RESPONSIVE LEADERBOARD AD AREA
Film News

ಅವನೇ ಶ್ರೀಮನ್ನಾರಾಯಣ ಏಕೆ ನೋಡಬೇಕು? ಇಲ್ಲಿದೆ ನೋಡಿ ಹತ್ತು ಕಾರಣಗಳು

ಚರಿತ್ರೆ ಸೃಷ್ಟಿಸೋ ಅವತಾರದ ಹಿಂದಿರುವ 10 ವಿಶೇಷ ವಿಷಯಗಳು

ಕಂಡು ಕೇಳರಿಯದ ಅಮರಾವತಿ ಅನ್ನೋ ಹಲವು ವಿಚಿತ್ರಗಳ ಕಾಲ್ಪನಿಕ ಊರು

ಮಾಲ್ಗುಡಿ ಡೇಸ್ ಧಾರಾವಾಹಿಯ ಕಾಲ್ಪನಿಕ ಮಾಲ್ಗುಡಿ ಊರು ದೇಶದಾದ್ಯಂತ ಜನರ ಸ್ಮೃತಿ ಪಟಲದಲ್ಲಿ ಹೇಗೆ ಉಳಿದು ಹೋಗಿದೆ ಎಂದರೆ, ಆ ಹೆಸರಿನ ಒಂದು ನಿಜವಾದ ಊರು ಅಸ್ತಿತ್ವದಲ್ಲಿದೆ ಎಂದು ನಂಬುವಷ್ಟು. ಮಾಲ್ಗುಡಿಯನ್ನು ಕಟ್ಟಿಕೊಟ್ಟಿರುವಷ್ಟೇ ನಾಜೂಕಾಗಿ, ಸತ್ಯವಾಗಿ, ವಿಶೇಷವಾಗಿ ಅಮರಾವತಿ ಅನ್ನೋ ಊರನ್ನು ಶ್ರೀಮನ್ ನಾರಾಯಣನ ಆಟಾಟೋಪಕ್ಕೆಂದೇ ಸೃಷ್ಟಿ ಮಾಡಲಾಗಿದೆ. ಈ ಊರು ಕೂಡ ಪ್ರೇಕ್ಷಕರ ಸ್ಮೃತಿಪಟಲದಲ್ಲಿ ಉಳಿದು ಹೋಗುವ ನಿರೀಕ್ಷೆ ಇದೆ.

ದ್ವಿಪಾತ್ರದಲ್ಲಿ ರಕ್ಷಿತ್ ಶೆಟ್ಟಿ??

ಅವನೇ ಶ್ರೀಮನ್ನಾರಾಯಣ ಟ್ರೈಲರ್ ನೋಡಿದ ಯಾರಿಗಾದರೂ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಡಬ್ಬಲ್ ಆಕ್ಟಿಂಗ್ ಮಾಡಿರಬಹುದಾ? ಅಂತ ಅನಿಸಿದ್ದು ಸುಳ್ಳಲ್ಲ. ಡಬ್ಬಲ್ ಆಕ್ಟಿಂಗ್ ಸಿನಿಮಾಗಳು ವಿರಳವಾಗಿರುವ ಈ ಕಾಲಮಾನದಲ್ಲಿ ಹಾಗೇನಾದರೂ ಆಗಿದ್ದರೆ ಪ್ರೇಕ್ಷಕರಿಗೆ ಒಳ್ಳೆ ಮಜಾ ಗ್ಯಾರಂಟಿ.

