RESPONSIVE LEADERBOARD AD AREA
Movie Articles

ಕ್ಷಮಿಸಿ ಮುಂದೆ ಹೋಗುವುದು ದೊಡ್ಡತನ. ಇಷ್ಟರ ಮೇಲೆ ನಿಮ್ಮಿಷ್ಟ.

ಉಸ್ಸಪ್ಪಾ … ಅನೂಪ್ ಭಂಡಾರಿಯವರ ಕಚಡಾ ಪ್ರಕರಣಕ್ಕೆ ಸಿಕ್ಕಿದ ಪ್ರಚಾರ , ವ್ಯಕ್ತವಾದ ಆಕ್ರೋಶ , ಜನರ ಬಾಯಿಂದ ಉದುರಿದ ಬೈಗುಳಗಳು ಇವನ್ನೆಲ್ಲ ನೋಡಿದರೆ ಈ ಇಂಟರ್ನೆಟ್ ಎಷ್ಟು ಕ್ರೂರ ಅನ್ನಿಸದೆ ಇರಲಿಲ್ಲ. ಕೆಲವರು ಈಗಾಗಲೇ ಗುರುತಿಸಿದಂತೆ ಇದು poor sense of humour ಬಿಟ್ಟರೆ ಬೇರೇನೂ ಅಲ್ಲ ಅಂತ ಕಾಣುತ್ತದೆ. ರಾಜರಥ ಚಿತ್ರದಲ್ಲಿ “ಕರ್ನಾಟಕದಲ್ಲಿಯೇ ಇದ್ದು ಕನ್ನಡ ಮಾತಾಡದವರು ಕಚಡಾ ಲೋಫರ್ ನನ್ ಮಕ್ಳು” ಅಂತೇನೋ ಡೈಲಾಗ್ ಬರುತ್ತದೆ (ಆ ಡೈಲಾಗ್ ಸರಿಯಾಗಿ ನೆನಪಾಗುತ್ತಿಲ್ಲ, ಚಿತ್ರ ಇಷ್ಟವಾಗದ್ದರಿಂದ ತಲೆಯಲ್ಲಿ ಉಳಿದಿಲ್ಲ). ತಮ್ಮದೇ ಚಿತ್ರದ ಆ ಡೈಲಾಗಿಗೆ ಪಟಕ್ಕನೆ ರೆಫರೆನ್ಸ್ ಕೊಟ್ಟು ಜೋಕು ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ ಅಷ್ಟೇ . ಅಲ್ಲದೆ ತಮ್ಮ poor ಜೋಕಿಗೆ ತಾವೇ ಅಷ್ಟು ಜೋರು ನಕ್ಕಿದ್ದಾರೆ ಕೂಡಾ, ನಿಜಕ್ಕೂ ದುರಹಂಕಾರದಿಂದ ಮಾತಾಡಿದ್ದೇ ಹೌದಾದರೆ ಹಾಗೆ ನಗುತ್ತಿರಲಿಲ್ಲ ಅಂತಲಾದರೂ ನಮ್ಮ ಜನಕ್ಕೆ ಗೊತ್ತಾಗಬೇಕಿತ್ತು.

ಅನೂಪರನ್ನು ನಾವು ಇವತ್ತು ಬೆಳಗ್ಗೆಯಿಂದ ನೋಡಲು ಶುರು ಮಾಡಿದ್ದೂ ಅಲ್ಲ , ಕಳೆದ ಎರಡು ವರ್ಷಗಳಿಂದ ಎಷ್ಟು ಸಂದರ್ಶನ ಕೊಟ್ಟರೂ, ಏನು ಮಾತಾಡಿದರೂ ಬಹಳ ಜಾಗ್ರತೆಯಿಂದ, ಏನೂ ವಿವಾದವಾಗದಂತೆ , ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ಮಾತಾಡಿದ್ದಾರೆ, ಪಾಪದ ಜನ , soft ಮನುಷ್ಯ , gentleman ಅಂತೆಲ್ಲ ಹೇಳಿಸಿಕೊಂಡಿದ್ದ ಮನುಷ್ಯ ಇವರು. ಬೇಕಾದರೆ ಹುಡುಕಿ ನೋಡಿ. ದುರಹಂಕಾರ ಇರುವವರಿಗೆ ದುರಹಂಕಾರ ಮೂವತ್ತು ಸೆಕೆಂಡು ಮಾತ್ರ ಬರುವುದಲ್ಲ, ಇದ್ದರೆ ಅದು ಜೀವನದ್ದುದ್ದಕ್ಕೂ ಮತ್ತೆ ಮತ್ತೆ ಎದ್ದು ಕಾಣುತ್ತಿರುತ್ತದೆ, ಅಂಥವರು repeat offenderಗಳಾಗಿರುತ್ತಾರೆ. ಅನೂಪರ ಸಾರ್ವಜನಿಕ ಜೀವನದಲ್ಲಿ ಬೇರೆ ಯಾವುದೇ ತಪ್ಪು ನಡೆಯೂ ನನಗೆ ಗೊತ್ತಿರುವಂತೆ ಇಲ್ಲ, ಇದ್ದರೆ ಹೇಳಿ, ಒಪ್ಪಿಕೊಳ್ಳೋಣ.

