RESPONSIVE LEADERBOARD AD AREA
Movie Articles

ಹೇ.. ರಾಮಾಚಾರಿ ಎಲ್ಲಿ ಹೋಗಿ ರೀಚ್ ಆಗ್ತಾ ಇದೀಯೊ..

ಕ್ರಿಸ್ ಮಸ್ ಗೆ ಬಾಕ್ಸ್ ಆಫೀಸ್ ಮೇಲೆ ಅನಾಮತ್ತಾಗಿ ಎರಗಿದ ರಾಮಾಚಾರಿ ರಭಸಕ್ಕೆ
ರೆಕಾರ್ಡ್ಗಳು ತತ್ತರಿಸಿ ಹೋಗಿವೆ.  ರಾಮಾಚಾರಿ ಯಾವ್ಯಾವ ಥಿಯೇಟರ್ ನಲ್ಲಿ ರಿಲೀಸ್
ಆಗಿದ್ದನೋ ಅಲ್ಲೆಲ್ಲಾ ಹೌಸ್ ಫುಲ್ ಬೋರ್ಡ್ ಪರ್ಮನೆಂಟಾಗಿ ಅಂಟಿಸುವ ಸ್ಥಿತಿ ಬಂದಿದೆ.
ಜನ ಟಿಕೆಟ್ ಗಾಗಿ ಥಿಯೇಟರ್ ನಿಂದ ಥಿಯೇಟರ್ ಗೆ, ಮಾಲ್ ನಿಂದ ಮಾಲ್ ಗೆ ಉಸಿರು
ಬಿಗಿಯಿಡಿದು ಓಡಾಡುವ ಹಾಗೆ ರಾಮಾಚಾರಿ ಮೋಡಿ ಮಾಡಿದ್ದಾನೆ. ಮರಕ್ಕಿಂತ ಮರ ದೊಡ್ಡದು,
ಸಿನಿಮಾಗಿಂತ ಸಿನಿಮಾ ದೊಡ್ಡದು ಬಿಡ್ರಿ, ಈ ಹಿಂದೆ ಕೂಡಾ ಈ ರೀತಿ ಸಿನಿಮಾಗಳು ಓಡಿವೆ
ಅಂತ ಹೇಳುವ ಹಾಗೆ ಇಲ್ಲ. ಕನ್ನಡ ಚಿತ್ರರಂಗದ ವ್ಯಾಪಾರವನ್ನು ಸೂಕ್ಷ್ಮವಾಗಿ
ಗಮನಿಸಿದವರು ಹೇಳುವ ಪ್ರಕಾರ ತೀರಾ ಇಷ್ಟರ ಮಟ್ಟಿಗೆ ಒಂದು ಸಿನಿಮಾ ಟಿಕೆಟ್ ಗೆ ಜನ
ಪರದಾಡುವಂತೆ ಮಾಡಿದ್ದು ಪವರ್ ಸ್ಟಾರ್ ಪುನೀತ್ ಅಭಿನಯದ ”ಜಾಕಿ” ಚಿತ್ರ, ಜಾಕಿಯ
ನಂತರ ಹತ್ತಾರು ಸೂಪರ್ ಹಿಟ್ ಚಿತ್ರಗಳು ಬಂದು ಹೋಗಿರಬಹುದು ಆದರೆ ಆ ಕ್ರೇಜ಼್
ಇದೆಯಲ್ಲಾ ಅದು ಮತ್ತೆ ಕಾಣಲು ಸಿಗುತ್ತಿರುವುದು ಮಿಸ್ಟರ್ & ಮಿಸೆಸ್ ರಾಮಾಚಾರಿ
ಅನ್ನೋ ಶುದ್ಧ ಮಾಸ್ ಲವ್ ಸ್ಟೋರಿ ಸಿನಿಮಾದಿಂದಲೇ.

