RESPONSIVE LEADERBOARD AD AREA
Movie Reviews

MOVIE REVIEW : ಮಾಟಮಂತ್ರ, ಭೂತ ಚೇಷ್ಟೆಯ ಥ್ರಿಲ್ಲಿಂಗ್ ‘ಕಟಕ’

ವಾಮಾಚಾರ ಪ್ರಪಂಚದ ಅತಿ ಪುರಾತನ ವಿದ್ಯೆಗಳಲ್ಲೊಂದು. ಹಿಂದೂ ಧರ್ಮದ ಬಹುಮುಖ್ಯ ಅಂಗವಾದ ವೇದಗಳ ಪೈಕಿ ಅಥರ್ವಣವೇದದಲ್ಲಿ ವಾಮಾಚಾರ ಕುರಿತಂತೆ ಆಳವಾಗಿ ವಿವರಿಸಲಾಗಿದೆ. ವಶೀಕರಣ, ಕಣ್ಕಟ್ಟು ವಿದ್ಯೆ, ಮಾಟ ವಿದ್ಯೆ ಮತ್ತು ಸಂಮೋಹನ ಕೂಡ ವಾಮಾಚಾರದ ಇತರೇ ಅಂಗಗಳಾಗಿವೆ. ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯ,ಕುತೂಹಲಗಳನ್ನು ಕಾಣಬಹುದಾಗಿದೆ.

ಕುಂದ ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದ ರವಿ ಬಸ್ರೂರ್ ನಿರ್ದೇಶಿಸಿರುವ ‘ಕಟಕ’ ಚಿತ್ರದಲ್ಲಿ ವಾಮಾಚಾರದ ಪೀಡೆಗೆ ಬಲಿಯಾಗಿ ಪಾಡು ಪಡುವ ಕುಟುಂಬ ಒಂದರ ಕಥೆಯಿದೆ.

ಕಥೆ

ಬೆಂಗಳೂರು ನಗರ ಜೀವನದ ಯಾಂತ್ರಿಕತೆಗೆ ಬೇಸತ್ತು ನೆಮ್ಮದಿ ಬಯಸಿ ಮಂಗಳೂರಿನಲ್ಲಿರುವ ಹುಟ್ಟೂರಿಗೆ ಬಂದಿರುವ ಕುಟುಂಬವೊಂದರ ಪುಟ್ಟ ಮಗುವಿಗೆ ದುಷ್ಟಶಕ್ತಿ ಸೇರಿಕೊಳ್ಳುತ್ತದೆ. ಆ ಮಗು ವಿಲಕ್ಷಣವಾಗಿ ವರ್ತಿಸಲು ಶುರು ಮಾಡುತ್ತದೆ. ಮಗುವಿನ ತಂದೆ ತಾಯಿ ಮಗುವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಪಾಡುಗಳನ್ನು ಪಡುತ್ತಾರೆ. ಅಸಲಿ ಆ ಮಗುವಿಗೆ ಸೇರಿದ ದುಷ್ಟಶಕ್ತಿ ಯಾವುದು? ಅದನ್ನು ಪ್ರಯೋಗ ಮಾಡಿದ್ದು ಯಾರು? ಮಗುವನ್ನು ಹೇಗೆ ಆ ಶಕ್ತಿಯಿಂದ ಪಾರು ಮಾಡಲಾಗುತ್ತದೆ? ಎಂಬುದನ್ನು ತಿಳಿಯಲು ನೀವು ‘ಕಟಕ’ ಸಿನೆಮಾ ನೋಡಬೇಕು.

ಅಭಿನಯ

ದುಷ್ಟಶಕ್ತಿ ಭಾದಿತ ಐದು ವರ್ಷದ ಮಗುವಿನ ತಂದೆ ತಾಯಿಯಾಗಿ ಅಶೋಕ್ ರಾಜ್ ಮತ್ತು ಸ್ಪಂದನ ಪ್ರಸಾದ್ ಅವರ ಅಭಿನಯ ಬಹಳ ಅಚ್ಚುಕಟ್ಟಾಗಿದೆ. ಬೇಬಿ ಶ್ಲಾಘ ಸಾಲಿಗ್ರಾಮ ಮುದ್ದಾಗಿ ಅಭಿನಯಿಸಿದೆ.

ತಾಂತ್ರಿಕತೆ

ರವಿ ಬಸ್ರೂರ್ ಹಿನ್ನೆಲೆ ಸಂಗೀತ ಸೂಪರ್ಬ್, ನಿರ್ದೇಶನ ಓಕೆ ಓಕೆ. ಸಚಿನ್ ಬಸ್ರೂರ್ ಛಾಯಾಗ್ರಹಣದಲ್ಲಿ ಡ್ರೋನ್ ಶಾಟ್ ಗಳು ಚೆನ್ನಾಗಿ ಮೂಡಿಬಂದಿವೆ. DTS ರೆಕಾರ್ಡಿಂಗ್ ಚಿತ್ರದ ಹೈಲೈಟ್. ಸಿಜಿ ಎಫೆಕ್ಟ್ ಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ.

ಕೊನೆಯ ಮಾತು

ಹಾರರ್ ಸಿನಿಮಾಗಳಿಗೆ ಇರಬೇಕಾದ ತೀವ್ರತೆ ಕಟಕ ಚಿತ್ರದಲ್ಲಿದೆ. ಕೆಲವು ದೃಶ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಿರಬಹುದಿತ್ತು. ಕಡಿಮೆ ಬಜೆಟ್ ನ ಚಿತ್ರ ಎಂಬ ಅನುಭವ ಅಲ್ಲಲ್ಲಿ ಆಗುತ್ತದೆ. ಕತ್ತರಿ ಪ್ರಯೋಗಕ್ಕೆ ಒಳಗಾಗಬೇಕಿದ್ದ ಅನಗತ್ಯ ದೃಶ್ಯಗಳಿವೆ. ಹಾರರ್ ಎಫೆಕ್ಟ್ ಇನ್ನೂ ಸ್ವಲ್ಪ ಜಾಸ್ತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ದೆವ್ವ ಭೂತ ಮಾಟಮಂತ್ರದ ವಿಷಯಗಳ ಬಗ್ಗೆ ಆಸಕ್ತಿಯಿರುವ ಜನರಿಗೆ ಈ ಚಿತ್ರ ತುಂಬಾ ರಂಜಿಸುತ್ತದೆ. ಕ್ಲೈಮಾಕ್ಸ್ ಚೆನ್ನಾಗಿದೆ. ಕೊಟ್ಟ ಕಾಸಿಗೆ ಮೋಸ ಅಂತೂ ಅಲ್ಲ, ಆರಾಮಾಗಿ ಒಮ್ಮೆ ‘ಕಟಕ’ ನೋಡಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top