ಮೂರು ವರ್ಷಗಳ ನಂತರ ತೆರೆಯ ಮೇಲೆ ರಕ್ಷಿತ್

ಕಿರಿಕ್ ಪಾರ್ಟಿ ನಂತರ ಬೊಂಬಾಟ್ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಮೇಲೆ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಯಾವುದು? ಯಾವಾಗ ಬರುತ್ತೆ? ಅಂತ ಕಾಯುತ್ತಿರುವ ಕಲಾರಸಿಕರು ಒಬ್ರ ಇಬ್ರ, ಹುಡುಕಿದ್ರೆ ಕರ್ನಾಟಕದಾದ್ಯಂತ ಲಕ್ಷ ಸಂಖ್ಯೆಯಲ್ಲಿ ಸಿಗ್ತಾರೆ. ಕಾಯಾ ವಾಚಾ ಮನಸಾ ತಮ್ಮೆಲ್ಲ ಶ್ರಮವನ್ನು ಹಾಕಿ ಮೂರು ವರ್ಷ ದುಡಿದು ಸಿದ್ಧಪಡಿಸಿರುವ ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ ಅವರನ್ನು ಮತ್ತಷ್ಟು ದೊಡ್ಡ ಎತ್ತರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸೋದು ಗ್ಯಾರಂಟಿ ಅಂತ ಇಂಡಸ್ಟ್ರಿಯವರು ಮಾತಾಡುತ್ತಿದ್ದಾರೆ.

ಅವನೇ ಶ್ರೀಮನ್ನಾರಾಯಣ ಟೈಟಲ್ ಹಿಂದಿರುವ ಗುಟ್ಟು

ಅದೊಮ್ಮೆ ರಕ್ಷಿತ್ ಶೆಟ್ಟಿ ಅಚಾನಕ್ಕಾಗಿ ಕಲ್ಟ್ ಕ್ಲಾಸಿಕ್ ಭಕ್ತ ಪ್ರಹ್ಲಾದ ಸಿನಿಮಾದ ದೃಶ್ಯವೊಂದನ್ನು ನೋಡಿದರು. ಆ ದೃಶ್ಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೆಳ್ಳಿತೆರೆಯ ದೇವರು ಅಣ್ಣಾವ್ರಿಗೆ ಅವನೇ ಶ್ರೀಮನ್ನಾರಾಯಣ ಎಂದು ಹೇಳುತಾರೆ. ಅದನ್ನು ನೋಡಿದ್ದೇ ತಡ ರಕ್ಷಿತ್ ತಲೆಯಲ್ಲಿ ಟೈಟಲ್ ಫಿಕ್ಸ್ ಆಗಿ ಹೋಯ್ತು. ಹೌದು ನನ್ನ ಸಿನಿಮಾಗೆ ಇದೇ ಟೈಟಲ್, ಅವನೇ ಶ್ರೀಮನ್ ನಾರಾಯಣ ಅಂತ ಅಂದ್ಕೊಂಡೆ ಬಿಟ್ರು.

ಹೊಸ ಜಾನರ್ ಸಿನಿಮಾ

ನಮ್ಮ ಜನ ರೆಗ್ಯುಲರ್ ಆಗಿ ನೋಡೋದೇ ಲವ್ ಸ್ಟೋರಿ, ರೌಡಿಸಂ, ಕಮರ್ಷಿಯಲ್, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್, ಹಾರರ್.. ಆದರೆ ಅವನೇ ಶ್ರೀಮನ್ನಾರಾಯಣ ಇದ್ಯಾವ ಜಾನರ್ಗೂ ಸೇರಿದಂತಹ ಸಿನಿಮಾ. ಇಂಥದ್ದೊಂದು ದೊಡ್ಡ ರಿಸ್ಕ್ ರಕ್ಷಿತ್ ಶೆಟ್ಟಿ ಬಿಟ್ರೆ ಕನ್ನಡ ಇಂಡಸ್ಟ್ರಿಯಲ್ಲಿ ಯಾರು ತಾನೇ ತಗೊಳೋಕೆ ಸಾಧ್ಯ. ಅವನೇ ಶ್ರೀಮನ್ನಾರಾಯಣ ಸಿನಿಮಾ ಒಂಥರಾ ಫ್ಯಾಂಟಸಿ ಪೀರಿಯೆಡ್ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಅಂತ ಹೇಳಿಕೊಳ್ಳಬಹುದಾದ ಸಿನಿಮಾ ಅಂತ ಅವರೇ ಖುದ್ದಾಗಿ ಹೇಳಿದ್ದಾರೆ. ಆಡಿಯನ್ಸ್ ಗಳು ಹೊಸ ಅನುಭವಕ್ಕಾಗಿ ತಮ್ಮನ್ನು ತಾವು ಒಪ್ಪಿಸಿಕೊಂಡು ಈ ಸಿನಿಮಾ ನೋಡಬೇಕು. ಅದೇ ಹಳೇ ಮರ ಸುತ್ತುವ “ಹೋದ ಪುಟ್ಟ ಬಂದ ಪುಟ್ಟ” ಕಂಟೆಂಟ್ ಈ ಸಿನಿಮಾದಲ್ಲಿಲ್ಲ. ಇಲ್ಲಿರೋದೇ ಬೇರೆ ಲೆವೆಲ್ ಕಂಟೆಂಟ್, ನೋಡೋಕೆ ರೆಡಿಯಾಗಿ ಬಿಡಿ.