ಇವರ ಸರಳ ಸಜ್ಜನಿಕೆಗೆ ನಾನೂ, ನನಗೆ ಪರಿಚಯ ಇರುವ ಕೆಲವರೂ ಸಾಕ್ಷಿಯೇ . ಎಷ್ಟೋ ಜನರದ್ದು ತೋರಿಕೆಯ, ಹುಸಿ ವಿನಯ ಇರುತ್ತದೆ , ಕ್ಯಾಮೆರಾದ ಮುಂದೆ ಭಾರೀ ವಿನಯಸಂಪನ್ನರಾಗಿ ತೆರೆಯ ಹಿಂದೆ ಅಹಂಕಾರಿಗಳಾಗಿರುವವರು ಬೇಕಾದಷ್ಟು ಜನ ಇರುತ್ತಾರೆ. ಅನೂಪ್ ಹಾಗಿರಲಿಲ್ಲ. ರಂಗಿಯ ಕಾಲದಲ್ಲಿ ನಾನವರ ಸಂದರ್ಶನ ಮಾಡಿದ್ದೆ , ಅವರಿಗೆ ಲೇಖನಗಳನ್ನು ಬರೆದು ಕೊಟ್ಟಿದ್ದೆ, ನನಗೆ ಯಾವ ಅಹಂಕಾರವೂ ಕಂಡಿರಲಿಲ್ಲ . ಸಿಂಗಾಪುರದಲ್ಲಿ ಚಿತ್ರ ಬಿಡುಗಡೆ ಮಾಡಿ, ಒಬ್ಬರ ನಂಬರ್ ಕೊಡುತ್ತೇನೆ ಅಂದಿದ್ದೆ, ಗಲ್ಫ್ ನಲ್ಲಿ ಬಿಡುಗಡೆ ಮಾಡಿ ಅಂತ ಹೇಳಿದಾಗ , ಅವರು ನನ್ನ ಹತ್ತಿರ ಹೇಳಿದ ಮಾತು ನನಗೆ ಚೆನ್ನಾಗಿ ನೆನಪಿದೆ, “ನಮಗೆ ರಂಗಿಗೆ ಒಂದು ಶೋ ಸಿಗುವುದು ಮುಖ್ಯ ಅಲ್ಲ, ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಸೃಷ್ಟಿ ಮಾಡುವುದು ಮುಖ್ಯ, ಹಾಗಾಗಿ ಬರೀ ಒಂದು ಶೋ ಕೊಡುವುದಿಲ್ಲ, ಥಿಯೇಟರ್ ನಲ್ಲಿ ಬೇರೆ ಭಾಷೆಯ ಚಿತ್ರಗಳು ಆಗುವ ಹಾಗೆ ಸರಿಯಾಗಿ ನಾಲ್ಕು ಶೋ ಕೊಟ್ಟು ಬಿಡುಗಡೆ ಮಾಡುವವರು ಇದ್ದರೆ ಹೇಳಿ, ಹಾಗೆ ಮಾಡಿದರೆ ಮಾತ್ರ ಕನ್ನಡಕ್ಕೆ ಮಾರುಕಟ್ಟೆ ಸೃಷ್ಟಿ ಆಗುತ್ತದೆ”.
ಈ ಕನ್ನಡದ ಕಾಳಜಿ ಎಲ್ಲರಲ್ಲೂ ಇರುವುದಿಲ್ಲ ಅಂತಷ್ಟೇ ಹೇಳುತ್ತೇನೆ . ಅಮೆರಿಕಾದಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂಬರ್ಥದಲ್ಲಿ ಪವನ್ ಹಿಂದೊಮ್ಮೆ ಬರೆದಿದ್ದರು , ಆದರೆ ಅನೂಪ್ ಅದನ್ನೂ ಆಗಮಾಡಿದ್ದರು . ಗಂಧದಗುಡಿಯ ನನ್ನ ಗೆಳೆಯರು ಮೊನ್ನೆ ಸಿಕ್ಕಿದಾಗಲೂ ಹೆಸರು ನೆನಪಿಟ್ಟುಕೊಂಡು ಮಾತಾಡಿಸಿದ್ದರಂತೆ. ಇವರಿಗೆ ದುರಹಂಕಾರವೋ ಮತ್ತೊಂದೋ ಇದೆಯೆಂದು ನಮಗ್ಯಾರಿಗೂ ಅನ್ನಿಸಿಲ್ಲ.

