
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairytale for Grown-ups) ಸಿನಿಮಾದ ಪ್ರಚಾರ ಕಾರ್ಯಗಳು ಮುಂದಿನ ಹಂತ ತಲುಪಿವೆ. ಆಗಸ್ಟ್ 26ರಂದು ಸಿನಿಮಾ ಪ್ರಪಂಚದಾದ್ಯಂತ ಪ್ರದರ್ಶನ ಕಾಣಲು ಸಜ್ಜಾಗುತ್ತಿದ್ದು, ಇದೀಗ ಎಲ್ಲರ ಕಣ್ಣು ಚಿತ್ರದ ಟ್ರೇಲರ್ ಅನಾವರಣದ ಮೇಲಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಆಗಸ್ಟ್ 8ರಂದು ಬೆಂಗಳುರಿನಲ್ಲಿ ಬೃಹತ್ ಸಮಾರಂಭವನ್ನು ಆಯೋಜಿಸಿ ಚಿತ್ರತಂಡವು ಟ್ರೇಲರ್ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದ್ದರೂ, ಅದ್ಧೂರಿ ಕಾರ್ಯಕ್ರಮಕ್ಕಾಗಿ ಈಗಾಗಲೇ ತಯಾರಿಗಳು ಆರಂಭವಾಗಿವೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲೇ ಗ್ರಾಂಡ್ ಈವೆಂಟ್
ಈ ಹಿಂದೆ ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿದ್ದಾಗಲೂ ಬೆಂಗಳೂರಿನಲ್ಲೇ ಟ್ರೇಲರ್ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದ್ದರಿಂದ ಆ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಹೊಸ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಸಿನಿಮಾ ಥಿಯೇಟರ್‌ಗೆ ಬರುವ ಮುನ್ನ ಅಭಿಮಾನಿಗಳಿಗೆ ದೃಶ್ಯ ವೈಭವದ ಹಬ್ಬ ಉಣಬಡಿಸಲು ಯಶ್ ಪಡೆ ಸಜ್ಜಾಗಿದೆ.
ತಂದೆ-ಮಗನ ಬಾಂಧವ್ಯದ ಆಕ್ಷನ್ ಥ್ರಿಲ್ಲರ್
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವು ತಂದೆ ಮತ್ತು ಮಗನ ನಡುವಿನ ಸಂಕೀರ್ಣ ಸಂಬಂಧವನ್ನು ಪ್ರತಿಬಿಂಬಿಸುವ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ ಎನ್ನಲಾಗಿದೆ. ಕಥೆಯ ವಿವರಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆಯಾದರೂ, ಯಶ್ ಅವರ ‘ರಾಯಾ’ ಪಾತ್ರ ಹಾಗೂ ಸಿನಿಮಾದ ಭವ್ಯ ಮೇಕಿಂಗ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಚಿತ್ರದ ತಾಂತ್ರಿಕ ಹಾಗೂ ತಾರಾಗಣದ ಬಲ
- ತಾರಾಗಣ: ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
- ಸಂಗೀತ: ರವಿ ಬಸ್ರೂರ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದರೆ, ವಿಶಾಲ್ ಮಿಶ್ರಾ ಮತ್ತು ತನಿಷ್ಕ್ ಬಾಗ್ಚಿ ಹಾಡುಗಳಿಗೆ ರಾಗಸಂಯೋಜನೆ ಮಾಡಿದ್ದಾರೆ. (ಇತ್ತೀಚೆಗೆ ಬಿಡುಗಡೆಯಾದ ‘ತಬಾಹಿ’ ಹಾಡು ಧೂಳೆಬ್ಬಿಸಿತ್ತು).
- ಸಾಹಸ ದೃಶ್ಯಗಳು: ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಹಾಗೂ ಭಾರತದ ಪ್ರಸಿದ್ಧ ಸಾಹಸ ಜೋಡಿ ಅನ್ಬರಿವ್ ಕಂಫೋಸ್ ಮಾಡಿದ್ದಾರೆ.
- ಛಾಯಾಗ್ರಹಣ: ರಾಜೀವ್ ರವಿ.
ನಿರ್ಮಾಣ ಮತ್ತು ಭಾಷೆಗಳು: ಕೆವಿಎನ್ ಪ್ರೊಡಕ್ಷನ್ಸ್ (KVN Productions) ಹಾಗೂ ಯಶ್ ಜಂಟಿಯಾಗಿ ನಿರ್ಮಿಸಿರುವ ‘ಟಾಕ್ಸಿಕ್’ ಚಿತ್ರವು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 26ರಂದು ತೆರೆಗೆ ಬರಲಿದೆ.
ಆಗಸ್ಟ್ 8ರಂದು ಬಿಡುಗಡೆಯಾಗಲಿರುವ ಟ್ರೇಲರ್, ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ಯಶ್ ಸೃಷ್ಟಿಸಿರುವ ಮಾಯಾಲೋಕದ ಪೂರ್ಣ ಜಲಕ್ ನೀಡಲಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.