RESPONSIVE LEADERBOARD AD AREA
Movie Reviews

MOVIE REVIEW : ಮುದ್ದು ಮನಸುಗಳ ಮೇಲೆ ಪ್ರೀತಿ ಪ್ರೇಮದ ಸವಾರಿ "ಮುದ್ದು ಮನಸೇ"

ಪ್ರೇಮಕಥೆಯುಳ್ಳ ಸಿನಿಮಾ ಇಷ್ಟ ಪಡುವವರು.. ಲವ್ವು ಡವ್ವು ಫೀಲು ಕಿಕ್ಕ್ಕಿನಲ್ಲಿರುವವರು.. ಹುಡುಗ ಹುಡುಗಿಯರು ನೋಡಲೇಬೇಕಾದ ಸದಭಿರುಚಿ ಚಿತ್ರ ”ಮುದ್ದು ಮನಸೇ”.. ಅನಂತ್ ಶೈನ್ ಅವರು ತಮ್ಮ ಚೊಚ್ಚಲ ನಿರ್ದೇಶನದಲ್ಲೇ ತಮ್ಮ ಅಚ್ಚುಕಟ್ಟಾದ ಕೆಲಸದಿಂದ ಪ್ರೇಕ್ಷಕರಿಂದ ಸೈ ಅನಿಸಿಕೊಳ್ಳುತ್ತಾರೆ.

ಚಿತ್ರವು ತಂದೆ-ತಾಯಿ ಬಾಂಧವ್ಯ, ಸ್ನೇಹ-ಪ್ರೀತಿಗಳ ಚೆಲ್ಲಾಟ ಮತ್ತು ವಿಧಿಯಾಟ ಉಂಟುಮಾಡುವ ವೈರುದ್ಯಗಳನ್ನು ಒಳಗೊಂಡ ಒಂದು ಸುಂದರ ಪ್ರೇಮ ಕಥೆ. ಅರುಣ್ ಗೌಡ ಮತ್ತು ನಿತ್ಯಾ ರಾಮ್ ಅವರ ಹಳ್ಳಿ ಸೊಗಡಿನ ಪ್ರೇಮಕಥೆಯಂತೂ ಪ್ರೇಮಿಯ ಕಣ್ಣಂಚಿನಲ್ಲಿ ನೀರು ತರಿಸುವುದಂತು ನಿಜ. ಹಳ್ಳಿಯಲ್ಲಿ ತರಕಾರಿ ಮಾರುವವಳ ಮಗನಾಗಿ ಅಭಿನಯಿಸಿರುವ ಅರುಣ್ ಗೌಡ ತಾಯಿ ಮಗನ ಸೆಂಟಿಮೆಂಟ್ ದೃಶ್ಯಗಳಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ..

ನಿತ್ಯಾ ರಾಮ್ ಮುದ್ದಾದ ಹಳ್ಳಿ ಹುಡುಗಿಯಾಗಿ ಕಣ್ಣಿಗೆ ತಂಪನ್ನು ನೀಡುತ್ತಾರೆ. ಇನ್ನು ಚಿತ್ರದಲ್ಲಿ ಐಶ್ವರ್ಯ ನಾಗ್ ಅವರದ್ದು ಪಡ್ಡೆ ಹುಡುಗನ ಕ್ಯಾರೆಕ್ಟರ್, ಅವರ ಅಭಿನಯದ ಹಾಸ್ಯ ದೃಶ್ಯಗಳು ಚೆನ್ನಾಗಿವೆ. ಅವರಿಗೆ ಕೇಳದ್ದನ್ನೆಲ್ಲಾ ಕೊಡಿಸುವ ಅಪ್ಪನಾಗಿ ಆಚ್ಯುತ್ ರಾವ್ ಹಾಗೂ ಅವಳಿಗೆ ವಿರುದ್ಧವಾಗಿ ಪದ್ಮಿನಿ ಪ್ರಕಾಶ್ ಅವರ ನಟನೆ ಎಲ್ಲರಿಗೂ ಹಿಡಿಸುತ್ತದೆ.

ಯಶ್ ಅವರ ಮುಂದಿನ ಚಿತ್ರ ಮಾಸ್ಟರ್ ಪೀಸ್ ನಿರ್ದೇಶಕ ಮತ್ತು ಮುದ್ದು ಮನಸೇ ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ ಅವರು ಸ್ನೇಹಪೂರ್ವಕವಾಗಿ ಒಂದು ದೃಶ್ಯದಲ್ಲಿ ನಟಿಸಿ ಪಂಚ್ ಡೈಲಾಗ್ ಹೊಡೆದು ಶಿಳ್ಳೆ ಗಿಟ್ಟಿಸುತ್ತಾರೆ..

ಉಳಿದ ಎಲ್ಲಾ ಕಲಾವಿದರ ಅಭಿನಯ ಸಿನಿಮಾ ನೋಡಿಸಿಕೊಂಡು ಹೋಗುವುದಕ್ಕೆ ಸಹಾಯಕಾರಿಯಾಗಿದೆ. ವಿನೀತ್ ರಾಜ್ ಸಂಗೀತ ಮತ್ತು ಮಾಧವ ಸಾಳಂಕೆ ಅವರ ಕ್ಯಾಮರ ಕೈ ಚಳಕ ಚಿತ್ರಕ್ಕೆ ಪೂರಕವಾಗಿದೆ.. ಮಾಸ್ ಮಾದ ಅವರ ಫೈಟ್ಸ್ಗಳಲ್ಲಿ ಅರುಣ್ ಮಿಂಚಿದ್ದಾರೆ.

ಪ್ರೇಮಕಥೆಗಳು ನಮ್ಮ ಸಿನಿಮಾಗಳಲ್ಲಿ ಅತಿ ಹೆಚ್ಚಾಗಿ ಬರುವುದರಿಂದ ”ಮುದ್ದುಮನಸೇ” ಚಿತ್ರದ ಕೆಲವೊಂದು ದೃಶ್ಯಗಳು ಕ್ಲೀಷೆ ಅನಿಸಬಹುದು, ಆದರೆ ನಿರ್ದೇಶಕ ಅನಂತ್ ಅವರ ಬುದ್ದಿವಂತಿಕೆಯ ನಿರ್ದೇಶನ ಚಿತ್ರವು ಸಲೀಸಾಗಿ ಸಾಗುವಂತೆ ಮಾಡಿದೆ. ನಟ ಅರುಣ್ ಗೌಡ ತಾನು ಹೊಸಬ ಅನ್ನುವುದೇ ಸುಳ್ಳು ಅನಿಸುವಂತೆ ನಟಿಸಿ ಅಚ್ಚರಿ ಮೂಡಿಸುತ್ತಾರೆ. ಈ ಹೊಸಬರ ಚಿತ್ರಕ್ಕೆ ಸಾಕಷ್ಟು ಹಣ ಹೂಡಿರುವ ನಿರ್ಮಾಪಕ ಶ್ರೀನಿವಾಸ್ ಅವರಿಗೆ ಜೈ..

ಒಟ್ಟಿನಲ್ಲಿ ಪ್ರೀತಿಪ್ರೇಮಕ್ಕೆ, ಪ್ರೇಮಕಥೆಗಳಿಗೆ ಕೊನೆಯಿಲ್ಲ.. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾ ನಿರ್ಮಾಣವಾಗುವುದೇ ಪ್ರೇಮಕಥೆಗಳ ಮೇಲೆ, ಎಷ್ಟೇ ಪ್ರೇಮಕಥೆಗಳು ಬಂದು ಹೋದರೂ ಮತ್ತೊಂದು ಲವ್ ಸ್ಟೋರಿ ಸಿನಿಮಾ ಸಿನಿಮಾ ನೋಡಲು ನಾವು ಯಾವುತ್ತೂ ಬೇಸರಿಸಿಕೊಳ್ಳುವುದಿಲ್ಲ.. ಎಲ್ಲೂ ಬೇಸರ ಮೂಡಿಸದ ಮತ್ತೊಂದು ಪ್ರೇಮಕಥೆ ”ಮುದ್ದು ಮನಸೇ”ಯನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ..

Nam Rating 3.5/5

RESPONSIVE LEADERBOARD AD AREA
RESPONSIVE LEADERBOARD AD AREA
To Top