RESPONSIVE LEADERBOARD AD AREA
Film News

ರಾಜ್ಯದ ಮೂಲೆ ಮೂಲೆಯಷ್ಟೇ ಅಲ್ಲ, ದೇಶಾದ್ಯಂತ ವ್ಯಾಪಿಸಲಿದೆ ರಣ ವಿಕ್ರಮನ ಅಬ್ಬರ

ರಣ ವಿಕ್ರಮನ ರಣರಂಗ ಸಿದ್ಧಗೊಳ್ಳುತ್ತಿದೆ, ಚಿತ್ರ ರಾಜ್ಯದ ಮೂಲೆ ಮೂಲೆಯಲ್ಲಿರುವ
ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದರ ಜೊತೆಗೆ ರಿಲಯನ್ಸ್ ಚಿತ್ರ ವಿತರಣಾ ಘಟಕದ
ನೆರವಿನೊಂದಿಗೆ ದೇಶಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ
ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರಗಳು ಹೊರ ರಾಜ್ಯಗಳಲ್ಲಿ ಇಷ್ಟು ದೊಡ್ಡ
ಮಟ್ಟದಲ್ಲಿ ಬಿಡುಗಡೆಯಾಗಿರುವ ಉದಾಹರಣೆಗಳಿಲ್ಲ, ಬಹು ವೆಚ್ಚದ, ಆಕರ್ಷಕ ತಾರಾಗಣದ
ರಣವಿಕ್ರಮ ಚಿತ್ರದ ಬಿಡುಗಡೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಗುತ್ತಿರುವುದಕ್ಕೆ ಕಾರಣ
ಚಿತ್ರದ ಬಗ್ಗೆ ಇರುವ ನಿರೀಕ್ಷೆ ಮತ್ತು ಚಿತ್ರದ ಬಗ್ಗೆ ನಿರ್ದೇಶಕ ನಿರ್ಮಾಪಕರಿಗಿರುವ
ವಿಶ್ವಾಸ. ಚಿತ್ರ ಸೆಟ್ ಏರಿದಾಗಲೇ ಪವನ್ ವಡೆಯರ್ ಮತ್ತು ಪುನೀತ್ ಕಾಂಬಿನೇಶನ್ ಬಗ್ಗೆ
ಒಳ್ಳೆಯ ಮಾತುಗಳು ಕೇಳಿಬಂದಿದ್ದವು, ಚಿತ್ರದ ಪೋಸ್ಟರ್, ಟೀಸರ್ ಗಳನ್ನೂ ನೋಡಿದಾಗ
ಚಿತ್ರಪ್ರೇಮಿಗಳು ಪುಳಕಗೊಂಡರು, ಈಗ ಕಳೆದ ವಾರವಷ್ಟೇ ಬಿಡುಗಡೆಯಾದ ಹಾಡುಗಳನ್ನು
ಕೇಳಿದ ಬಳಿಕ ಚಿತ್ರದ ಬಗ್ಗೆಗಿನ ಪಾಸಿಟಿವ್ ಅಂಶಗಳು ದೊಡ್ಡ ಕ್ರೇಜ್ ಆಗಿ
ಪರಿವರ್ತನೆಗೊಂಡಿದೆ.

