RESPONSIVE LEADERBOARD AD AREA
Film News

ಕೌತುಕ ಭರಿತ “ಆ ದೃಶ್ಯ” ಎಂಬ ಥ್ರಿಲ್ಲಿಂಗ್ ಜರ್ನಿ

‘ಆ ದೃಶ್ಯ’ ಒಂದು ಮರ್ಡರ್ ಮಿಸ್ಟರಿ ಸಿನಿಮಾ. ಆದ್ರೆ, ರೆಗ್ಯೂಲರ್ ಮರ್ಡರ್ ಮಿಸ್ಟರಿ ಚಿತ್ರಗಳಿಗಿಂತ ತುಂಬ ವಿಭಿನ್ನ ಹಾಗೂ ನೈಜತೆ ಸಿನಿಮಾದ ಬಲ. ಸಿನಿಮಾದಲ್ಲಿ ಬಹಳ ಜಾಣ್ಮೆಯಿಂದ ಪೋಣಿಸಿದ ದೃಶ್ಯಗಳ ಚಿತ್ರಕಥೆಯಿದ್ದು, ಕೊನೆಯ ದೃಶ್ಯದವರೆಗೂ ಕುತೂಹಲವನ್ನು ಹಿಡಿದಿಟ್ಟು ಪ್ರೇಕ್ಷಕರನ್ನ ರಂಜಿಸುವ ಕೌತುಕವಿದೆ.

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬ ಐದು ವರ್ಷದ ಹಿಂದೆ ತನ್ನ ಅಧಿಕಾರಾವಧಿಯಲ್ಲಿ ಭಾಗವಹಿಸಿದ ಕೊಲೆ ಕೇಸ್ ಒಂದರ ಬಗ್ಗೆ ಮನೆಗೆ ಅತಿಥಿಯಾಗಿ ಬಂದಿರುವ, ಐಪಿಎಸ್ ಅಧಿಕಾರಿಯಾಗುವ ಕನಸು ಹೊತ್ತ ಯುವಕನಿಗೆ ಕೇಸ್‌ ಕತೆ ಹೇಳಲು ಶುರುವಿಟ್ಟುಕೊಳ್ಳುತ್ತಾನೆ. ರಸ್ತೆ ಮಧ್ಯದಲ್ಲೊಂದು ಸೂಸೈಡ್ ನಂತೆ ಕಾಣುವ ಹೆಣ ಸಿಕ್ಕಿದೆ ಎಂಬ ಮಾಹಿತಿ ಹೊತ್ತು ಸ್ಥಳಕ್ಕೆ ತೆರಳುವ ಪೊಲೀಸ್ ಅಧಿಕಾರಿಗೆ ಅಲ್ಲಿನ ಪರಿಸ್ಥಿತಿಗಳನ್ನು ಪರಿಶೀಲಿಸಿದಾಗ ಹಾಗೂ ಜೊತೆಯಲ್ಲಿರುವ ಬುದ್ಧಿವಂತ ಕಾನ್ಸ್ಟೇಬಲ್ ನೀಡುವ ಸಾಕ್ಷಿಯಿಂದಾಗಿ ಕೊಲೆ ಆಗಿರಬಹುದು ಎಂಬ ನಿರ್ಧಾರಕ್ಕೆ ಬಂದು ಅನುಮಾನಾಸ್ಪದರಾಗಿರುವ ಎಲ್ಲರನ್ನು ತನಿಖೆಗೆ ಒಳಪಡಿಸುತ್ತಾನೆ . ಅದೇ ಸ್ಥಳಕ್ಕೆ ಹತ್ತಿರದಲ್ಲೇ ಒಂದು ಹುಡುಗಿ ಕಾಣೆಯಾಗಿರುವುದು ಬೆಳಕಿಗೆ ಬರುತ್ತದೆ. ಇದರ ಬಗ್ಗೆ ಮತ್ತಷ್ಟು ವಿಚಾರಣೆ ಮಾಡಿದಾಗ ಈ ಎರಡು ಪ್ರಕರಣಗಳು ಒಂದಕ್ಕೊಂದು ಬೆಸೆದುಕೊಂಡಿರುವುದು ಗೊತ್ತಾಗುತ್ತೆ. ಉತ್ಸಾಹಿ ಕಾನ್ಸ್ಟೇಬಲ್ ಜೊತೆಗೂಡಿ ಕೇಸ್ ನಲ್ಲಿರುವ ಎಲ್ಲ ಒಗಟುಗಳನ್ನು ಬಿಡಿಸಿದರೂ, ಕೊಲೆಗಾರರನ್ನು ಪತ್ತೆ ಹಚ್ಚಿದರೂ ಅವರನ್ನು ಬಂಧಿಸಲು ಆ ಪೊಲೀಸ್ ಅಧಿಕಾರಿಗೆ ಸಾಧ್ಯವಾಗುವುದೇ ಇಲ್ಲ. ಯಾಕೆ? ಅಂತಹ ಚಾಣಾಕ್ಷ ಪೊಲೀಸ್ ಆದವನು ಕೇಸನು ಬಗೆಹರಿಸುವ ಗೋಜಿಗೆ ಹೋಗದೆ ಹಾಗೇ ಬಿಟ್ಟು ಏಕೆ ನಿವೃತ್ತನಾಗಿದ್ದಾನೆ? ಅದನ್ನು ನೀವು ತೆರೆಯ ಮೇಲೆಯೇ ನೋಡಬೇಕು.

