RESPONSIVE LEADERBOARD AD AREA
Movie Articles

ನೋಡಲು ಮರೆಯದಿರಿ “ಗುಳ್ಟು”

*ನೀವೂ ನೋಡಿ*

‘ಗುಲ್ಟು’ ಸಿನಿಮಾದಲ್ಲಿನ ಮೂರು ದೃಶ್ಯಗಳು ವಿಶೇಷವಾಗಿ ನನ್ನ ಗಮನ ಸೆಳೆದವು.
ಹಸಿದುಕೊಂಡ ಹಿರಿಯರೊಬ್ಬರು ಹೋಟೆಲ್ ನಲ್ಲಿ ಕೂತಿರುತ್ತಾರೆ. ಅವರಿಗೆ ಇಡ್ಲಿ ವಡಾ ತಿನ್ನಬೇಕೆಂಬ ಆಸೆ. ಆದರೆ ಕಾಸಿಲ್ಲ. ಕೊನೆಗೆ ಬರೀ ಕಾಫಿಗೆ ಆರ್ಡರ್ ಮಾಡಿ ಕೂತಿರುತ್ತಾರೆ. ಅದೇ ಹೋಟೆಲ್ ಗೆ ಬಂದಿದ್ದ ನಾಯಕ ಅವರ ಬಯಕೆಯನ್ನು ಅರಿತುಕೊಂಡು ಇಡ್ಲಿ ವಡಾ ತರಿಸಿಕೊಡ್ತಾನೆ.
ಈ ಸನ್ನಿವೇಶದಲ್ಲಿ ಹಸಿದವನ ಕಣ್ಣಿಂದ ಕಾಣುವ ಜಗತ್ತನ್ನು ತೋರಿಸಿರುವ ರೀತಿ… ಅವನಿಗೆ ತಿನ್ನಲು ಸಿಕ್ಕಾಗ ಆಗುವ ಸಂತೃಪ್ತಿಗಳನ್ನು ಕಟ್ಟಿರುವ ಬಗೆ ಅದೆಷ್ಟು ತೀವ್ರವಾಗಿದೆಯೆಂದರೆ ಮನಸಲ್ಲಿಅಚ್ಚೊತ್ತಿ ಉಳಿದುಕೊಂಡು ಬಿಡುತ್ತದೆ. ಇದು ಇಡೀ ಚಿತ್ರದ ಕಥೆಗೆ ಪೂರಕವಾಗಿಯೇ ಇದೆ ಎನ್ನುವುದೂ ಗಮನಾರ್ಹ.
ಇನ್ನೊಂದು ದೃಶ್ಯ ಆಸ್ತಿ ಎಂಬಾತ ಹುಡುಗಿಯೊಂದಿಗೆ ಫ್ಲರ್ಟ್ ಮಾಡುವ ದೃಶ್ಯ. ಅದಕ್ಕೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮತ್ತು ಟ್ರಾಲಿ, ಟ್ರೈನ್ ಗಳನ್ನು ಸಹಜವಾಗಿ ಬಳಸಿಕೊಂಡ ರೀತಿಯೂ ತಾಜಾ ಆಗಿದೆ.
ಇನ್ನೊಂದು ದೃಶ್ಯದಲ್ಲಿ ನಾಯಕಿ ನಾಯಕನ ಮೇಲೆ ಮುನಿಸಿಕೊಂಡಿರುತ್ತಾಳೆ. ಅವಳನ್ನು ಓಲೈಸುವ ಭರದಲ್ಲಿ ನಾಯಕ ‘ನನ್ನ ಬದುಕು ಬೇರೆ ನಿನ್ನ ಬದುಕು ಬೇರೆ’ ಅಂತೆಲ್ಲ ಮಾತಾಡುತ್ತಿದ್ದೀಯಲ್ಲಾ ಎಂದು ಬೇಸರ ಮಾಡಿಕೊಳ್ತಾನೆ. ಕ್ಷಣವೂ ತಡಮಾಡದೇ ನಾಯಕಿ ‘ನಿನ್ನ ಸಿಸ್ಟಂ ಪಾಸ್ ವರ್ಡ್ ಏನು?’ ಎಂದು ಕೇಳುತ್ತಾಳೆ. ನಾಯಕ ನಿರುತ್ತರ… ಆ ಕ್ಷಣದಲ್ಲಿ ಅವರಿಬ್ಬರ ನಡುವಿನ ಅಂತರ ದುತ್ತೆಂದು ನಗ್ನವಾಗುವುದನ್ನು ‘ಸ್ತಬ್ಧತೆ’ಯ ಮೂಲಕ ಹಿಡಿದಿಡಲು ಯತ್ನಿಸಿರುವುದು ಗಮನಾರ್ಹ.