ಇಷ್ಟು ದೊಡ್ಡ ಕ್ರೇಜ್ ಇರುವ ಚಿತ್ರವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ
ನಿರ್ಧಾರ ಮಾಡಿದ್ದಾರೆ ನಿರ್ಮಾಪಕ ಜಯಣ್ಣನವರು, ತಮ್ಮ ನೆಚ್ಚಿನ ಯುವ ನಿರ್ದೇಶಕ ಪವನ್
ವಡೆಯರ್ ಕೆಲಸದ ಬಗ್ಗೆ ತುಂಬಾ ತೃಪ್ತಿ ಹೊಂದಿರುವ ಅವರು ಕರ್ನಾಟಕದ ಮೂಲೆ ಮೂಲೆಗಳಿಗೂ
ರಣ ವಿಕ್ರಮನ ”ಹವಾ” ತಲುಪುವಂತೆ ಮಾಡುತ್ತಿದ್ದಾರೆ. ಪುನೀತ್ ಚಿತ್ರ ನಿರ್ದೇಶಿಸಲು
ಸಿಕ್ಕ ಅವಕಾಶ ತನ್ನ ಅಧೃಷ್ಟ ಎಂದೇ ಬಲವಾಗಿ ನಂಬಿರುವ ಪವನ್ ವಡೆಯರ್ ಚಿತ್ರಕಾಗಿ ಕಾಯಾ
ವಾಚಾ ಮನಸಾ ಹಗಲು ರಾತ್ರಿ ದುಡಿದಿದ್ದಾರೆ, ಪುನೀತ್ ರನ್ನು ಹಿಂದಿನ ಎಲ್ಲಾ
ಚಿತ್ರಗಳಿಗಿಂತ ಹೆಚ್ಚು ಸ್ಟೈಲಿಶ್ ಆಗಿ ತೋರಿಸಬೇಕೆಂಬ ಅವರ ಹಂಬಲ ಪೋಸ್ಟರ್ ಮತ್ತು
ಟೀಸರ್ ಗಳಲ್ಲಿ ಎದ್ದು ಕಾಣುತ್ತದೆ. ಚಿತ್ರರಂಗದ ಕೆಲ ನಿರ್ದೇಶಕರು ಪ್ರೇಕ್ಷಕರಿಗೆ
ಯಾವುದೇ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳದೆ ಸುಮ್ಮನೆ ಬಂದು ಸಿನಿಮಾ ನೋಡಿ ಎಂಬ
ಹಾರಿಕೆಯ ಮಾತುಗಳನ್ನು ಆಡುತ್ತಿರುವಾಗ, ಪವನ್ ರಣ ವಿಕ್ರಮನ ಮೇಲೆ ಎಷ್ಟಾದರೂ
ನಿರೀಕ್ಷೆ ಇಟ್ಟುಕೊಳ್ಳಿ, ನಾನು ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎಂದು ಹೇಳುವುದರ
ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈಗಾಗಲೇ ಉದ್ಯಮದ ವಲಯಗಳಲ್ಲಿ ರಣವಿಕ್ರಮ ಚಿತ್ರ ಕನ್ನಡದಲ್ಲಿ ತಾಂತ್ರಿಕವಾಗಿ
ಇದುವರೆಗೂ ಬಂದಿರುವ ಎಲ್ಲಾ ಚಿತ್ರಗಳಿಗಿಂತ ಮುಂಚೂಣಿಯಲ್ಲಿ ನಿಲ್ಲುತ್ತದೆ ಎನ್ನುವ
ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ಯಾವಾಗ ಏಪ್ರಿಲ್ 9 ನೇ ತಾರೀಖು ಬರುತ್ತದೋ,
ಯಾವಾಗ ರಣವಿಕ್ರಮ ನೋಡುತ್ತೆವೋ ಎಂದು ತುದಿಗಾಲಿನಲ್ಲಿ ನಿಂತಿರುವ ಅಭಿಮಾನಿಗಳ ಬಳಗ
ಸಣ್ಣ ಸಂಖ್ಯೆಯಲ್ಲೇನು ಇಲ್ಲ. ಕರ್ನಾಟಕದಲ್ಲಿ 250, ರಾಜ್ಯದ ಹೊರಗೆ 50, ಒಟ್ಟು 300
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ”ರಣ ವಿಕ್ರಮ” ಬೇಸಿಗೆಯ ರಣ ಬಿಸಿಲಿನ
ಝಳದ ಮಧ್ಯೆ ಸಖತ್ ಮನೋರಂಜನೆಯನ್ನು ನೀಡುವುದು ಗ್ಯಾರಂಟಿ.

RESPONSIVE LEADERBOARD AD AREA
RESPONSIVE LEADERBOARD AD AREA
To Top