RESPONSIVE LEADERBOARD AD AREA
Movie Articles

ಸಮಾಜದ ಕ್ರೂರ ಮುಖಗಳೊಡನೆ ಆಡುವ ಆಟಗಾರ!

ದ್ವಾರಕೀಶ್ ನಿರ್ಮಾಣದ “ಆಟಗಾರ” ಬಹು ತಾರಾಗಣದ ಚಿತ್ರ. ಅನಂತನಾಗ್, ಚಿರಂಜೀವಿ ಸರ್ಜಾ, ಪಾರುಲ್ ಯಾದವ್, ಮೇಘನಾ ರಾಜ್, ಅನು ಪ್ರಭಾಕರ್, ಸಾಧುಕೋಕಿಲ, ಅಚ್ಯುತ್ ರಾವ್, ಪ್ರಕಾಶ್ ಬೆಳವಾಡಿ, ರವಿಶಂಕರ್, ಆರ್. ಜೆ. ನೇತ್ರಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇಷ್ಟೊಂದು ಕಲಾವಿದರನ್ನಿಟ್ಟುಕೊಂಡು ಎಲ್ಲರನ್ನೂ ಚಿತ್ರದಲ್ಲಿ ಪಾತ್ರವಾಗಿಸುವಂತಹ ಕಥೆಗೊಂದನ್ನು ಆರಿಸಿಕೊಂಡು ಅದನ್ನು ಚಿತ್ರಕಥೆಯಾಗಿಸಿ ನಿರ್ದೇಶಿಸಿದವರು “ಆ ದಿನಗಳು” ಖ್ಯಾತಿಯ ಕೆ. ಎಂ. ಚೈತನ್ಯ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ “ಬಿಗ್ ಬಾಸ್” ಅನ್ನೇ ಹೋಲುವ ಟಿವಿ ರಿಯಾಲಿಟಿ ಶೋಗೆ ಸಮಾಜದ ವಿವಿಧ ಕ್ಷೇತ್ರಗಳ ೧೦ ಮಂದಿ ಗಣ್ಯರು ಹೋಗುತ್ತಾರೆ. ಅದೊಂದು ಅಜ್ಞಾತ ಸ್ಥಳ. ಜನ ಸಂಪರ್ಕದಿಂದ ಬಲು ದೂರವಿರುವ ಆ ಸ್ಥಳದಲ್ಲಿ ಈ ಹತ್ತು ಮಂದಿ ಕಾಲ ಕಳೆಯಬೇಕು. ಅಲ್ಲಿ ನಡೆಯುವ ವಿವಿಧ ರೋಚಕ, ನಿಗೂಢ ಘಟನೆಗಳೇ ಚಿತ್ರದ ಮುಖ್ಯ ಕಥಾವಸ್ತು. ಆರಂಭದಲ್ಲಿ ಹಾಡು, ಮೊಜಿನೊಂದಿಗೆ ಆರಂಭವಾಗುವ ಚಿತ್ರ ಕ್ರಮೇಣ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಮಧ್ಯಂತರದ ವೇಳೆಗೆ ಒಂದು ದೊಡ್ಡ ತಿರುವು ಪಡೆದುಕೊಳ್ಳುವ ಚಿತ್ರ ದ್ವಿತೀಯಾರ್ಧದಲ್ಲಿ ಸಮಾಜದ ಹಲವು ಮುಖಗಳನ್ನು ತೆರೆದಿಡುತ್ತದೆ. ನಿಗೂಢತೆಗಳ ನಡುವೆಯೇ ಉತ್ತಮ ಸಂದೇಶವನ್ನು ಚಿತ್ರ ನೀಡುತ್ತದೆ. ಆ ಕಾರಣಕ್ಕಾಗಿಯೇ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ ಮತ್ತು ಮನಸ್ಸಿಗೆ ಇಷ್ಟವಾಗುತ್ತದೆ.

ಚಿತ್ರದ ನಿರೂಪಣೆಯಲ್ಲಿ ಒಟ್ಟಾರೆಯಾಗಿ ಚೈತನ್ಯ ಗೆದ್ದಿದ್ದಾರೆ ಅನ್ನಬಹುದು. ಮಾಮೂಲಿ ಚಿತ್ರಗಳ ಜಾಡಿನಲ್ಲಿ ಸಾಗದ ಚಿತ್ರದಲ್ಲಿ ಎಲ್ಲಾ ಕಲಾವಿದರನ್ನೂ ಕಥೆಗೆ ಹೊಂದುವಂತೆ ಪಾತ್ರವನ್ನಾಗಿಸಿರುವುದು ಚಿತ್ರದ ವಿಶೇಷ. ಹಿನ್ನೆಲೆ ಸಂಗೀತ ಮತ್ತು ಎರಡು ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಛಾಯಾಗ್ರಹಣ ಕೂಡ ಉತ್ತಮವಾಗಿದೆ. ಆದರೂ ರೋಚಕತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬಹುದಿತ್ತೇನೋ ಅನಿಸುತ್ತದೆ. ಸಾಧು ಕೋಕಿಲಾ ಇದ್ದರೂ ಹಾಸ್ಯದ ಕೊರತೆ ಎದ್ದು ಕಾಣುತ್ತದೆ. ಅಷ್ಟು ಬಿಟ್ಟರೆ ಚಿತ್ರ ಒಂದು ಉತ್ತಮ ಪ್ರಯತ್ನ. ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ವಿಭಿನ್ನ ಚಿತ್ರಗಳ ಸಾಲಿಗೆ “ಆಟಗಾರ” ಹೊಸ ಸೇರ್ಪಡೆ. ಚಿತ್ರವನ್ನು ಖಂಡಿತಾ ನೋಡಿ, ಮನರಂಜನೆಗೆ ಮೋಸವಿಲ್ಲ. ಸಾಮಾಜಿಕ ಸಂದೇಶಕ್ಕೆ ಬರವಿಲ್ಲ.

4/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top