RESPONSIVE LEADERBOARD AD AREA
Film News

ಬಾಕ್ಸ್ ಆಫೀಸ್ ನಲ್ಲಿ ಅರಳಲು ಕೆಂಡಸಂಪಿಗೆ ರೆಡಿ

ಕನ್ನಡ ಚಿತ್ರರಂಗದ ಬಹು ಬೇಡಿಕೆಯ, ಸೂಕ್ಷ್ಮ ಮತ್ತು ತೀಕ್ಷ್ಣದೃಷ್ಟಿಯ ನಿರ್ದೇಶಕ ದುನಿಯಾ ಸೂರಿ ನಿರ್ದೇಶನದ ”ಕೆಂಡಸಂಪಿಗೆ” ಈ ವಾರ ಬಿಡುಗಡೆಯಾಗುತ್ತಿದೆ. ಇದು ಚಿತ್ರಪ್ರೇಮಿಗಳಿಗೆ ನಿಜಕ್ಕೂ ಕುತೂಹಲದ ವಾರ.. ದುನಿಯಾ ಸೂರಿ ಸಿನಿಮಾ ಅಂದರೆ ಕನ್ನಡ ಚಿತ್ರಪ್ರೇಮಿ ಮೀನಾಮೇಷಾ ಎಣಿಸದೆ ಭರವಸೆ ಇಟ್ಟುಕೊಳ್ಳುತ್ತಾನೆ.. ತನ್ನ ಸಿನಿಮಾಗಳಿಂದ ಸೂರಿ ಹಾಕಿ ಕೊಟ್ಟಿರುವ ಮೇಲ್ಪಂಕ್ತಿ ಅಂತಹುದು..ದುನಿಯಾ ಸೂರಿ ಅವರು ನಿರ್ದೇಶಿಸಿರುವ ಆರು ಚಿತ್ರಗಳಲ್ಲಿ ಅಣ್ಣಾ ಬಾಂಡ್ ಹೊರತು ಪಡಿಸಿ ಇನ್ನೆಲ್ಲಾ ಚಿತ್ರಗಳಿಂದಲೂ ಪ್ರೇಕ್ಷಕರನ್ನು ಒಂದಲ್ಲಾ ಒಂದು ರೀತಿ ತಟ್ಟಿದ್ದಾರೆ..ನಿಜ ಜೀವನದಲ್ಲಿ ಅದರಲ್ಲೂ ಕೆಳ ಮಧ್ಯಮವರ್ಗದ ಜನಮಾನಸದಲ್ಲಿ ಕಂಡುಬರುವಂತಹ ಪಾತ್ರಗಳು, ಸನ್ನಿವೇಶಗಳು ಮತ್ತು ಪ್ರೀತಿ, ದುಖಃ ಸಾವು ನೋವುಗಳನ್ನು ಕಮರ್ಶಿಯಲ್ ಆಗಿ ಬಲು ಗಟ್ಟಿಯಾಗಿ ಕಟ್ಟಿಕೊಡುವ ಸೂರಿ ಇಡೀ ಚಿತ್ರರಂಗದಲ್ಲೇ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ.

