ಒಂದು ಕನಸಿನಿಂದ ಆರಂಭವಾದ ಪಯಣ… ಕನ್ನಡ ಚಿತ್ರರಂಗದ ‘ಡಿಂಪಲ್ ಕ್ವೀನ್’ ರಚಿತಾ ರಾಮ್‌ಗೆ 14 ವರ್ಷದ ಸಂಭ್ರಮ💥

ಸ್ಯಾಂಡಲ್‌ವುಡ್‌ನ ಅತ್ಯಂತ ಜನಪ್ರಿಯ ಹಾಗೂ ನಿರಂತರ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರಚಿತಾ ರಾಮ್, ತಮ್ಮ ಪರಿಶ್ರಮ, ಶಿಸ್ತು ಮತ್ತು ಅದ್ಭುತವಾದ ಸೆಳೆತ ಇರೋ ವ್ಯಕ್ತಿತ್ವದ ಮೂಲಕ ವಿಶೇಷ ಸ್ಥಾನ ನಿರ್ಮಿಸಿಕೊಂಡಿದ್ದಾರೆ.

ಸೀರಿಯಲ್ ಲೋಕದಿಂದ ಬೆಳ್ಳಿ ಪರದೆಗೆ ಕಾಲಿಟ್ಟ ರಚಿತಾ ರಾಮ್, ಮೊದಲ ಸಿನಿಮಾದಲ್ಲೇ ಸ್ಟಾರ್ ನಟರ ಮಟ್ಟದ ಗುರುತನ್ನು ಪಡೆದರು. Bulbul ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅವರು, ತಮ್ಮ ಮನಮೋಹಕ ಸೌಂದರ್ಯ ಹಾಗೂ ನಮ್ಮವರೇ ಅನಿಸುವ ಧಾಟಿಯಿಂದ ಪ್ರೇಕ್ಷಕರ ಮನ ಸೆಳೆದರು. ಆ ನಂತರ ಅವರು ಹಿಂತಿರುಗಿ ನೋಡುವ ಪರಿಸ್ಥಿತಿ ಬಂದಿಲ್ಲ.

‘ಡಿಂಪಲ್ ಕ್ವೀನ್’ ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ರಚಿತಾ ರಾಮ್, ಪಕ್ಕ ಕಮರ್ಷಿಯಲ್ ಚಿತ್ರಗಳ ಜೊತೆಗೆ ಭಾವನಾತ್ಮಕ ಪಾತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೀರ್ಘಕಾಲ ಟಾಪ್ ಹೀರೋಯಿನ್ ಸ್ಥಾನವನ್ನು ಉಳಿಸಿಕೊಂಡಿರುವುದು ಅವರ ಪ್ರತಿಭೆ ಮತ್ತು ಅವರಿಗೆ ಸಿಕ್ಕಿರೋ ಪ್ರೇಕ್ಷಕರ ಪ್ರೀತಿಗೆ ಸಾಕ್ಷಿಯಾಗಿದೆ.

ಕನ್ನಡಕ್ಕಷ್ಟೇ ಸೀಮಿತವಾಗದೇ, ಇತರೆ ಭಾಷೆಗಳತ್ತಲೂ ಯಶಸ್ವಿ ಹೆಜ್ಜೆ ಇಟ್ಟಿರುವ ರಚಿತಾ ರಾಮ್, ತಮ್ಮ ವಿಭಿನ್ನ ಪಾತ್ರ ಆಯ್ಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಗ್ಲಾಮರ್ ಜೊತೆಗೆ ಪರ್ಫಾರ್ಮನ್ಸ್ ಓರಿಯೆಂಟೆಡ್ ಪಾತ್ರಗಳತ್ತ ಹೆಚ್ಚು ಗಮನ ಹರಿಸಿರುವುದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

14 ವರ್ಷಗಳ ಈ ಅದ್ಭುತ ಪಯಣದಲ್ಲಿ ರಚಿತಾ ರಾಮ್ ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ನಗು, ಸಹಜ ಅಭಿನಯ, ಮಧುರವೆನಿಸೋ ಮುಖಭಾವ ಮತ್ತು ಎಮೋಷನಲ್ ಸನ್ನಿವೇಶಗಳಲ್ಲಿ ತೋರಿಸುವ ಪ್ರೌಢತೆ ಅವರನ್ನು ಇಂದಿಗೂ ಕನ್ನಡದ ಅತ್ಯಂತ ವಿಶ್ವಾಸಾರ್ಹ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿದೆ.

ಇಂದು ಕನ್ನಡ ಚಿತ್ರರಂಗದಲ್ಲಿ ಹೊಸ ನಟಿಯರು ಬರುತ್ತಿದ್ದರೂ, ತಮ್ಮದೇ ಆದ ಸ್ಟಾರ್ಡಮ್, ಅಭಿಮಾನಿ ಬಳಗ ಮತ್ತು ವಿಶೇಷ ಆಕರ್ಷಣೆಯನ್ನು ಅಚಲವಾಗಿ ಉಳಿಸಿಕೊಂಡಿರುವ ರಚಿತಾ ರಾಮ್ ನಿಜಕ್ಕೂ ಕನ್ನಡ ಸಿನಿರಂಗದ ಅಮೂಲ್ಯ ನಟಿಯರಲ್ಲಿ ಒಬ್ಬರು. ಅವರ ಮುಂದಿನ ಸಿನಿ ಪಯಣ ಇನ್ನಷ್ಟು ಯಶಸ್ಸು, ಪ್ರಶಸ್ತಿ ಮತ್ತು ಮೆಗಾ ಸಿನಿಮಾಗಳಿಂದ ತುಂಬಿರಲಿ ಎಂಬುದು ಅಭಿಮಾನಿಗಳ ಹಾರೈಕೆ.

Leave a Reply

Your email address will not be published. Required fields are marked *