RESPONSIVE LEADERBOARD AD AREA
Film News

ಗೋಲ್ಡನ್ ಸ್ಟಾರ್ ’99’ ಟ್ರೈಲರ್ ಗೆ ಕಿಚ್ಚನ ಮೆಚ್ಚುಗೆ..!!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ’99’ ಚಿತ್ರದ ಲೇಟೆಸ್ಟ್ ಟ್ರೈಲರ್ ಸಾಕಷ್ಟು ಸುದ್ದಿ ಮಾಡುತ್ತಿದೆ. ಪ್ರೀತಂಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರ ಇದೀಗ ಕಿಚ್ಚ ಸುದೀಪ್ ಅವರ ಗಮನವನ್ನು ಸೆಳೆದಿದೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿರುವ ಕಿಚ್ಚ, ‘ಈ ಚಿತ್ರದ ಟ್ರೈಲರ್, ನನ್ನ ‘ಮೈ ಆಟೋಗ್ರಾಫ್’ ಚಿತ್ರವನ್ನು ನೆನಪಿಸಿತು’ ಎಂದಿದ್ದಾರೆ.

“ನನ್ನ ನಿರ್ದೇಶನದ ‘ಮೈ ಆಟೋಗ್ರಾಫ್’ ನನ್ನನ್ನು ಸದಾ ಕಾಡುವ ಚಿತ್ರ. ಅದು ನೆನಪುಗಳಿಗಾಗಿ ಹಂಬಲಿಸುವಂತೆ ಮಾಡಿದ ಚಿತ್ರ. 99 ರ ಟ್ರೈಲರ್ ಅದೆಲ್ಲವನ್ನು ಮತ್ತೆ ನೆನಪಿಸಿತು” ಎಂದಿದ್ದಾರೆ ಕಿಚ್ಚ.

“ಗಣೇಶ್ ಅವರು ಈ ಪಾತ್ರದ ಒಳಹೊಕ್ಕಂತೆ ಭಾಸವಾಗುತ್ತದೆ. ಜೊತೆಗೆ ಭಾವನಾ ರಾವ್ ಕೂಡ ಅದ್ಭುತವಾಗಿ ನಟಿಸುತ್ತಿರುವುದು ಕಾಣಿಸುತ್ತಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಪಕ ರಾಮು, ಛಾಯಾಗ್ರಾಹಕ ಸಂತೋಷ್ ರೈ ಪತಾಜೆ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಕೆಲಸವನ್ನು ಮೆಚ್ಚಿ ಕೊಂಡಿದ್ದಾರೆ.

ಇದು ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದ ನೂರನೆ ಚಿತ್ರವಾಗಲಿದೆ. ಸುಂದರವಾದ ಹಾಡುಗಳನ್ನು ಅರ್ಜುನ್ ಜನ್ಯ ಸಂಯೋಜನೆ ಮಾಡಿದ್ದಾರೆ.ಉತ್ತರ ಭಾರತದ ಸುಮಾರು 13ಕ್ಕೂ ಹೆಚ್ಚು ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಾಯಕ ಗಣೇಶ್, ವೃತ್ತಿಪರ ಪ್ರವಾಸಿ ಫೋಟೋಗ್ರಾಫರ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದುವರೆಗೆ 9 ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ಪ್ರೀತಮ್ ಇದೇ ಮೊದಲ ಬಾರಿಗೆ ರಿಮೇಕ್ ಚಿತ್ರವೊಂದರ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಪ್ರೇಮಿಗಳ ಸಮ್ಮಿಲನದ ಸುಂದರ ಕಥೆ ಒಳಗೊಂಡಿದ್ದ ’96’ ಚಿತ್ರ ತಮಿಳಿನಲ್ಲಿ ಸೈಲೆಂಟಾಗಿ ಹಿಟ್ ಆಗಿತ್ತು. ತಮಿಳು ಚಿತ್ರದ ಕತೆಯನ್ನಷ್ಟೇ ರಿಮೇಕ್ ಮಾಡಿದ್ದು, ಉಳಿದಂತೆ ಸಂಗೀತ, ಮತ್ತಿತರ ಸಂಗತಿಗಳಲ್ಲಿ ಕನ್ನಡತನವಿದೆ ಎಂದು ಪ್ರೀತಮ್ ಹೇಳಿದ್ದಾರೆ.

ಗಣೇಶ್ ಗಡ್ಡದಾರಿಯಾಗಿದ್ದು, ಸ್ವಲ್ಪ ಮಟ್ಟಿಗೆ ತೂಕ ಹೆಚ್ಚಿಸಿಕೊಂಡಿರುವಂತೆ ಕಾಣಿಸುತ್ತಾರೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ನಿಂದ ಸಾಕಷ್ಟು ಸುದ್ದಿ ಮಾಡುತ್ತಿರುವ ಈ ಚಿತ್ರ ಇದೇ ಏಪ್ರಿಲ್ 26ರಂದು ಚಿತ್ರ ತೆರೆಕಾಣಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top