RESPONSIVE LEADERBOARD AD AREA
Movie Articles

ಮೆದುಳೆಂಬ ಮರ್ಕಟವೂ ಕಾಲು ಎಳೆಯುವ ಕಾಲವೂ ತಿನ್ನಲೇಬೇಕಾದ ಉಪ್ಪಿಟ್ಟೂ

ಮನುಷ್ಯನ ಮೆದುಳು ಮರ್ಕಟ ಇದ್ದ ಹಾಗೆ. ಕೆಲವರ ಮೆದುಳು ಕಳೆದು ಹೋದವಿಷಯಗಳನ್ನೇ ಯೋಚಿಸುತ್ತಾ ನೆಮ್ಮದಿಯನ್ನು ಹಾಳು ಮಾಡಿಕೊಂಡರೆ ಇನ್ನೂ ಕೆಲವರ ಮೆದುಳು ಸದಾ ಭವಿಷ್ಯದ ಬಗ್ಗೆ ಯೋಚಿಸುತ್ತಾ, ಕನಸು ಕಾಣುತ್ತಾ ಕೊರಗುತ್ತದೆ. ಆದರೆ ಯಾರ ಮೆದುಳು ವರ್ತಮಾನದಲ್ಲಿ ಬದುಕುತ್ತದೋ ಅಂಥವರಿಗೆ ಮಾತ್ರ “ಖುಷಿ” ಸಿಗುತ್ತದೆ. ಈ ಸತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಉಪ್ಪಿಟ್ಟು ಇನ್ನಷ್ಟು ರುಚಿಸುತ್ತದೆ.

ಉಪ್ಪಿ೨ ಚಿತ್ರ ಉಪೇಂದ್ರ ಚಿತ್ರದ ಮುಂದುವರಿದ ಭಾಗ. ಆ ಚಿತ್ರದ ಕೊನೆಯಲ್ಲಿ ಯಾರಿಗೂ ಹೇಳದೆ, ಯಾರಿಗೂ ಸಿಗದೇಹೊರಟು ಹೋದ “ನಾನು” ಎಲ್ಲಿ ಹೋದ ಎಂಬ ಹುಡುಕಾಟದೊಂದಿಗೆ ಉಪ್ಪಿ2 ಚಿತ್ರ ಆರಂಭವಾಗುತ್ತದೆ. ನಾನು ಬದಲು “ನೀನು” ಸಿಗುತ್ತಾನೆ. ಯಾವ ವಿಚಾರದ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ನೀನು ಮತ್ತು ಕೀರ್ತಿ, ಪ್ರೀತಿ, ಐಶ್ವರ್ಯ ಮೂರನ್ನೂ ತನ್ನದಾಗಿಸಿಕೊಳ್ಳಲು ಹೊರಟಿದ್ದ ನಾನು ಇಬ್ಬರೂ ಒಬ್ಬರೇನಾ ಎಂಬ ಜಿಜ್ಞಾಸೆ ಶುರುವಾಗುತ್ತದೆ. ಚಿತ್ರಕಥೆ ಉಪೇಂದ್ರ ನಿರ್ದೇಶನದ ಚಿತ್ರಗಳಲ್ಲೇ ಸಂಕೀರ್ಣವಾದದ್ದು ಎಂದರೆ ತಪ್ಪಾಗಲಾರದು. ಮೊದಲಾರ್ಧದಲ್ಲಿ ಅಲ್ಲಲ್ಲಿ ತಿಳಿ ಹಾಸ್ಯದೊಂದಿದೆ, ಅಲ್ಲಲ್ಲಿ ಕಚಗುಳಿಯಿಡುವ ಸಂಭಾಷಣೆಗಳೊಂದಿಗೆ ಸಾಗುವ ಚಿತ್ರ ಮಧ್ಯಂತರದ ಹೊತ್ತಿಗೆ ಮಹತ್ತರ ಟ್ವಿಸ್ಟ್ ಒಂದನ್ನು ತರುವ ಮೂಲಕ ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ದ್ವಿತೀಯಾರ್ಧದಲ್ಲಿ ಕಥೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುವುದರ ಮೂಲಕ ತಲೆಗೆ ಹುಳ ಬಿಡುವ ಕೆಲಸ ನಡೆಯುತ್ತದೆ. ನೀನು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲು ಶುರುವಾಗುತ್ತದೆ. ಚಿತ್ರಕ್ಕೊಂದು ವಿಭಿನ್ನ ಅನಿಸಬಹುದಾದ ಅಂತ್ಯವನ್ನು ನೀಡಿರುವ ಉಪೇಂದ್ರ ಹಲವು ಪ್ರಶ್ನೆಗಳನ್ನು ಪ್ರೇಕ್ಷಕರ ತಲೆಯಲ್ಲಿ ಹುಟ್ಟು ಹಾಕುವಲ್ಲಿ ಸಫಲರಾಗಿದ್ದಾರೆ.

