RESPONSIVE LEADERBOARD AD AREA
Movie Reviews

ಶಾರ್ಪ್ ಶೂಟರ್ ಫುಲ್ ಕಾಮಿಡಿ ಗುರು.. ನೋಡಿ ನಕ್ಕುಬಿಡಿ..

 

ಕ್ಯೂಟ್ ಅಂಡ್ ಹ್ಯಾಂಡ್‌ಸಮ್ ದಿಂಗಂತ್ ರ ಒಂದಷ್ಟು ಸಿನಿಮಾಗಳು ಒಂದರ ಹಿಂದೆ ಒಂದಂತೆ ಸುಮ್ಮನೆ ಬಂದು ಹೋಗಿವೆ, ಅವರ ಇತ್ತೀಚಿನ ಸಿನಿಮಾಗಳಲೆಲ್ಲಾ ಚಿತ್ರಪ್ರೇಮಿಗಳ ಗಮನ ಸೆಳೆಯುವಷ್ಟು ಪ್ರಚಾರ ಪಡೆದ ಸಿನಿಮಾವೆಂದರೆ ”ಶಾರ್ಪ್ ಶೂಟರ್”. ಗೀತ ರಚನಕಾರರಾದ ಗೌಸ್ ಪೀರ್ ದಿಗಂತ್ ಇಮೇಜ್ ನೋಡಿಕೊಂಡು ಹಾಸ್ಯಭರಿತ ಮನರಂಜನಾತ್ಮಕ ಸಿನಿಮಾ ಮಾಡಿದ್ದಾರೆ. ಅವರ ನಿರ್ದೇಶನದ ”ಶಾರ್ಪ್ ಶೂಟರ್” ದಿಗಂತ್ ವೃತ್ತಿ ಜೀವನದಲ್ಲಿ ಮಹತ್ತರ ಬದಲಾವಣೆ ತರಬಲ್ಲದೇ?
ಕಥೆ
****
ನಾಯಕಿಗೆ ರಾತ್ರಿ (ಫೋಬಿಯಾ) ಅಂದರೆ ಭಯ, ನಾಯಕನಿಗೆ ರಾತ್ರಿ ಕುರುಡು.. ಇವರಿಬ್ಬರ ದೋಷದಿಂದ ಸೃಷ್ಟಿಯಾದ ಹಾಸ್ಯ ಸನ್ನಿವೇಶಗಳ ಸರಮಾಲೆಯೇ ”ಶಾರ್ಪ್ ಶೂಟರ್”..
ಅಭಿನಯ
*********
ದಿಗಂತ್ ತಮ್ಮ ಇಮೇಜ್ ನಿಂದ ಹೊರಗೆ ಬಂದು ಅಭಿನಯಿಸಿದ್ದಾರೆ ಎಂದು ಹೇಳಲಾಗದಿದ್ದರೂ ಅವರ ಅಭಿನಯ ಕಥೆಯ ವಿಭಿನ್ನತೆಯ ಕಾರಣದಿಂದ ತುಂಬಾ ಖುಷಿಕೊಡುತ್ತದೆ. ಮಜಬೂತಾದ ಸಿಕ್ಸ್ ಪ್ಯಾಕ್ ನೊಂದಿಗೆ ಮತ್ತಷ್ಟು ಆಕರ್ಷಕವಾಗಿ ಕಾಣುವ ದಿಗಂತ್ ಚಿತ್ರದ ಮೂರು ಫೈಟ್ಸ್ ಗಳಲ್ಲಿ ಸಹಜವಾಗಿ ಹೊಡೆದಾಡಿ ಅಚ್ಚರಿ ಮೂಡಿಸುತ್ತಾರೆ.
ನಾಯಕಿ ಸಂಗೀತ ಚೌಹಾನ್ ಅಭಿನಯ ಅಚ್ಚುಕಟ್ಟಾಗಿದೆ, ಅವರ ಗ್ಲಾಮರ್ ಚಿತ್ರಕ್ಕೆ ಪ್ಲಸ್ ಆಗಿದೆ.
ಕಳೆದ ವಾರದ ರಥಾವರ ಸಿನಿಮಾದಂತೆಯೇ ಇಲ್ಲಿಯೂ ಚಿಕ್ಕಣ್ಣ ಪೂರ್ತಿ ಸಿನಿಮಾ ತಮ್ಮ ಟ್ರೇಡ್ ಮಾರ್ಕ್ ಹಾಸ್ಯದೊಂದಿಗೆ ಮಿಂಚಿದ್ದಾರೆ.
ಅಚ್ಯುತ್ ಕುಮಾರ್, ಸುಧಾರಾಣಿ, ಹಿರಿಯ ನಟಿ ಲಕ್ಷ್ಮಿ, ಮಿತ್ರಾ, ಸತ್ಯಜಿತ್, ಭಜರಂಗಿ ಲೋಕೇಶ್ ತಮ್ಮ ಪಾಲಿನ ಕೆಲಸ ಮಾಡಿಕೊಟ್ಟಿದ್ದಾರೆ.
