RESPONSIVE LEADERBOARD AD AREA
Film News

ಎರಡನೆಯ ವಾರದಲ್ಲೂ ಮುಂದುವರೆದ ರಣವಿಕ್ರಮನ ಅಬ್ಬರ

ಕಳೆದ ವಾರ ಅದ್ದೂರಿಯಾಗಿ ಬಿಡುಗಡೆಗೊಂಡು ಅಭಿಮಾನಿಗಳನ್ನು ಖುಷಿಪಡಿಸಿ, ಪ್ರೇಕ್ಷಕರ ಮನಗೆದ್ದು, ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸಂಚಲನ ಉಂಟುಮಾಡಿದ್ದ ರಣವಿಕ್ರಮ ಎರಡನೆಯ ವಾರದಲ್ಲೂ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ಅಧಿಪತ್ಯ ಮುಂದುವರೆಸಿದ್ದಾನೆ. ನಮ್ಮ ರಾಜ್ಯವಲ್ಲದೆ ಪುಣೆ, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಿಡುಗಡೆಯಾದ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಮಳೆ, ಬಿಸಿಲು ಮತ್ತು ಐಪಿಎಲ್ಲುಗಳ ಹಾವಳಿಯ ಮದ್ಯೆಯೂ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಸೆಳೆಯುವಲ್ಲಿ ಸಂಪೂರ್ಣವಾಗಿ ಸಫಲವಾಗಿದೆ.

ಬೇಸಿಗೆಯ ರಜೆಯಲ್ಲಿ ಸಹಜವಾಗಿ ಚಿತ್ರಮಂದಿರದೆಡೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ, ಅಂತಹ ಜನರು ಮೊದಲು ರಣವಿಕ್ರಮ ನೋಡಿಬಿಡುವ ಅಂತಲೇ ನಿರ್ಧರಿಸಿರುವಂತೆ ಚಿತ್ರಮಂದಿರಕ್ಕೆ ಧಾವಿಸುತ್ತಿದ್ದಾರೆ. ಮೊದಲ ವಾರ ಪಡ್ಡೆ ಹುಡುಗರಿಂದ, ಹುಚ್ಚು ಅಭಿಮಾನಿಗಳಿಂದ ತುಂಬಿಹೋಗಿದ್ದ ಚಿತ್ರಮಂದಿರಗಳು ಈಗ ಮಹಿಳೆಯರು ಮಕ್ಕಳು, ಹುಡುಗಿಯರು ಎಲ್ಲರೂ ಕುಟುಂಬ ಸಮೇತ ಚಿತ್ರಮಂದಿರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಸ್ಟಾರ್ ಚಿತ್ರ ಬರೀ ಅಭಿಮಾನಿಗಳಿಂದ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಕೇಳಿದ್ದನ್ನು ಕೊಡುವ ಕಾಮಧೇನುವಿನಂತಹ ಫ್ಯಾಮಿಲೀ ಆಡಿಯೆನ್ಸ್ ಥಿಯೇಟರ್ ಗೆ ನುಗ್ಗಿದರೇನೇ ಚಿತ್ರ ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ಸಾಧ್ಯ. ರಣವಿಕ್ರಮನಿಗೆ ಈಗ ಅಂತಹ ಫ್ಯಾಮಿಲೀ ಆಡಿಯೆನ್ಸ್ ಕೃಪಾಕಟ್ಟಾಕ್ಷವೂ ಸಿಕ್ಕಿ ಹೋಗಿದೆ, ಹೀಗಾಗಿಯೇ ಚಿತ್ರ ಎರಡನೆಯ ವಾರದಲ್ಲೂ ಭರ್ಜರಿ ಕಲೆಕ್ಷನ್ ಮಾಡುವಂತಾಗಿದೆ.

ಒಟ್ಟಿನಲ್ಲಿ ಬಾಕ್ಸ್ ಆಫೀಸ್ ನಲ್ಲಿ ರಣವಿಕ್ರಮನ ಭವಿಷ್ಯ ಉಜ್ವಲವಾಗಿದೆ. ಚಿತ್ರ ಹೀಗೆಯೇ ಮುಂದುವರೆದುಕೊಂಡು ಹೋದರೆ ಪುನೀತ್ ಕರಿಯರ್ ನ ಅತ್ಯಂತ ದೊಡ್ಡ ಹಿಟ್
ಚಿತ್ರವಾಗುವ ಸಾಧ್ಯತೆಗಳಿವೆ. ಕನ್ನಡ ಚಿತ್ರರಂಗಕ್ಕೆ ಈ ವರ್ಷ ಸಿಕ್ಕ ಬಹುದೊಡ್ಡ ಯಶಸ್ಸು ಇದು. ಫೇಸ್ ಬುಕ್ ನಲ್ಲಿ ಈಗಾಗ್ಲೇ ಚಿತ್ರದ ಕಲೆಕ್ಶನ್ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಜಯಣ್ಣ ಕಂಬೈನ್ಸ್ ”ಚಿತ್ರ ಭರ್ಜರಿ ಕಲೆಕ್ಶನ್ ಮಾಡುತ್ತಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಘ್ನತೆಗಳು” ಎಂದು ಹೇಳಿಕೊಂಡಿದೆ. ನಿರ್ದೇಶಕ ಪವನ್ ವಡೆಯರ್ ಅವರಂತೂ ಚಿತ್ರ ಗೆದ್ದ ಖುಷಿಯಲ್ಲಿ ರೋಮಾಂಚಗೊಂಡಿದ್ದಾರೆ.

ರಣವಿಕ್ರಮ ಬಾಕ್ಸ್ ಆಫೀಸ್ ನಲ್ಲಿ ಹೀಗೆಯೇ ತನ್ನ ಅಧಿಪತ್ಯ ಮುಂದುವರೆಸಲಿ ಎಂದು ನಮ್ ಸಿನಿಮಾ ಆಶಿಸುತ್ತದೆ.

RESPONSIVE LEADERBOARD AD AREA
RESPONSIVE LEADERBOARD AD AREA
To Top