ಆಡಂಬರದ ಸೆಟ್ ಗಳು

ಈ ಸಿನಿಮಾಗೆಂದೇ ದುಡ್ಡಿನ ಮುಲಾಜೇ ನೋಡದೆ ಅದ್ಧೂರಿಯಾಗಿ ಸೆಟ್ ಗಳನ್ನು ಹಾಕಲಾಗಿದೆ. ದರೋಡೆಕೋರರ ಕೋಟೆಯ ಸೆಟ್ಟು, ಕಾಡಿನ ಸೆಟ್ಟು, ಅಮರಾವತಿ ಅನ್ನೋ ಊರಿನ ಸೆಟ್ಟು. ಒಂದಾ ಎರಡಾ? ಸಿನಿಮಾ ನಡೆಯೋದೇ ಬಹಳ ರಿಯಲ್ ಆಗಿ ಕಾಣುವ ಸೆಟ್ನಲ್ಲಿ.

ನಿಧಿಯ ಹುಡುಕಾಟದ ರೋಚಕತೆ

ಸಿನಿಮಾದಲ್ಲಿ ಎರಡು ದೊಡ್ಡ ದರೋಡೆಕೋರರ ದಂಡೇ ನಿಧಿಯ ಹುಡುಕಾಟದಲ್ಲಿ ತಲ್ಲೀನವಾಗಿರುತದೆ. ಅಂತಹ ಜಗತ್ ಪಂಟರ್ ದರೋಡೆಕೋರರಿಗೆ ಮಂಕು ಮಾಡಿ, ಚಳ್ಳೆ ಹಣ್ಣು ತಿನ್ನಿಸಿ ತನ್ನ ನುರಿತ ಕಾರ್ಯಾಚರಣೆ ಮಾಡುತ್ತಾನೆ ಶ್ರೀಮನ್ ನಾರಾಯಣ. ಈ ಕಥೆಯ ರೋಚಕತೆ ಬೆಳ್ಳಿತೆರೆಯ ಮೇಲೆ ಬಹಳ ಕಲಾತ್ಮಕವಾಗಿ ತೆರೆದುಕೊಳ್ಳಲಿದೆ.

