತಿಳಿವಳಿಕೆ ಏನೆಲ್ಲಾ ಅವಾಂತರ ಸೃಷ್ಟಿಸುತ್ತದೆ ಅನ್ನೋದೇ ಸಿನಿಮಾದ ರಂಜನೀಯ ಕಥೆ.

ಅಭಿನಯ

ಪೊಲೀಸ್ ಆಫೀಸರ್ ಆದಿತ್ಯನಾಗಿ, ಲವರ್ ಬಾಯ್ ಆದಿತ್ಯನಾಗಿ ನಿರೂಪ ಭಂಡಾರಿ ಪಾತ್ರಕ್ಕೆ ಒಪ್ಪುವಂತೆ ಕಾಣಿಸಿಕೊಂಡಿದ್ದರಾದರೂ ಅವರ ಅಭಿನಯ ಇನ್ನೂ ಮಾಗಬೇಕಾಗಿದೆ. ಇದು ಮದುವೆಯ ಸಣ್ಣ ಗ್ಯಾಪ್ನ ನಂತರ ತೆರೆಯ ಮೇಲೆ ಕಾಣಿಸಿಕೊಂಡಿರುವ ರಾಧಿಕಾ ಪಂಡಿತ್ ತಾವೇಕೆ ಸ್ಪೆಷಲ್ ಎಂದು ಸಾಬೀತು ಮಾಡುತ್ತಾರೆ. ಅವರ ಅಭಿನಯದಲ್ಲಿರುವ ಚಾಕಚಕ್ಯತೆ, ಮೆಚೂರಿಟಿ ಮತ್ತು ಕಾಮಿಡಿ ಟೈಮಿಂಗ್ ಅದ್ಭುತ. ನಿರೂಪ್ ಭಂಡಾರಿ ತಂದೆ ತಾಯಿಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ತಾರಾ ಎಂದಿನ ಚೆಂದದ ಅಭಿನಯ ನೀಡಿದ್ದಾರೆ.

ತಾಂತ್ರಿಕತೆ

ಮಣಿರತ್ನಂ ಅವರ ಬಳಿ ದುಡಿದ ಅನುಭವವಿರುವ ನಿರ್ದೇಶಕಿ ವಿ ಪ್ರಿಯ ಯೂನಿವರ್ಸಲ್ ಆದ ಕತೆಗೆ ನೈಜವೆನಿಸುವ ಸಿಂಪಲ್ ವಿಷಯಗಳಲ್ಲೇ ದೃಶ್ಯಗಳನ್ನು ಪೋಣಿಸಿ ನೋಡುಗರಿಗೆ ಹಿತವಾದ ಅನುಭವವಾಗುವಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅನೂಪ್ ಭಂಡಾರಿ ಅವರ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿದೆ. ಹಾಡುಗಳು ಕಥೆಯ ಜೊತೆಗೆ ನೋಡಿಸಿಕೊಂಡು ಹೋದರೂ ಸಿನಿಮಾ ನೋಡಿದ ಮೇಲೆ ತಲೆಯಲ್ಲಿ ಉಳಿಯುವಂತಹವಲ್ಲ. ಪ್ರೀತಾ ಅವರ ಛಾಯಾಗ್ರಹಣ ಕಣ್ಣಿಗೆ ಆನಂದವನ್ನು ನೀಡುವ ಬಣ್ಣಗಳಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಪ್ರಶಾಂತ್ ರಾಜಪ್ಪ ಬರೆದಿರುವ ಸಂಭಾಷಣೆ ಸಿನಿಮಾ ಅನಾವಶ್ಯಕ ಪಂಚು ಪಿಂಚುಗಳಿಂದ ಕೂಡಿರುವ ಸಂಭಾಷಣೆಯಂತೆ ಇರದೇ ಸಂದರ್ಭಕ್ಕೆ ರುಚಿ ನೀಡುವಂತೆ ಸಹಜವಾಗಿ ಮೂಡಿ ಬಂದಿರುವುದು ಚಿತ್ರದ ಅಂದ ಹೆಚ್ಚಿಸಿದೆ.

ಕೊನೆಯದಾಗಿ

ಆದಿಲಕ್ಷ್ಮಿ ಪುರಾಣ ಒಂದು ಟಿಪಿಕಲ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ಇಲ್ಲಿ ಕುಟುಂಬವಿದೆ, ನಮ್ಮ ಮನೆಯದೇ ಹುಡುಗಿ ಎನ್ನುವಂತಹ ನಾಯಕಿ ಇದ್ದಾಳೆ, ಒಳ್ಳೆಯ ಮನಸ್ಸಿನ ನಾಯಕನಿದ್ದಾನೆ, ಗಮನ ಸೆಳೆಯುವ ಕಥೆಯಿದೆ. ಡಬ್ಬಲ್ ಮೀನಿಂಗ್ ಇಲ್ಲದ ಶುದ್ಧ ಹಾಸ್ಯ ಚಿತ್ರದ ದೊಡ್ಡ ಪ್ಲಸ್ಸು. ಹೀಗಾಗಿ ಎರಡು ಗಂಟೆಗಳ ಕಾಲ ನಮ್ಮ ದೈನಂದಿನ ಜಂಜಾಟ ಮರೆತು ಒಂದು ಒಳ್ಳೆಯ ಸಿನಿಮಾ ನೋಡಬೇಕೆಂಬ ಬಯಕೆ ಇರುವವರು ಆದಿಲಕ್ಷ್ಮಿ ಪುರಾಣ ಆರಾಮಾಗಿ ನೋಡಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top