***
ಈ ಮೂರು ದೃಶ್ಯಗಳಲ್ಲಿ ಮೊದಲನೆಯದು ನಿರ್ದೇಶಕರ ಕಾಳಜಿಯನ್ನೂ, ಎರಡನೆಯದು ಅವರಲ್ಲಿನ ಹರಿತ ವ್ಯಂಗ್ಯಪ್ರಜ್ಞೆಯನ್ನೂ, ಮೂರನೆಯದು ಸೂಕ್ಷ್ಮದೃಷ್ಟಿಯನ್ನೂ ಹೇಳುತ್ತವೆ. ಮತ್ತು ಈ ಮೂರೂ ದೃಶ್ಯಗಳು ನಿರ್ದೇಶಕ ತನ್ನ ಬುದ್ಧಿವಂತಿಕೆ ಅಥವಾ ಅಭಿಪ್ರಾಯಗಳನ್ನು ಹೇಳಲಿಕ್ಕಾಗಿಯೇ ಹೆಣೆದ ಕೃತಕ ದೃಶ್ಯಗಳಲ್ಲ, ಅವುಗಳ ಮೂಲಕವೇ ಚಿತ್ರದ ಮುಖ್ಯಧಾರೆಯ ಕಥೆ ಮುಂದುವರಿಯುತ್ತಿರುತ್ತದೆ. ಈ ಹೆಣಿಗೆಯ ಕ್ರಮ ಸಿನಿಮಾ ಭಾಷೆಯ ಬಗ್ಗೆ ನಿರ್ದೇಶಕನಿಗಿರುವ ಎಚ್ಚರ ಮತ್ತು ಬದ್ಧತೆಯನ್ನು ಹೇಳುತ್ತವೆ.
ನಿಸ್ಸಂದೇಹವಾಗಿ ಜನಾರ್ದನ್ ಚಿಕ್ಕಣ್ಣ ಪ್ರತಿಭಾವಂತ, ಸೂಕ್ಷ್ಮ ಸಂವೇದನಾಶೀಲ ನಿರ್ದೇಶಕ. ಆದರೆ ‘ಗುಲ್ಟು’ ಸಿನಿಮಾವನ್ನುಅಷ್ಟೇ ನಿಸ್ಸಂದೇಹವಾಗಿ ಒಪ್ಪಿಕೊಳ್ಳುವುದು ನನಗೆ ಸಾಧ್ಯವಾಗಲಿಲ್ಲ. ಬಿಡಿ ದೃಶ್ಯಗಳಲ್ಲಿ ಕಂಡುಬರುವ ಸೂಕ್ಷ್ಮತೆ ಇಡೀ ಚಿತ್ರದಲ್ಲಿ ಕಳೆದುಹೋಗಿರುವಂತೆ ಭಾಸವಾಯ್ತು. ಚಿತ್ರವನ್ನು ನೋಡಿ ಮುಗಿಸಿದ ಮೇಲೆ ಏನೋ ಅಪೂರ್ಣಭಾವ, ಅತೃಪ್ತಿ ಮನಸಲ್ಲಿ ಹುಟ್ಟಿಕೊಂಡಿತು.
ಚಿತ್ರಕಥೆ, ಸಂಭಾಷಣೆ, ನಟನೆ, ಛಾಯಾಗ್ರಹಣ ಎಲ್ಲದರಲ್ಲಿಯೂ ಬಿಗಿತನವಿದೆ. ಆದರೆ ಇವೆಲ್ಲವೂ ಸೇರಿ ಯಾವ ಅನುಭವವನ್ನು ಪ್ರೇಕ್ಷಕನಿಗೆ ದಾಟಿಸಲು ಯತ್ನಿಸುತ್ತಿವೆ ಎಂದು ಕೇಳಿಕೊಂಡಾಗ ಚಿತ್ರದ ಕೋರೆಗಳು ಕಾಣುತ್ತವೆ. ಮೊದಲರ್ಧದಲ್ಲಿ ಬರುವ ಹಾಡುಗಳು ನೃತ್ಯ ಮತ್ತು ಸಂಗೀತ ಸಂಯೋಜನೆಯ ಭಿನ್ನತೆಯ ಕಾರಣಕ್ಕೆ ಬಿಡಿಬಿಡಿಯಾಗಿ ಗಮನಸೆಳೆದರೂ ಪದೇ ಪದೇ ಬರುವ ಹಾಡುಗಳು ಸಿನಿಮಾ ಓಟಕ್ಕೆ ತಡೆಯೊಡ್ಡುತ್ತವೆ.
ಕೆಳಮಧ್ಯಮ ಹುಡುಗನನ್ನು ಭ್ರಷ್ಟಗೊಳಿಸುವ ಶ್ರೀಮಂತಿಕೆಯ ಆಮಿಷಗಳನ್ನು ಸಿದ್ಧಮಾದರಿಯಲ್ಲೇ ತೋರಿಸುವ ನಿರ್ದೇಶಕರು, ಕೊನೆಗೆ ಅಪರಾಧಿಯನ್ನು ಮಾದರಿ ವ್ಯಕ್ತಿಯಾಗಿ ಬಿಂಬಿಸಿ ಕೊಂಚವೂ ಪಾಪಪ್ರಜ್ಞೆ ಕಾಡದಂತೆ ಕಳ್ಳನ ಬಾಯಲ್ಲಿ ‘ನಿಮ್ಮ ಕನಸುಗಳನ್ನು ಬೆನ್ನತ್ತಿ’ ಎಂಬ ಉಪದೇಶವನ್ನೂ ಮಾಡಿಸಿಬಿಡುತ್ತಾರೆ. ಜತೆಗೆ ಉಳಿದವರಿಗೆ ಹಾನಿ ಮಾಡದ ತಪ್ಪನ್ನು ಮಾಡಬಹುದು ಎಂದು ನೂರಾರು ಕೋಟಿ ರೂಪಾಯಿಗಳ ಕಳ್ಳತನದ ಸಮರ್ಥನೆಗೂ ಇಳಿದುಬಿಡುತ್ತಾರೆ.