ಈ ಚಿತ್ರ ತೀರಾ ಈ ಪರಿ ಕಚ್ಚಿಕೊಳ್ಳುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಯಶ್
ಚಿತ್ರದಿಂದ ಚಿತ್ರಕ್ಕೆ ಕಾಂಪ್ಲಾನ್ ಕುಡಿದವರ ಹಾಗೆ ಬೆಳೆಯುತ್ತಿರುವುದು ನಿಜವಾದರೂ
ರಾಮಾಚಾರಿಯ ಎತ್ತರಕ್ಕೆ ಅವರನ್ನು ಯಾರೂ ಕಲ್ಪಿಸಿಕೊಂಡಿರಲಿಲ್ಲ. ಅಸಲು ಕನ್ನಡ
ಚಿತ್ರಗಳು ಮಲ್ಟಿಪ್ಲೆಕ್ಷ್ ಗಳಲ್ಲಿ ಹೀಗೆ ವ್ಯಾಪಾರ ಮಾಡುತ್ತಿರುವುದೇ ದೊಡ್ಡ
ಅಚ್ಚರಿ. ಈ ಹಿಂದೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮಾಡಿದ್ದ ಮಲ್ಟಿಪ್ಲೆಕ್ಷ್
ದಾಖಲೆಗಳನ್ನು ಮೊಟ್ಟೆ ಕಡ್ಡಿ ಮುರಿದಂತೆ ಮುರಿಯುತ್ತಿದ್ದಾನೆ ರಾಮಾಚಾರಿ. ಪ್ರತಿದಿನ
100 ಶೋ ಗಳು ಕರ್ನಾಟಕದ ಮಲ್ಟಿಪ್ಲೆಕ್ಷ್ ಗಳಲ್ಲಿ ರಾಮಚಾರಿಗೆ ಮೀಸಲಾಗಿ ಹೋಗಿವೆ.
ಇನ್ನೂ ಥಿಯೇಟರ್ ಗಳ ವ್ಯಾಪಾರದ ಬಗ್ಗೆ ಹೇಳುವುದೇ ಬೇಡ, ಸಿನಿಮಾ ಶುರುವಾಗೋ ಅರ್ಧ
ಘಂಟೆ ಮುಂಚೆ ಹೌಸ್ ಫುಲ್ ಬೋರ್ಡ್ ಥಿಯೇಟರ್ ಮುಂದೆ ರಾರಾಜಿಸುತ್ತಿದೆ. ರಾಮಾಚಾರಿ
ಹೀಗೆ ಇದೇ ವೇಗದಲ್ಲಿ ಮುಂದುವರೆದರೆ ಕನ್ನಡ ಚಿತ್ರರಂಗಕ್ಕೆ ಹೊಸ ದಾಖಲೆಗಳನ್ನು
ಗಿಫ್ಟ್ ಆಗಿ ಕೊಡುವುದು ಗ್ಯಾರಂಟಿ.

ಚಿತ್ರವನ್ನು ರಾಜ್ಯದ ಹೊರಗೂ ಬಿಡುಗಡೆ ಮಾಡುವ ಚಿಂತನೆ ದೊಡ್ಡಾಮಟ್ಟದಲ್ಲಿ
ನಡೆಯುತ್ತಿದೆ ಎಂದು ಉದ್ಯಮದ ಮೂಲಗಳು ಹೇಳುತ್ತಿವೆ.ಕ್ರೇಜ಼ು ಹತ್ತಿಸಿಕೊಂಡ ಹೊರ
ರಾಜ್ಯದ ಮತ್ತು ರಾಷ್ಟ್ರದ ಕನ್ನಡಿಗರು ಇಲ್ಲೂ ಬೇಗ ರಿಲೀಸ್ ಮಾಡಿ ಪುಣ್ಯ
ಕಟ್ಟಿಕೊಳ್ಳಿ ಎಂದು ಗೋಗರಿಯುತ್ತಿದ್ದಾರೆ. ಅಲ್ಲಿಗೆ ರಾಮು ಹೊರಗೂ ಸದ್ದು ಮಾಡುವುದು
ಗ್ಯಾರಂಟಿ.

ಇಂತಹ ಮನೋರಂಜನೆ, ಅಚ್ಚರಿ, ಪುಳಕ ಮತ್ತು ಮಾರುಕಟ್ಟೆಯ ವಿಸ್ತೀರ್ಣವನ್ನು ದಯಪಾಲಿಸಿದ
ರಾಮಾಚಾರಿ ಚಿತ್ರತಂಡಕ್ಕೆ ಮುಖ್ಯವಾಗಿ ರಾಕಿಂಗ್ ಸ್ಟಾರ್ ಯಶ್ ಗೆ ನಮ್ ಸಿನಿಮಾ ತಂಡದ
ಕಡೆಯಿಂದ ಬಹುಪರಾಕ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top