ಆ ದೃಶ್ಯ ಚಿತ್ರದ ಕಥೆ ತೀರಾ ಹೊಸದು ಅನ್ನುವ ಹಾಗೆ ಏನೂ ಇಲ್ಲ. ಆದರೆ ಆ ಕಥೆಯನ್ನು ಕಟ್ಟಿಕೊಟ್ಟಿರುವ ರೀತಿ ಅದ್ಭುತ. ಸಿನಿಮಾ ಶುರುವಾದ ಸ್ವಲ್ಪದರಲ್ಲೇ ನೋಡುಗ ತನ್ನನ್ನು ತಾನು ಕತೆಯೊಳಗೆ ಮುಳುಗಿಸಿಕೊಳ್ಳುತ್ತಾನೆ. ಹೀಗಾಗಿರಬಹುದಾ? ಇವನೇ ಕೊಲೆಗಾರನಾ? ಎಂದೆಲ್ಲಾ ಪ್ರೇಕ್ಷಕ ಯೋಚಿಸುವ ಮಟ್ಟಿಗೆ ಕಥೆ ಬರ ಸೆಳೆದುಕೊಳ್ಳುತ್ತದೆ. ಚಿತ್ರಕಥೆ ಉದ್ದಕ್ಕೂ ಊಹಿಸಿರದ ಸರ್ಪ್ರೈಸ್ ಪ್ರೇಕ್ಷಕರಿಗೆ ಎದುರಾಗುತ್ತಲೇ ಇರುತ್ತವೆ. ಇದೇ ಚಿತ್ರದ ವಿಶೇಷ ಗುಣ. ಹೀಗಾಗಿಯೇ ಆ ದೃಶ್ಯ ಒಂದು ಒಳ್ಳೆಯ ಸಸ್ಪೆನ್ಸ್ ಸಿನಿಮಾ ಆಗಿ ಗೆಲ್ಲುತ್ತದೆ.

ಸಿನಿಮಾದಲ್ಲಿ ರವಿಚಂದ್ರನ್ ಅವರು ಪೋಷಣೆ ಮಾಡಿರುವ ಪೊಲೀಸ್ ಪಾತ್ರಕ್ಕೆ ಅನಾವಶ್ಯಕ ಬಿಲ್ಡಪ್ ಆಗಲಿ, ಅಸಾಮಾನ್ಯ ಗುಣಲಕ್ಷಣಗಳಾಗಲಿ ಇಲ್ಲ. ಅವನು ನೀವು ಪೊಲೀಸ್ ಸ್ಟೇಷನ್ ಗಳಲ್ಲಿ ನೋಡಿರುವಂತಹ ಒಬ್ಬ ಸರ್ವೇ ಸಾಧಾರಣ ಪೊಲೀಸ್ ಅಧಿಕಾರಿ. ಅಂತಹ ನೈಜ ಪಾತ್ರದಲ್ಲಿ ಕ್ರೇಜಿಸ್ಟಾರ್ ಮಾಗಿದ ಅಭಿನಯ ನೀಡಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಯಶವಂತ್ ಶೆಟ್ಟಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.

ಆ ದೃಶ್ಯ ಚಿತ್ರ ಅನಾವಶ್ಯಕ ಕಮರ್ಷಿಯಲ್ ಅಂಶಗಳ ತೊಡಕುಗಳಿಲ್ಲದೆ ಒಂದು ಪದರ ಪದರವಾಗಿ ಬಿಡಿಸಿಕೊಳ್ಳುವ ಕೌತುಕಮಯ ಘಟನೆಗಳ ಚಿತ್ರಣವಾಗಿ ನಮ್ಮೆದುರು ನಿಲ್ಲುತ್ತದೆ. ಗೌತಮ್ ಶ್ರೀವತ್ಸ ಚಿತ್ರದ ಭಾವಕ್ಕೆ ತಕ್ಕನಾದ ಅತ್ಯುತ್ತಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಶಿವಗಣೇಶ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಒಟ್ಟಾರೆಯಾಗಿ “ಆ ದೃಶ್ಯ” ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದರ ಜೊತೆಗೆ, ಕೊನೆಯ 20 ನಿಮಿಷಗಳಲ್ಲಿ ಸಿಗುವ ಆ ಅನಪೇಕ್ಷಿತ ಶಾಕಿಂಗ್ ಟ್ವಿಸ್ಟ್ ಗಳ ಕಾರಣದಿಂದ ಸೂಪರ್‌ ಸಸ್ಪೆನ್ಸ್ ಗುರು ಅನಿಸುವಂತೆ ಮಾಡುತ್ತೆ. ಥ್ರಿಲ್ಲರ್ ಜಾನರ್ ಸಿನಿಮಾ ಆಸ್ವಾದಿಸುವ ಪ್ರೇಕ್ಷಕರಿಗೆ “ಆ ದೃಶ್ಯ” ಮಸ್ಟ್ ವಾಚ್ ಚಿತ್ರ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top