ಕೊನೆಗೂ ಗುಲ್ಟು ನಮಗೆ ಗೊತ್ತಿಲ್ಲದ ಇನ್ಫಾರ್ಮೇಶನ್ ಒಂದನ್ನು ‘ಇನ್ಫಾರ್ಮ್’ ಮಾಡಿ, ಹೊಸ ರೋಚಕ ಸಂಗತಿಯೊಂದನ್ನು ತಿಳಿದುಕೊಂಡ ರೋಮಾಂಚನಕ್ಕೆ ಪ್ರೇಕ್ಷಕನನ್ನು ನೂಕಿ ಸುಮ್ಮನಾಗಿಬಿಡುತ್ತದೆ. ಆದರೆ ಈ ಮಾಹಿತಿಯ ಕುರಿತಾದ ಮಾಹಿತಿಯನ್ನು ಹೇಳುವಾಗ ನಿರ್ದೇಶಕರು ‘ಥಿಯೆಟ್ರಿಕಲ್’ ಮತ್ತು ‘ಸಿನಿಮ್ಯಾಟಿಕ್’ ಅಂಶಗಳನ್ನು ಬ್ಲೆಂಡ್ ಮಾಡಿರುವ ರೀತಿ ಕುತೂಹಲಕಾರಿಯಾಗಿದೆ.
ಯಾವುದೇ ಸಂಗತಿಯನ್ನು ಹೊಸ ರೀತಿಯಲ್ಲಿ ಹೇಳುವುದಕ್ಕೆ ತುಂಬಾ ಸತ್ವ, ಸೃಜನಶೀಲತೆ, ಕೌಶಲ ಬೇಕು. ಇವು ಜನಾರ್ದನ್ ಚಿಕ್ಕಣ್ಣ ಅವರಲ್ಲಿದೆ. ಆದರೆ ಹೊಸ ರೀತಿಯಲ್ಲಿ ಹೇಳುವುದರ ಮೂಲಕ ಹೊಸದೊಂದು ದರ್ಶನ ಸಿಗಲು ಸಾಧ್ಯವಾದರೆ ಆ ಪ್ರಯತ್ನ ಯಶಸ್ವಿಯಾದಂತೆ. ‘ಗುಲ್ಟು’ ಸಿನಿಮಾದಲ್ಲಿ ಈ ಹೊಸಥರದ ಮಾಹಿತಿ, ದರ್ಶನವೊಂದನ್ನು ಹುಟ್ಟಿಸಲು ಸೋಲುತ್ತದೆ. ಆ ಕ್ಷಣದ ರೋಮಾಂಚನವನ್ನಷ್ಟೇ ಹುಟ್ಟಿಸಿ ಸುಮ್ಮನಾಗುತ್ತದೆ.
ಈ ಕೊರತೆಯ ಹೊರತಾಗಿಯೂ ಇದು ಸದ್ಯದ ಕನ್ನಡ ಚಿತ್ರರಂಗದ ಮಹತ್ವದ ಪ್ರಯೋಗ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಇದು ನಿರ್ದೇಶಕರ ಮೊಲ ಸಿನಿಮಾ ಎನ್ನುವುದೂ ಅವರ ಮುಂದಿನ ಪ್ರಯೋಗಗಳ ಕುರಿತು ಕುತೂಹಲವನ್ನೂ ನಂಬಿಕೆಯನ್ನೂಇರಿಸಿಕೊಳ್ಳಲು ಕಾರಣವಾಗಿದೆ. ಇಂಥ ಹಲವು ಯತ್ನಗಳು ಸೇರಿಯೇ ಮುಂದೊಂದು ಫಲ ಹುಟ್ಟಿಕೊಳ್ಳುವುದು. ಮತ್ತು ಇಂಥ ಪ್ರಯತ್ನಗಳು ಗೆದ್ದಾಗಲೇ ಇನ್ನಷ್ಟು ಜನರು ಈ ದಾರಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ‘ಗುಲ್ಟು’ ಗೆಲುವಿನ ಹಾದಿಯಲ್ಲಿದೆ… ನೀವೊಮ್ಮೆ ಸಿನಿಮಾ ನೋಡಿಬಿಡಿ.

‘ಗುಲ್ಟು’ ತಂಡಕ್ಕೆ ಶುಭಾಶಯಗಳು…

ಪದ್ಭನಾಭ ಭಟ್ ಅವರ ಮುಖಪುಟದ ಗೋಡೆಯಿಂದ..

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top