RESPONSIVE LEADERBOARD AD AREA
Film News

ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ‘ಕವಲು ದಾರಿ’ ಇಂದು ತೆರೆಗೆ…!!

‘ಗೋಧಿ ಬಣ್ಣ ಮತ್ತು ಸಾಧಾರಣ ಮೈಕಟ್ಟು’ ಎಂಬ ಯಶಸ್ವಿ ಚಿತ್ರ ನಿರ್ದೇಶಿಸುವ ಮೂಲಕ ಹೆಸರು ಪಡೆದಂತಹ ಪ್ರತಿಭಾವಂತ ನಿರ್ದೇಶಕ ಹೇಮಂತ್ ರಾವ್ ಇದೀಗ ‘ಕವಲು ದಾರಿ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಸುಮಾರು ಒಂದುವರೆ ವರ್ಷದ ಬಳಿಕ ಮತ್ತೊಮ್ಮೆ ಬರುತ್ತಿದ್ದಾರೆ. ಇಂದು ರಾಜ್ಯದಾದ್ಯಂತ ‘ಕವಲುದಾರಿ’ ಬಿಡುಗಡೆಯಾಗುತ್ತಿದೆ.

ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಅವರಿಗೆ ನಿರ್ದೇಶಿಸಲು ಅವಕಾಶ ಸಿಕ್ಕಿದ್ದು ಒಂದು ವರ್ಷದ ಹಿಂದೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಂದು ವಿಶಿಷ್ಟವಾದ ಚಿತ್ರ ಕೊಟ್ಟಿದ್ದರಿಂದ ಜಾಗತಿಕವಾಗಿಯೂ ಉತ್ತಮ ಹೆಸರು ಗಳಿಸಿಕೊಂಡ ನಿರ್ದೇಶಕ ಹೇಮಂತ್ ರಾವ್ ಮೊದಲ ಚಿತ್ರದ ಯಶಸ್ಸಿನ ತಕ್ಷಣವೇ ಮತ್ತೊಂದು ಚಿತ್ರಕ್ಕೆ ಕೈಗೆತ್ತಿಕೊಳ್ಳುವ ಗಡಿಬಿಡಿ ತೊರದೆ, ‘ಕವಲು ದಾರಿ’ಯನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಕುರಿತು ಗಾಂಧಿನಗರದಲ್ಲಿ ಉತ್ತಮ ಅಭಿಪ್ರಾಯ ಗಳಿದ್ದು ಇಂದು ಪ್ರೇಕ್ಷಕ ಪ್ರಭುವಿನ ಮುಂದೆ ಈ ಚಿತ್ರ ಬರುತ್ತಿದೆ.

ಈ ಕುರಿತು ಮಾತನಾಡಿರುವ ಹೇಮಂತ್ ರಾವ್, “ಈ ಚಿತ್ರವನ್ನು ತುಂಬಾ ಯೋಚಿಸಿ ಉತ್ತಮವಾಗಿ ಮೂಡಿಬರುವಂತೆ ಪ್ರಯತ್ನಿಸಿದ್ದೇನೆ. ಚಿತ್ರದಲ್ಲಿ ಒಂದು ಉತ್ತಮವಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದ್ದು, ಪ್ರೇಕ್ಷಕ ಚಿತ್ರದ ಕೊನೆಯವರೆಗೂ ಕುತೂಹಲ ದಿಂದಲೇ ಚಿತ್ರ ನೋಡುವಂತಿದೆ”.

“ನಿರ್ದೇಶಕನ ಕೆಲಸ, ಪ್ರೇಕ್ಷಕನಿಗೆ ಪರಿಹಾರಗಳನ್ನು ನೀಡುವುದಲ್ಲ. ಬದಲಿಗೆ ತನ್ನ ಸುತ್ತಮುತ್ತಲಿನ ಸಮಾಜವನ್ನು ತೆರೆದಿಡುವುದು. ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರೇರೇಪಿಸುವುದು ಅವನ ಕೆಲಸ ಎನ್ನುವುದು ನನ್ನ ನಂಬಿಕೆ. ‘ಕವಲುದಾರಿ’ಯಲ್ಲಿ ಪೊಲೀಸ್ ಅಧಿಕಾರಿಗಳ
ಒಳ ಹೊರಗನ್ನು ತೆರೆದಿಡಲು ಪ್ರಯತ್ನಿಸಿದ್ದೇನೆ. ಎನ್ನುತ್ತಾರೆ ನಿರ್ದೇಶಕ ಹೇಮಂತ್

