‘ಪಾರ್ಟ್‌ನರ್’ ಚಿತ್ರಕ್ಕಾಗಿ ಮತ್ತೆ ಒಂದಾದ ಅಜಯ್ ರಾವ್-ಕುನಾಲ್ ಗಂಜಾವಾಲ ಜೋಡಿ!

ಕನ್ನಡ ಸಂಗೀತ ಪ್ರಿಯರಿಗೆ ‘ತಾಜ್‌ಮಹಲ್’ ಚಿತ್ರದ ‘ಖುಷಿಯಾಗಿದೆ ಏಕೋ ನಿನ್ನಿಂದಲೇ…’ ಹಾಡು ನೆನಪಿದರೆ ಸಾಕು, ರೋಮಾಂಚನ ಉಂಟಾಗುತ್ತದೆ. ಬಾಲಿವುಡ್‌ನ ಖ್ಯಾತ ಗಾಯಕ ಕುನಾಲ್ ಗಂಜಾವಾಲ ಅವರು ಕಂಠಸಿರಿಯಲ್ಲಿ ಮೂಡಿಬಂದಿದ್ದ ಈ ಮಧುರ ಗೀತೆ, ‘ಕೃಷ್ಣ’ ಅಜಯ್ ರಾವ್ ಅವರ ವೃತ್ತಿಜೀವನದ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿ ಇಂದಿಗೂ ಮನೆಮಾತಾಗಿದೆ.

ಈಗ ಹಲವು ವರ್ಷಗಳ ಸುದೀರ್ಘ ವಿರಾಮದ ನಂತರ, ಗಾಯಕ ಕುನಾಲ್ ಗಂಜಾವಾಲ ಮತ್ತೆ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಬಾರಿಯೂ ಅವರು ನಟ ಅಜಯ್ ರಾವ್ ಅವರ ಅಭಿನಯದ ಚಿತ್ರಕ್ಕಾಗಿಯೇ ಹಾಡುತ್ತಿದ್ದಾರೆ.

ಅಜಯ್ ರಾವ್ ನಾಯಕನಾಗಿ ನಟಿಸುತ್ತಿರುವ ‘ಪಾರ್ಟ್‌ನರ್’ (Partner) ಸಿನಿಮಾದ ‘ಅಮೋರಾ’ (Amora) ಎಂಬ ಮೊದಲ ಸಿಂಗಲ್ ಹಾಡಿಗೆ ಕುನಾಲ್ ಧ್ವನಿಯಾಗಿದ್ದಾರೆ. ಈ ಹಿಟ್ ಕಾಂಬಿನೇಷನ್ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ಕುನಾಲ್ ಸೃಷ್ಟಿಸಿದ್ದ ಜಾದೂ

೨೦೦೦ರ ದಶಕದಲ್ಲಿ ಕುನಾಲ್ ಗಂಜಾವಾಲ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದರು:

  • ಆಕಾಶ್ (ನೀನೆಲ್ಲೋ ನಾನಲ್ಲೋ)
  • ಮುಂಗಾರು ಮಳೆ (ಒಂದೇ ಒಂದು ಸಾರಿ)
  • ಅರಸು (ಕಣ್ಣು ಮುಚ್ಚಿ ಕೂತಾಗ)
  • ಚೆಲುವಿನ ಚಿತ್ತಾರ (ಉಲ್ಲಾಸದ ಹೂಮಳೆಯೇ)
  • ಮಿಲನ, ಐಶ್ವರ್ಯ, ಚಾರ್‌ಮಿನಾರ್, ಅರಮನೆ ಮುಂತಾದ ಚಿತ್ರಗಳ ಹಿಟ್ ಗೀತೆಗಳು.

ಕಾಲಕ್ರಮೇಣ ಕನ್ನಡದಲ್ಲಿ ಅವರ ಹಾಡುಗಳು ಕಡಿಮೆಯಾಗಿದ್ದವು. ಈಗ ಮತ್ತೆ ಅವರು ಚಂದನವನಕ್ಕೆ ಮರಳಿರುವುದು ಅವರ ಸಂಗೀತ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ.

‘ಅಮೋರಾ’ ಹಾಡಿನ ವಿಶೇಶತೆಗಳು

  • ಸಂಗೀತ: ನಕುಲ್ ಅಭಯಂಕರ್
  • ಸಾಹಿತ್ಯ: ನಾಗಾರ್ಜುನ ಶರ್ಮ
  • ಚಿತ್ರೀಕರಣ: ಪುದುಚೇರಿ ಸುತ್ತಮುತ್ತ ವರ್ಣರಂಜಿತವಾಗಿ ಶೂಟ್ ಮಾಡಲಾಗಿದೆ.
  • ಕೊರಿಯೋಗ್ರಫಿ: ಮುರಳಿ ಮಾಸ್ಟರ್. ಈ ಹಾಡಿನಲ್ಲಿ ಅಜಯ್ ರಾವ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಪಾರ್ಟ್‌ನರ್’ ಸಿನಿಮಾ ಬಗ್ಗೆ…

‘ಧೈರ್ಯಂ’ ಚಿತ್ರದ ನಂತರ ನಿರ್ದೇಶಕ ಶಿವ ತೇಜಸ್ ಮತ್ತು ಅಜಯ್ ರಾವ್ ಜೋಡಿ ಈ ಚಿತ್ರದ ಮೂಲಕ ಎರಡನೇ ಬಾರಿ ಒಂದಾಗಿದೆ. ಆಧುನಿಕ ಸಂಬಂಧಗಳು, ಪ್ರೀತಿ, ಬ್ರೇಕಪ್ ಹಾಗೂ ಲಿವ್-ಇನ್ ರಿಲೇಷನ್‌ಶಿಪ್‌ಗಳ ಸುತ್ತ ಸಾಗುವ ಈ ಕಥೆಯು, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ನಂಬಿಕೆ ಮತ್ತು ಬದ್ಧತೆ ಎಷ್ಟು ಮುಖ್ಯ ಎಂಬುದನ್ನು ವಿವರಿಸುತ್ತದೆ.

ಚಿತ್ರದಲ್ಲಿ ಅಜಯ್ ರಾವ್ ಅವರಿಗೆ ಜೋಡಿಯಾಗಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.

Leave a Reply

Your email address will not be published. Required fields are marked *