ಪ್ರತಿ ಸೀನ್ನಲ್ಲೂ ಸ್ಪೆಷಲ್ ಎಫೆಕ್ಟ್

ಅನಾಮತ್ತು 300 ಜನ ತಜ್ಞರ ಒಂದು ತಂಡ ಈ ಸಿನಿಮಾದ ಸ್ಪೆಷಲ್ ಎಫೆಕ್ಟ್ಸ್ ಗಾಗಿ ಕಾರ್ಯನಿರ್ವಹಿಸಿದೆ. ಪ್ರತಿ ಫ್ರೇಮ್ ನಲ್ಲೂ ಸ್ಪೆಷಲ್ ಎಫೆಕ್ಟ್ ಇದೆ. ಅದು ನೀವು ಇದುವರೆಗೂ ನೋಡಿರುವ ಸ್ಪೆಷಲ್ ಎಫೆಕ್ಟ್ ನಂಥದ್ದಲ್ಲ. ಮತ್ತೆ ಇನ್ನೆಂಥದು? ಥಿಯೇಟರ್ ನಲ್ಲೇ ನೀವು ನೋಡಬೇಕು..

ನೀರಿನಂತೆ ಹಣ ಖರ್ಚು ಮಾಡಲಾಗಿದೆ

ಕನ್ನಡ ಮಾರ್ಕೆಟ್ಟು, ರಕ್ಷಿತ್ ಶೆಟ್ಟಿ ಮಾರ್ಕೆಟ್ಟು, ಆ ಮಾರ್ಕೆಟ್ಟು, ಈ ಮಾರ್ಕೆಟ್ಟು ಅಂತ ಲೆಕ್ಕ ಹಾಕದೇ ಕಂಟೆಂಟ್ ನಂಬಿ ಧಾರಾಳವಾಗಿ ಸಿನಿಮಾ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ. ಬಿಡುಗಡೆ ಹೊತ್ತಿಗೆ ನಿರ್ಮಾಪಕರಾದ ರಕ್ಷಿತ್ ಶೆಟ್ಟಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಪ್ರಕಾಶ್ ಗೌಡ ಅವರು ಸೇರಿ ಖರ್ಚು ಮಾಡಿರೋದು ಅನಾಮತ್ತು 45 ಕೋಟಿ ರೂಪಾಯಿಗಳು.

ಆ ಕಡೆ ಈ ಕಡೆ ನೋಡಿದರೆ, ಸಸ್ಪೆನ್ಸ್ ಮಿಸ್ ಆಗುತ್ತೆ ಹುಷಾರು

ಸಿನಿಮಾದಲ್ಲಿರುವ ನಿಧಿ ಹುಡುಕಾಟದ ಕೌತುಕತೆ ಯನ್ನು ಎಷ್ಟು ಬಿಗಿಯಾಗಿ ಕಟ್ಟಿ ಕೊಡಲಾಗಿದೆ ಎಂದರೆ ಪ್ರೇಕ್ಷಕ ಆ ಕಡೆ ಈ ಕಡೆ ತಲೆ ಅಲ್ಲಾಡಿಸಿದರೂ, ಫಿಲಂ ನಲ್ಲಿರುವ ಸಸ್ಪೆನ್ಸ್ ಮಿಸ್ ಆಗಿಬಿಡುವ ಅಪಾಯವಿದೆ. ಆದ್ದರಿಂದ ತೆರೆಯ ಮೇಲೆ ನೆಟ್ಟ ಕಣ್ಣು ಹಾಗೆಯೇ ಇರಬೇಕು.

ಹೀಗೆ ಹಲವು ವಿಶೇಷಗಳನ್ನು ಹೊಂದಿರುವ “ಅವನೇ ಶ್ರೀಮನ್ನಾರಾಯಣ” ಸಿನಿಮಾ ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ಸಚಿನ್ ರವಿ ಮತ್ತು ಗೆಳೆಯರ ಪರಿಶ್ರಮದ ಫಲ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಅಂತ ಈಗಾಗಲೇ ನೋಡಿದವರು ಹೇಳುತ್ತಿದ್ದಾರೆ. ನಾಳೆ ನೀವೂ ಕೂಡ ನೋಡಿ ಕನ್ನಡದ ಹೆಮ್ಮೆಯ ಚಿತ್ರಕ್ಕೆ ಪ್ರೀತಿ ಪ್ರೋತ್ಸಾಹಗಳನ್ನು ನೀಡಿ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top