“ಪೊಲೀಸರನ್ನು ಸಮಾಜ ಬಹಳ ವಿಚಿತ್ರವಾಗಿ ನೋಡುತ್ತದೆ. ಒಮ್ಮೊಮ್ಮೆ ಕ್ರೂರಿಗಳನ್ನಾಗಿ, ಲಂಚಕೋರರನ್ನಾಗಿ ಕಾಣುತ್ತದೆ. ಆದರೆ ಪೊಲೀಸರು, ಸಮಾಜದ ಸತ್ಯ ಮತ್ತು ಸುಳ್ಳು, ಸಾವು ಮತ್ತು ನೋವು, ವೈಯಕ್ತಿಕ ಬದುಕು ಮತ್ತು ವೃತ್ತಿಯ ತಾಕಲಾಟ ಇವುಗಳ ಸಂಘರ್ಷವನ್ನು ನೇರವಾಗಿ ಎದುರಿಸುತ್ತಾರೆ. ಅವರ ಮನಸ್ಸು ತುಂಬಾ ಸಂಕೀರ್ಣ ಪರಿಸ್ಥಿತಿಯನ್ನು ಸದಾಕಾಲ ಎದುರಿಸುತ್ತಿರುತ್ತದೆ. ಇವೆಲ್ಲ ಸೂಕ್ಷ್ಮತೆಗಳನ್ನು ಇಟ್ಟುಕೊಂಡು ಈ ಚಿತ್ರದ ಕಥೆಯನ್ನು ಕುತೂಹಲಕಾರಿಯಾಗಿ ಹೇಳಲು ಪ್ರಯತ್ನಿಸಿದ್ದೇನೆ”.

“ಒಂದು ಒಳ್ಳೆ ಕಥೆಗೆ ಪೂರಕವಾದ ಛಾಯಾಗ್ರಹಣ, ಸಂಗೀತ, ನಟನೆ ಎಲ್ಲವೂ ಕೂಡಿ ಬಂದಾಗ ಒಂದು ಅತ್ಯುತ್ತಮವಾದ ಚಿತ್ರವಾಗಿ ಮೂಡಿಬರಲು ಸಾಧ್ಯ. ಅದೃಷ್ಟವಶಾತ್ ನನಗೆ ಎರಡೂ ಚಿತ್ರಗಳಿಗೆ ನಿರ್ಮಾಪಕರಿಂದ ಅತ್ಯುತ್ತಮ ಸಹಕಾರ ದೊರೆಯಿತು. ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ಸ್‌ ನ ಮೊದಲ ಚಿತ್ರ ನಿರ್ದೇಶಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ” ಎಂದಿದ್ದಾರೆ

“ಕವಲುದಾರಿ ಚಿತ್ರದ ಕಥೆಯನ್ನು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕಿಂತ ಮೊದಲೇ ಸಿದ್ಧಪಡಿಸಿಕೊಂಡಿದ್ದೆ. ನಾನು ಒಂದು ಸಮಯದಲ್ಲಿ ಒಂದು ಚಿತ್ರದ ಬಗ್ಗೆಯಷ್ಟೇ ಯೋಚಿಸುತ್ತೇನೆ. ಮತ್ತು ಪ್ರತಿ ಚಿತ್ರದಲ್ಲಿ ಒಬ್ಬ ಹೊಸಬನಂತೆ ಕಾಳಜಿ ಪೂರಕವಾಗಿ ಕೆಲಸ ನಿರ್ವಹಿಸುತ್ತೇನೆ. ಅದು ನನಗೆ ಎಚ್ಚರಿಕೆಯಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ” ಎನ್ನುತ್ತಾರೆ ಹೇಮಂತ್ ರಾವ್.

ಪುನೀತ್ ರಾಜಕುಮಾರ್ ಈ ಚಿತ್ರ ನಿರ್ಮಿಸಿದ್ದು ಹೇಮಂತ್ ರಾವ್ ನಿರ್ದೇಶನ ಪ್ರತಿಭೆಯ ಬಗ್ಗೆ ಎಲ್ಲರಿಗೂ ಭರವಸೆ ಇದ್ದು, ಕವಲು ದಾರಿಯ ಕುರಿತು ತೀವ್ರ ಕುತೂಹಲ ಇರುವುದಂತೂ ನಿಜ. ಹಾಗಾಗಿ ಇಂದು ಥಿಯೇಟರ್ ನತ್ತ ಪ್ರೇಕ್ಷಕರು ಕುತೂಹಲದಿಂದ ಹೆಜ್ಜೆ ಹಾಕುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top