
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹುನಿರೀಕ್ಷಿತ ‘ಟಾಕ್ಸಿಕ್’ (Toxic: A Fairy Tale for Grown-Ups) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಶನಿವಾರ ಅದ್ಧೂರಿಯಾಗಿ ಜರುಗಿತು. ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ ನಾರಾಯಣ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಚಿತ್ರತಂಡದ ಸದಸ್ಯರು ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ಅವರೊಂದಿಗಿನ ತಮ್ಮ ಕೆಲಸದ ಅನುಭವಗಳನ್ನು ಭಾವುಕರಾಗಿ ಹಂಚಿಕೊಂಡರು.

ಯಶ್ ಕೇವಲ ನಟನಲ್ಲ, ನನ್ನ ಪಾಲಿಗೆ ಒಂದು ಎಮೋಷನ್: ಗೀತು ಮೋಹನ್ದಾಸ್
ಈ ಚಿತ್ರವನ್ನು ಯಶ್ ಅವರೊಂದಿಗೆ ಸೇರಿ ಬರೆದು, ನಿರ್ದೇಶಿಸಿರುವ ಗೀತು ಮೋಹನ್ದಾಸ್, ವೇದಿಕೆ ಮೇಲೆ ತಮ್ಮ ತಾಯಿಯ ಬೆಂಬಲವನ್ನು ಸ್ಮರಿಸುತ್ತಾ ಭಾವುಕರಾದರು. ಯಶ್ ಬಗ್ಗೆ ಮಾತನಾಡಿದ ಅವರು, “ಯಶ್ ಜೊತೆ ಕೆಲಸ ಮಾಡಿದ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರು ಕೇವಲ ಅದ್ಭುತ ನಟ ಅಥವಾ ಸಹ-ಬರಹಗಾರ ಮಾತ್ರವಲ್ಲ, ಯಶ್ ನನ್ನ ಪಾಲಿಗೆ ಒಂದು ಎಮೋಷನ್ (ಭಾವನೆ). ನನ್ನ ಜೀವನದಲ್ಲಿ ನಾನು ಏನೇ ಸೃಷ್ಟಿಸಿದರೂ, ಯಶ್ ನೀವು ನನ್ನ ಸ್ಫೂರ್ತಿಯಲ್ಲಿ ಇರುತ್ತೀರಿ” ಎಂದರು. ‘ಲೈಯರ್ಸ್ ಡೈಸ್’ ಹಾಗೂ ‘ಮೂത്തോನ್’ ನಂತಹ ವಿಮರ್ಶಾತ್ಮಕ ಚಿತ್ರಗಳನ್ನು ನೀಡಿರುವ ಗೀತು ಅವರಿಗೆ ಇದು ಕನ್ನಡದ ಮೊದಲ ನಿರ್ದೇಶನದ ಚಿತ್ರವಾಗಿದೆ.
ಸಹಯೋಗದ ಮೌಲ್ಯವನ್ನು ಯಶ್ ಕಲಿಸಿದರು: ರುಕ್ಮಿಣಿ ವಸಂತ್
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರುಕ್ಮಿಣಿ ವಸಂತ್, ಈ ಚಿತ್ರದ ಮೂಲಕ ತಾವು ಕಲಿತ ಮೌಲ್ಯಗಳನ್ನು ಹಂಚಿಕೊಂಡರು. “ನಾನು ಒಬ್ಬ ಅಪ್ಪಟ ಅಭಿಮಾನಿಯಾಗಿ (ಫ್ಯಾನ್ಗರ್ಲ್) ಈ ಸೆಟ್ಗೆ ಕಾಲಿಟ್ಟೆ, ಆದರೆ ಯಶ್ ನನ್ನನ್ನು ಒಬ್ಬ ಸಹಯೋಗಿಯಾಗಿ (Collaborator) ಆಹ್ವಾನಿಸಿದರು. ಸೆಟ್ನಲ್ಲಿ ಪ್ರತಿಯೊಬ್ಬರಿಗೂ ತಮ್ಮ ಕೊಡುಗೆ ನೀಡಲು ಅವಕಾಶವಿದೆ ಎಂಬ ವಾತಾವರಣವನ್ನು ಸೃಷ್ಟಿಸುವುದು ಎಷ್ಟು ಮುಖ್ಯ ಎಂಬುದನ್ನು ಯಶ್ ಅವರಿಂದ ಕಲಿತೆ” ಎಂದರು.