ಇದು ಪಕ್ಕಾ ಉಪೇಂದ್ರ ಶೈಲಿಯ ಚಿತ್ರ! ಚಿತ್ರಕತೆಯನ್ನು ಹಿಂದುಮುಂದಾಗಿ ಹೇಳುವುದು ಉಪ್ಪಿ ನಿರ್ದೇಶನದ ಚಿತ್ರಗಳಲ್ಲಿ ಮಾಮೂಲು. ಆದರೆ ಈ ಚಿತ್ರದಲ್ಲಿ ಕ್ಲೈಮಾಕ್ಸ್ ಅನ್ನು ಆರಂಭದಲ್ಲೇ ತೋರಿಸಿ ಕೊನೆಗೆ ಅಲ್ಲೇ ತಂದು ನಿಲ್ಲಿಸಿರುವುದು ವಿಶೇಷ. ಉಪೇಂದ್ರ ಭಾಗ ೧ ರ ದೃಶ್ಯಗಳನ್ನು ಅಲ್ಲಲ್ಲಿ ಸಾಂದರ್ಭಿಕವಾಗಿ ಬಳಸಿಕೊಂಡಿದ್ದು ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಮೂರು ಆಯಾಮಗಳಲ್ಲಿ ಬರುವ ಉಪೇಂದ್ರ ಅಭಿನಯ ಗಮನ ಸೆಳೆಯುತ್ತದೆ. ಕ್ರಿಸ್ಟೀನಾ ಗೊಂಬೆಯಂತೆ ಕಾಣುತ್ತಾರೆ. ಪಾರುಲ್ ಯಾದವ್ ಒಂದು ಹಾಡು ಮತ್ತು ಕೆಲವು ದೃಶ್ಯಗಳಿಗಷ್ಟೆ ಸೀಮಿತ. ಹಾಡುಗಳು ಇನ್ನಷ್ಟು ಚೆನ್ನಾಗಿರಬೇಕಿತ್ತು. ಚಿತ್ರಕಥೆಯಲ್ಲಿ ಇನ್ನಷ್ಟು ಜೀವ ತುಂಬಬೇಕಿತ್ತು. ಉಪ್ಪಿಟ್ಟು ರುಚಿಯಾಗಿದೆ, ಹೊಸ ತರವಾಗಿದೆ, ಆದರೂ ಏನೋ ಮಿಸ್ಸಿಂಗು… ಅದೇನು ಅಂತ ಜಾಸ್ತಿ ಯೋಚಿಸಿದರೆ ನಮ್ಮ ಮೆದುಳು ವರ್ತಮಾನದಲ್ಲಿ ಖುಷಿಯನ್ನು ಕಳೆದು ಕೊಳ್ಳುತ್ತದೆ. ಹಾಗಾಗಿ ಉಪ್ಪಿಯ ಹಿಂದಿನ ಚಿತ್ರಗಳ ಜೊತೆ ತಾಳೆ ಹಾಕಿ ತಲೆ ಕೆಡಿಸಿಕೊಳ್ಳದೆ, ಮುಂದೆ ಉಪ್ಪಿ ಯಾವ ರೀತಿ ಚಿತ್ರ ಮಾಡಲಿದ್ದಾರೆಂದು ಯೋಚಿಸುತ್ತಾ ಕೂರದೆ ವರ್ತಮಾನದ ಈ ಚಿತ್ರವನ್ನು ನೋಡಿದರೆ ಉಪ್ಪಿಟ್ಟು ನಾಲಿಗೆಗೆ ಹೆಚ್ಚು ರುಚಿಸಬಹುದು!

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top