ತಾಂತ್ರಿಕತೆ
***********
ಗೌಸ್ ಪೀರ್ ಅವರು ಟ್ರೆಂಡ್ ಮತ್ತು ಜನರ ಅಭಿರುಚಿ ಗಮನದಲ್ಲಿಟ್ಟುಕೊಂಡು ರಿಸ್ಕ್ ತೆಗೆದುಕೊಳ್ಳದೆ ಹಾಸ್ಯಭರಿತ ಮನರಂಜನೆಯನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಅವರು ಬರೆದಿರುವ ಚಿತ್ರಕಥೆ ಶಾರ್ಪ್ ಆಗಿಯೇನು ಸಾಗದಿದ್ದರೂ ಬೋರು ಹೊಡೆಸುವುದಿಲ್ಲ. ಆದರೆ ಚಿತ್ರದುದ್ದಕ್ಕೂ ಅವರ ನಿರ್ದೇಶನ ಏನೋ ಕಡಿಮೆಯಾಯಿತು ಎಂಬ ಭಾವನೆಯನ್ನು ಮೂಡಿಸುತ್ತದೆ.
ಶಿವ ಸಂತೋಷ್ ಅವರ ಸಂಗೀತ ನಿರ್ದೇಶನದಲ್ಲಿ ”ಎಲ್ಲೆ ಹೋದರೂ” ಹಾಡು ಗುನುಗುವಂತಿದೆ, ಬಾಕಿ ಹಾಡುಗಳು ತೆರೆಯ ಮೇಲೆ ಖುಷಿ ಕೊಡುತ್ತವೆ. ಕರುಣಾಕರ್ ಛಾಯಾಗ್ರಹಣ ದಿಗಂತ್ ಮತ್ತು ಸಂಗೀತ ಚೌಹಾನ್ ಅಂದವನ್ನು ಚೆನ್ನಾಗಿ ಸೆರೆ ಹಿಡಿದಿದೆ.
ಚಿತ್ರದ ಪ್ಲಸ್ ಪಾಯಂಟ್ಸ್
************************
ದಿಗಂತ್
ಚಿಕ್ಕಣ್ಣ
ಸಂಗೀತ ಚೌಹಾನ್ ಗ್ಲಾಮರ್
ಹಾಸ್ಯದೃಶ್ಯಗಳು
ಚಿತ್ರದ ಮೈನಸ್ ಪಾಯಂಟ್ಸ್
*************************
ನಿರ್ದೇಶನ
ಸ್ವಾರಸ್ಯಕರ ಸನ್ನಿವೇಶಗಳ ಕೊರತೆ
ಕೊನೆಯ ಮಾತು
*****************
ಶಾರ್ಪ್ ಶೂಟರ್ ಒಂದು ಹಾಸ್ಯ ಚಿತ್ರ, ನಗಾಡಿಕೊಂಡು ಮಜಾ ಮಾಡಿಕೊಂಡು ಆರಾಮಾಗಿ ಒಮ್ಮೆ ನೋಡಬಹುದಾದ ಸಿನಿಮಾ. ಹಾಸ್ಯ ಸಿನಿಮಾ ಪ್ರಿಯರಿಗೆ ಇದು ನೋಡಲೇಬೇಕಾದ ಸಿನಿಮಾ. ದಿಗಂತ್ ರ ಹಿಂದಿನ ಸಿನಿಮಾಗಳ ಫಲಿತಾಂಶಗಳನ್ನು ಲೆಕ್ಕಿಸದೆ, ಹಿಂದೆ ಮುಂದೆ ಯೋಚಿಸದೇ ನಗುವ ಉದ್ದೇಶದಿಂದ ಚಿತ್ರಮಂದಿರಕ್ಕೆ ತೆರಳಿ ”ಶಾರ್ಪ್ ಶೂಟರ್” ಸಿನಿಮಾ ನೋಡಿ.
RESPONSIVE LEADERBOARD AD AREA
RESPONSIVE LEADERBOARD AD AREA
To Top