ರಂಗಿತರಂಗದ ಶೂಟಿಂಗ್ ಮುಗಿದಾಗ ತಾಂತ್ರಿಕ ಬಳಗದವರು(technical crew), ಊಟ ತಿಂಡಿ ವ್ಯವಸ್ಥೆಯವರು ಕಣ್ಣೀರು ಹಾಕಿ, “ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಮೇಲೆ ಕೂಗಾಡದೆ, ನಮ್ಮನ್ನು ಕೀಳಾಗಿ ನಡೆಸಿಕೊಳ್ಳದೆ , ಗೌರವದಿಂದ ಕಂಡದ್ದು ನೀವು ಮಾತ್ರ” ಅಂದಿದ್ದರಂತೆ.

ಹಾಗೊಂದು ವೇಳೆ misfire ಆದ ಜೋಕಿನಿಂದ ಹೊರಟ ಮಾತು ತಪ್ಪು ಅಂತಲೇ ಇಟ್ಟುಕೊಂಡರೂ , ಈ ಕಮೆಂಟು ಶೂರರು ಏನು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಅವತಾರಗಳೇ ? “ಛೆ ನಾನು ಹಾಗೆ ಮಾತಾಡಬಾರದಿತ್ತು” ಅಂತ ನಾವೆಲ್ಲ ಒಂದಲ್ಲ ಒಂದು ಸಲ ನಾಲಗೆ ಕಚ್ಚಿಕೊಂಡವರೇ ಅಲ್ಲವೇ? “ಅಯ್ಯೋ, ಬಾಯಿ ತಪ್ಪಿ ಹಾಗೆ ಹೇಳಿಬಿಟ್ಟೆ, ಯಾವುದೋ ಕೆಟ್ಟ ಘಳಿಗೆಯಲ್ಲಿ ಹಾಗೆ ಮಾಡಿಬಿಟ್ಟೆ” ಅಂತ ನಾನು ನೀವೆಲ್ಲ ಒಮ್ಮೆಯಾದರೂ ಕೊರಗಿದವರೇ.
“ನಾನು ಯಾವತ್ತೂ ಒಂದು ತಪ್ಪು ಮಾತನ್ನೂ ಆಡಿಲ್ಲ, ಯಾವ ತಪ್ಪನ್ನೂ ಮಾಡಿಲ್ಲ” ಅನ್ನುವ ಪುಣ್ಯಪುರುಷರು ನೀವಾಗಿದ್ದರೆ, ಹೀಗೆ ಯಾರೋ ಯಃಕಶ್ಚಿತ್ ನಿರ್ದೇಶಕರನ್ನು ಬೈಕೊಂಡು ಓಡಾಡುವ ಬದಲು ಈ ಸಲ ಚುನಾವಣೆಗಾದರೂ ನಿಂತು ಮುಖ್ಯಮಂತ್ರಿಯಾದರೂ ಆಗಿ ! ನಮ್ಮ ಜನ ಇಷ್ಟು ಸಿಟ್ಟನ್ನು ರಾಜಕಾರಣಿಗಳ ಮೇಲೆ , ಸರ್ಕಾರಿ ಕಛೇರಿಗಳಲ್ಲಿ , ಭ್ರಷ್ಟ ವ್ಯವಸ್ಥೆಯ ವಿರುದ್ಧ ತೋರಿಸಿದ್ದರೆ ದೇಶವಾದರೂ ಉದ್ದಾರವಾಗುತ್ತಿತ್ತು , ಕನಿಷ್ಠ ಪಕ್ಷ ಬೆಂಗಳೂರಿನಲ್ಲಿ ಕಂಡ ಕಂಡಲ್ಲಿ ರಸ್ತೆಯಲ್ಲಿ ನಿಜವಾಗಿಯೂ ಉಗಿಯುವ ಉಗುಳುಭಟರನ್ನು ಉಗಿದು ನಿಮ್ಮ ಈ ಸಿಟ್ಟನ್ನು ಪ್ರದರ್ಶಿಸಿದರೆ ನಮ್ಮ ಊರಾದರೂ ಚಂದವಾಗುತ್ತದೆ.

ಒಬ್ಬರ ಒಂದಿಡೀ ವ್ಯಕ್ತಿತ್ವವನ್ನು ನಾವು ಇಲ್ಲೆಲ್ಲೋ ಕೂತು ನಲುವತ್ತು ಸೆಕೆಂಡುಗಳಲ್ಲಿ ಅಳೆದು ಉಗಿದು ಬಿಸಾಕುವುದು ನನಗಂತೂ ಒಪ್ಪಿಗೆಯಾಗದ ಮಾತು. ಎದ್ದದ್ದಕ್ಕೆ ಕೂತದ್ದಕ್ಕೆ offend ಆಗುವುದು ದೊಡ್ಡತನವಲ್ಲ,ಉದಾರ ಬುದ್ಧಿಯಿಂದ ಕ್ಷಮಿಸಿ ಮುಂದೆ ಹೋಗುವುದು ದೊಡ್ಡತನ. ಇಷ್ಟರ ಮೇಲೆ ನಿಮ್ಮಿಷ್ಟ.

ಲೇಖನ – ಶರತ್ ಭಟ್ ಸೇರಾಜೆ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top