ಕಷ್ಟಕರವಾದ ಪಾತ್ರವನ್ನು ನಿಭಾಯಿಸಲು ಬೆನ್ನೆಲುಬಾಗಿ ನಿಂತ ನಿರ್ದೇಶಕಿ ಗೀತು ಮೋಹನ್ದಾಸ್, ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಮತ್ತು ಛಾಯಾಗ್ರಾಹಕ ರಾಜೀವ್ ರವಿ ಸೇರಿದಂತೆ ಇಡೀ ತಾಂತ್ರಿಕ ಬಳಗಕ್ಕೆ ರುಕ್ಮಿಣಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಯಶ್ ಪತ್ನಿ ರಾಧಿಕಾ ಪಂಡಿತ್ ಅವರಿಗೆ “ನಾನು ನಿಮ್ಮ ದೊಡ್ಡ ಅಭಿಮಾನಿ, ಐ ಲವ್ ಯು” ಎಂದು ತಮ್ಮ ಪ್ರೀತಿ ವ್ಯಕ್ತಪಡಿಸಿದರು.
ಇದೊಂದು ಕನಸಿನ ಪಯಣ: ತಾರಾ ಸುತಾರಿಯಾ
ಬಾಲಿವುಡ್ ನಟಿ ತಾರಾ ಸುತಾರಿಯಾ ‘ಟಾಕ್ಸಿಕ್’ ಚಿತ್ರದ ಉಪಶೀರ್ಷಿಕೆ (A Fairy Tale for Grown-Ups) ಬಗ್ಗೆ ಮಾತನಾಡುತ್ತಾ, “ಜನ ನನ್ನನ್ನು ಹೆಚ್ಚಾಗಿ ಡಿಸ್ನಿ ಪ್ರಿನ್ಸೆಸ್ ಇಮೇಜ್ಗೆ ಹೋಲಿಸುತ್ತಿದ್ದರು. ಹಾಗಾಗಿ ‘ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಭಾಗವಾಗಿರುವುದು ನನಗೆ ಬಹಳ ಒಪ್ಪುವಂತಿದೆ. ಇದೊಂದು ಕನಸು ನನಸಾದ ಕ್ಷಣ. ಇಂತಹ ಅದ್ಭುತ ಕಥೆಯ ಭಾಗವಾಗಿರುವುದು ನನಗೆ ಅತ್ಯಂತ ಖುಷಿ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಯಶ್ ಕೆಲಸ ನೋಡುವುದೇ ಒಂದು ಶಿಕ್ಷಣ: ಸುದೇವ್ ಹಾಗೂ ಬಾಲಾಜಿ
ನಟ ಬಾಲಾಜಿ ಮನೋಹರ್ ಮಾತನಾಡಿ, ಯಶ್ ಅವರ ದೃಷ್ಟಿಕೋನ ಮತ್ತು ನಿರ್ದೇಶಕಿ ಗೀತು ಅವರ ಪ್ರತಿಯೊಂದು ಪಾತ್ರದ ಮೇಲಿನ ಗಮನವನ್ನು ಶ್ಲಾಘಿಸಿದರು. ಮತ್ತೋರ್ವ ನಟ ಸುದೇವ್ ನಾಯರ್, “ಟಾಕ್ಸಿಕ್ ಪ್ರತಿಯೊಬ್ಬ ನಟನಿಗೂ ಸಿಕ್ಕ ಒಂದು ಉಡುಗೊರೆ. ಯಶ್ ಅವರನ್ನು ಸೆಟ್ನಲ್ಲಿ ನೋಡುವುದೇ ಒಂದು ಶಿಕ್ಷಣವಿದ್ದಂತೆ. ಅವರು ಎಲ್ಲ ಪ್ರಶ್ನೆಗಳಿಗೂ ಅಷ್ಟೇ ಮುಕ್ತವಾಗಿ ಉತ್ತರಿಸುತ್ತಿದ್ದರು. ಇದೊಂದು ಕಮರ್ಷಿಯಲ್ ಸಿನಿಮಾದ ಎರಡು ವರ್ಷಗಳ ಶಿಕ್ಷಣದಂತೆ ಭಾಸವಾಯಿತು” ಎಂದು ತಮ್ಮ ಅನುಭವ ಹಂಚಿಕೊಂಡರು.
ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ: ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಸೇರಿದಂತೆ ಬಹುದೊಡ್ಡ ತಾರಾಗಣವಿರುವ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಮೂಲತಃ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ.