RESPONSIVE LEADERBOARD AD AREA
Film News

ಬಾಕ್ಸ್ ಆಫೀಸ್ ಬೂಸ್ಟ್ ಮಾಡಲು ಬರುತ್ತಿದ್ದಾನೆ ''ಐರಾವತ''

ಲೇಟ್ ಆದರೂ ಲೇಟೆಸ್ಟ್ ಆಗಿ, ಬಾಕ್ಸ್ ಆಫೀಸ್ ಬೂಸ್ಟ್ ಮಾಡಲು ಬರುತ್ತಿದ್ದಾನೆ ”ಐರಾವತ”

ಈ ವಾರ ಬಾಕ್ಸ್ ಆಫೀಸ್ ಮೇಲೆ ಬಾಕ್ಸ್ ಆಫೀಸ್ ಸುಲ್ತಾನ್ ದಾಳಿ ಮಾಡುತ್ತಿದ್ದಾರೆ.. ಈ ಬಾರಿ ”ಐರಾವತ”ನ ಅವತಾರದಲ್ಲಿ ದಾಳಿಗೆ ಸಜ್ಜಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅದು ಹೇಗೆ?, ಕನ್ನಡ ಚಿತ್ರರಂಗ ಕಂಡು ಕೇಳರಿಯದ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಅಂದರೆ ಅಂದಾಜು 300 ಚಿತ್ರಮಂದಿರಗಳಲ್ಲಿ ಐರಾವತನ ಆಗಮನವಾಗುತ್ತಿದೆ. ಅಂಬಾರಿ, ಅದ್ದೂರಿಯಂತಹ ಯೂತ್ ಫುಲ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಎಪಿ ಅರ್ಜುನ್ ಅವರ ಸಾರಥ್ಯದ ”ಐರಾವತ” ಚಿತ್ರದ ಬಗ್ಗೆ ಮೊದಲಿನಿಂದಲೂ ತುಂಬಾನೇ ಕುತೂಹಲ ಮತ್ತು ಭರವಸೆ ಹುಟ್ಟಿಕೊಂಡಿತ್ತು. ಆದರೆ ತಿಂಗಳ ಹಿಂದೆ ಬಿಡುಗಡೆಯಾದ ಟ್ರೈಲರ್ ನಿಂದ ಚಿತ್ರದ ಮೇಲಿದ್ದ ಭರವಸೆ ಮೂರು ಪಟ್ಟು ಹೆಚ್ಚಾಯಿತು.

ಈ ನಡುವೆ ಬಂದ ಯಾವುದೇ ಸ್ಟಾರ್ ಚಿತ್ರದ ಟ್ರೈಲರ್ ಗಿಂತ ”ಐರಾವತ” ಚಿತ್ರದ ಟ್ರೈಲರ್ ಒಂದು ಕೈ ಮೇಲೆ ಅನ್ನುವಂತಿತ್ತು, ಸಿನಿಮಾ ತಾಂತ್ರಿಕವಾಗಿ ಬಹಳ ಶ್ರೀಮಂತವಾಗಿ ಮೂಡಿಬಂದಿರುವ ಮತ್ತು ಅಭಿಮಾನಿಗಳು ರೊಚ್ಚಿಗೇಳುವ ಹೀರೊಇಸಂ ದೃಶ್ಯಗಳ ಸರಿಯಾದ ಪ್ಯಾಕೇಜ್ ಇರುವ ಪೂರ್ಣ ಭರವಸೆಯನ್ನು ಟ್ರೈಲರ್ ನೀಡುವುದರೊಂದಿಗೆ ರಾಜ್ಯಾದ್ಯಂತ ದೊಡ್ಡ ಹೈಪ್ ಸೃಷ್ಟಿಯಾಯಿತು. ಟ್ರೈಲರ್ರೆ ಹೀಗಿದ್ದರೆ ಸಿನಿಮಾ ಇನ್ ಹೇಂಗಿರಬೇಡ.. ಅಂದುಕೊಂಡು ಥ್ರಿಲ್ ಆಗಿರುವ ದರ್ಶನ್ ಅಭಿಮಾನಿ ಬಳಗ ಚಿತ್ರಮಂದಿರದಲ್ಲಿ ಹಬ್ಬಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಚಿತ್ರದ ಟೈಟಲ್ ಸಾಂಗ್ ಟ್ರೈಲರ್ ಕೊಟ್ಟ ಹೈಪ್ ಗೆ ಒಳ್ಳೆ ಸಾಥ್ ಕೊಟ್ಟಿದೆ.. ರಾಜ್ಯಾದ್ಯಂತ ಇರುವ ಎಲ್ಲಾ ಕನ್ನಡ ಚಿತ್ರಪ್ರೇಮಿಗಳ ಮೊಬೈಲ್ ನಲ್ಲಿ ಐರಾವತ ಟೈಟಲ್ ಸಾಂಗ್ ಇದೆ. ಅಷ್ಟರ ಮಟ್ಟಿಗೆ ಹಾಡು ಸೌಂಡು ಮಾಡಿದೆ.
ಒಬ್ಬ ಸೂಪರ್ ಸ್ಟಾರ್ ಸಿನಿಮಾಗೆ ಬಿಡುಗಡೆಗೆ ಮುನ್ನ ಇರಬೇಕಾದ ಅಬ್ಬರದ ಹೈಪ್ ”ಐರಾವತ”ನಿಗೆ ಸಖತ್ತಾಗಿಯೇ ಸಿಕ್ಕಿದೆ, ಇನ್ನು ಏನಿದ್ದರೂ ನಿರ್ದೇಶಕ ಎ ಪಿ ಅರ್ಜುನ್ ಕಸುಬುಗಾರಿಕೆಯ ಮೇಲೆ ಎಲ್ಲವೂ ಅವಲಂಬಿಸಿದೆ. ಸಿನಿಮಾಗಿರುವ ಹೈಪಿಗೆ ಗುರುವಾರ ಮೊದಲ ಪ್ರದರ್ಶನ ನೋಡಿದ ಪ್ರೇಕ್ಷಕರಿಂದ ಒಳ್ಳೆಯ ಹಿಟ್ ಟಾಕ್ ಬಂದಿದ್ದೇ ಆದರೆ ಸುಗ್ಗಿಯೋ ಸುಗ್ಗಿ. ಐರಾವತನ ಕಾಲ್ತುಳಿತಕ್ಕೆ ಸಿಕ್ಕಿ ಬಾಕ್ಸ್ ಆಫೀಸ್ ದಾಖಲೆಗಳು ಅಪ್ಪಚ್ಚಿಯಾಗುವುದು ಖಂಡಿತ. ಬಹುಕೋಟಿ ವೆಚ್ಚದ ಹೈಪ್ ಇರುವ ಸೂಪರ್ ಸ್ಟಾರ್ ಸಿನಿಮಾ ಒಂದರ ದೊಡ್ಡಮಟ್ಟದ ಗೆಲುವು ಚಿತ್ರರಂಗದ ಒಳಿತಿಗೆ ತುಂಬಾ ಒಳ್ಳೆಯದು.

ಬೆನ್ನ ಹಿಂದೆ ಮಿರಿ ಮಿರಿ ಚಾಕು ಹಿಡಿದು ನಿಂತಿರುವ ಪರಭಾಷಾ ಚಿತ್ರಗಳ ಹಾವಳಿಯಿಂದ ಪಾರಾಗಬೇಕಾದರೆ ಕನ್ನಡ ಸಿನಿಮಾಗಳು ಗೆಲ್ಲಬೇಕು.. ನಮ್ಮ ಕನ್ನಡಿಗರು ನಮ್ಮ ಸಿನಿಮಾಗಳಿಗೆ ನುಗ್ಗುವಂತೆ ಮಾಡಬೇಕು.. ಐರಾವತ ಹಾಗೆ ಮಾಡಿಯೇ ತೀರುತ್ತಾನೆ ಅನ್ನೋ ವಿಶ್ವಾಸದಲ್ಲಿ ನಾವಿದ್ದೇವೆ.

RESPONSIVE LEADERBOARD AD AREA
RESPONSIVE LEADERBOARD AD AREA
To Top