ದುನಿಯಾ, ಇಂತಿ ನಿನ್ನ ಪ್ರೀತಿಯ ನಂತರ ಜಂಗ್ಲಿ, ಜಾಕಿ ಅಣ್ಣಾಬಾಂಡ್ ಅಂತಹ ಪಕ್ಕಾ ಸ್ಟಾರ್ ಕಮರ್ಶಿಯಲ್ ಸಿನಿಮಾಗಳ ಕಡೆ ಗಮನ ಹರಿಸಿದ್ದ ಸೂರಿ, ಹ್ಯಾಟ್ರಿಕ್ ಹೀರೊ ಶಿವಣ್ಣನ ಜೊತೆಗೂಡಿ ಕಡ್ಡಿಪುಡಿಯಂತಹ ಕ್ಲಾಸಿಕ್ ಕ್ರೈಮ್ ಸಿನಿಮಾ ಮಾಡಿ ತಮ್ಮನ್ನು ಹೀಗಳೆಯುತ್ತಿದ್ದ ವಿಮರ್ಶಕರ ಬಾಯಿ ಮುಚ್ಚಿಸಿದರು.. ಕಮರ್ಶಿಯಲ್ ಸಿನಿಮಾದ ಬೇಡಿಕೆಗಳನ್ನು ಬದಿಗೊತ್ತಿ ಕಥೆ ಹೇಳಲು ಹೊರಟರೆ ತಾನೆಂತಹ ಸೂಕ್ಷ್ಮ ಸಂವೇದನೆಯ ನಿರ್ದೇಶಕ ಎಂದು ಅವರು ಕಡ್ಡಿಪುದಿಯಲ್ಲಿ ತೋರಿಸಿಕೊಟ್ಟಿದ್ದರು. ಈಗ ಅಸಲಿ ಚಿತ್ರಪ್ರೇಮಿಗಳು ”ಕೆಂಡಸಂಪಿಗೆ”ಯ ಅರಳುವಿಕೆಗೆ ತಹತಹಿಸುತ್ತಿರುವುದಕ್ಕೆ ಇದೇ ಕಾರಣ.. ಸೂರಿ ಮತ್ತೊಮ್ಮೆ ಕಮರ್ಶಿಯಲ್ ಸಿನಿಮಾದ ಬೇಡಿಕೆಗಳನ್ನು ಬದಿಗೊತ್ತಿ ಹೊಸ ನಾಯಕ ನಾಯಕಿಯನ್ನು ಆಯ್ಕೆ ಮಾಡಿಕೊಂಡು ತಮಗೇನು ಇಷ್ಟವೋ, ಹೇಗೆ ಇಷ್ಟವೋ, ಯಾವುದು ಇಷ್ಟವೋ ಹಾಗೆ ಸಿನಿಮಾ ಮಾಡಿದ್ದಾರೆ.. ನಿರ್ದೇಶಕ ಅಂದ್ರೆ ಯಾರು? ಬೆಳ್ಳಿತೆರೆಯ ಮೇಲೆ ಕಥೆ ಹೇಳೋನು.. ಈಗ ನೋಡಿ ಹೇಗೆ ಕಥೆ ಹೇಳ್ತೀನಿ ಅಂತ, ಅಂತ ಅಂದುಕೊಂಡೇ ಸೂರಿ ”ಕೆಂಡಸಂಪಿಗೆ” ನಿರ್ದೇಶಿಸಿದ್ದಾರೆ.. ನಿರ್ದೇಶಕನ ಕಥೆ ಹೇಳುವ ಸುಖವನ್ನು ಅನುಭವಿಸುವ ಸಲುವಾಗಿ ”ಕೆಂಡಸಂಪಿಗೆ” ಹೆಣೆದಿದ್ದಾರೆ ಅವರು.

ಕೆಂಡಸಂಪಿಗೆ ಚಿತ್ರದ ಪೋಸ್ಟರ್ ಮತ್ತು ಟೀಸರ್ ಗಳನ್ನು ನೋಡಿ ಗೆಸ್ ಮಾಡಬಹುದಾದರೂ ಏನು? ಇದೊಂದು ಸಮಾಜದ ವಿಕಾರಗಳ ಮಧ್ಯೆ ನಲುಗುವ ಪ್ರೇಮಿಗಳ .ಕಥೆ? ದುರಂತ ಪ್ರೇಮಿಗಳ ಕಥೆ? ಇಲ್ಲಾ ಕ್ರೈಮ್ ಥ್ರಿಲ್ಲರ್.. ಶುಕ್ರವಾರ ಗೊತ್ತಾಗುತ್ತದೆ. ಹೇಗೂ ನೋಡ್ತೀವಲ್ಲಾ.. ಜಯಂತ ಕಾಯ್ಕಿಣಿಯವರ ಅಲೌಕಿಕ ಸಾಲುಗಳು, ಹರಿಕೃಷ್ಣರ ಇಂಪಾದ ಹಾಡುಗಳು, ಸತ್ಯಹೆಗಡೆ ಕ್ಯಾಮೆರಾ ಕೆತ್ತನೆಗಳು ಸೂರಿ ಕಥೆ ಹೇಳುವಿಕೆಯಲ್ಲಿ ಬೆರೆತು ಚಿತ್ರಪ್ರೇಮಿಯ ಮನಸ್ಸನ್ನು ಆವರಿಸಿಕೊಳ್ಳುವ ಆ ಘಟಿಸುವಿಕೆಗೆ ಇನ್ನು ಮೂರು ದಿನ ಬಾಕಿ ಇದೆ ನೋಡಿ..

RESPONSIVE LEADERBOARD AD AREA
RESPONSIVE LEADERBOARD AD AREA
To Top